ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ (Valmiki Development Corporation) 187 ಕೋಟಿ ರೂ. ಹಗರಣದ ಪ್ರಕರಣದಲ್ಲಿ ಸಿಲುಕಿರುವ ನಿಗಮದ ಅಧ್ಯಕ್ಷ, ಶಾಸಕ ಬಸನಗೌಡ ದದ್ದಲ್ (Basanagouda Daddal) ಇಂದು ವಿಧಾನಸಭಾ ಕಲಾಪಕ್ಕೆ ಹಾಜರಾಗಿದ್ದಾರೆ.
ಎರಡು ದಿನಗಳಿಂದ ನಾಪತ್ತೆ ಆಗಿದ್ದಾರೆ ಎನ್ನಲಾಗಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಬಸನಗೌಡ ದದ್ದಲ್ ಇವತ್ತು ಪ್ರತ್ಯಕ್ಷರಾಗಿದ್ದಾರೆ. ದಿಢೀರ್ ಆಗಿ ವಿಧಾನಸೌಧದ ಕೆಂಗಲ್ ಗೇಟ್ ಬಳಿ ಕಾಣಿಸಿಕೊಂಡ್ರು. ವಿಧಾನಸಭೆ ಅಧಿವೇಶನದಲ್ಲಿ ಭಾಗವಹಿಸಲು ಆಗಮಿಸಿದ ದದ್ದಲ್ ಅವರನ್ನ ಪ್ರಶ್ನಿಸಿದಾಗ ಹೆಚ್ಚು ಮಾತನಾಡಲಿಲ್ಲ. ನಾನು ಅಧಿವೇಶನದಲ್ಲಿ ಭಾಗವಹಿಸಲು ಬಂದಿದ್ದೇನೆ. ನನಗೆ ಇಡಿ, ಎಸ್ ಐಟಿ ನೋಟೀಸ್ ನೀಡಿಲ್ಲ, ವಿಚಾರಣೆ ಆಗಿದೆ. ಹೆಚ್ಚೇನೂ ಹೇಳಲ್ಲ ಎಂದರು.
ಬಳಿಕ ವಿಧಾನಸಭೆಯ ಮೊಗಸಾಲೆಯಲ್ಲಿ ಸಿಎಂ ಕೊಠಡಿಯಲ್ಲಿ ಸಿದ್ದರಾಮಯ್ಯ (Siddaramaiah) ಅವರನ್ನ ಭೇಟಿ ಮಾಡಿದ ದದ್ದಲ್, ನಾನು ಪ್ರಕರಣದಲ್ಲಿ ಭಾಗಿಯಾಗಿಲ್ಲ, ಇಡಿಯವರು ದಾಳಿ ಮಾಡಿದ್ರು. ಇಡಿ,ಎಸ್ ಐಟಿ ಮುಂದೆ ವಿವರಣೆ ನೀಡಿದ್ದೇನೆ ಅಂತಾ ಸಮಜಾಯಿಷಿ ನೀಡಿದ್ರು. ನಂತರ ಸಿಎಂ ಕೊಠಡಿಯಿಂದ ನೇರವಾಗಿ ವಿಧಾನಸಭೆ ಪ್ರವೇಶಿಸಿ ಕಲಾಪದಲ್ಲಿ ಭಾಗವಹಿಸಿದ್ರು. ಇದನ್ನೂ ಓದಿ: ಬಸ್ ಟಿಕೆಟ್ ದರ ಏರಿಕೆ ಸದ್ಯಕ್ಕಿಲ್ಲ : ರಾಮಲಿಂಗಾ ರೆಡ್ಡಿ
ಕಲಾಪ ನಡೆಯವ ವೇಳೆ ಶಾಸಕರ ಬಂಧನ ಮಾಡುವಂತಿಲ್ಲ. ಆದರೆ ವಿಚಾರಣೆ ಎದುರಿಸಲು ಹೋದಾಗ, ಹೊರಗೆ ಇದ್ದಾಗ ತನಿಖಾ ಸಂಸ್ಥೆಗಳು ಬಂಧಿಸುವಾಗ ಸ್ಪೀಕರ್ ಗಮನಕ್ಕೆ ತರಬೇಕು ಎಂಬ ನಿಯಮ ಇದೆ. ಆದರೆ ಅನುಮತಿ ಅಗತ್ಯತೆ ಇಲ್ಲ ಎಂಬುದು ವಿಧಾನಸಭೆ ನಡಾವಳಿಗಳಲ್ಲಿ ಇದೆ. ಹಾಗಾಗಿ ಅಗತ್ಯ ಬಿದ್ದರೆ ಇಡಿಯಿಂದಲೇ ಬಸನಗೌಡ ದದ್ದಲ್ ಬಂಧನವಾಗ್ತಾರಾ? ವಿಧಾನಸಭೆ ಅಧಿವೇಶನದ ಶೆಲ್ಟರ್ ಪಡೆದು ಸದ್ಯಕ್ಕಷ್ಟೇ ಬೀಸೋ ದೊಣ್ಣೆಯಿಂದ ಪಾರಾಗ್ತಾರಾ ಕಾದುನೋಡಬೇಕಿದೆ.