ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ದರೋಡೆಕೋರರ ನಾಯಕ ಎಂದು ಬಿಜೆಪಿ (BJP) ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ವಾಲ್ಮೀಕಿ ನಿಗಮದ ಭ್ರಷ್ಟಾಚಾರದಲ್ಲಿ (Valmiki Development Corporation Scam) ಮಂತ್ರಿಗಳ ಪಾತ್ರ ಇದೆ ಎಂದು ಚಂದ್ರಶೇಖರನ್ ಡೆತ್ ನೋಟ್ ನಲ್ಲಿ ಬರೆದಿತ್ತು. ಆದರೂ ಇಷ್ಟು ತಡವಾಗಿ ರಾಜೀನಾಮೆ ತೀರ್ಮಾನ ಮಾಡಿದ್ದಾರೆ. ಕೈ ಹುಣ್ಣಿಗೆ ಕನ್ನಡಿ ಬೇಕಾ? ಚಂದ್ರಶೇಖರನ್ ಆತ್ಮಹತ್ಯೆ ಆದ ಕೂಡಲೇ ರಾಜೀನಾಮೆ ಪಡೆಯಬೇಕಿತ್ತು. ಕೇಸ್ ಮುಚ್ಚಿ ಹಾಕಲು ರಾಜೀನಾಮೆ ಪಡೆಯಲಿಲ್ಲ ಎಂದು ಅವರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸರ್ಕಾರಕ್ಕೆ ಮುಜುಗರ ಆಗಬಾರದೆಂದು ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ: ಡಿಕೆಶಿ
ಬಿಜೆಪಿ ಈ ಹಗರಣದ ವಿರುದ್ಧ ಹೋರಾಟ ಮಾಡಿತ್ತು. ರಾಜ್ಯಪಾಲರ ಭೇಟಿ ಮಾಡಿ ಹಗರಣದ ವಿರುದ್ಧ ದೂರು ನೀಡಿದ್ದೇವೆ. ಈಗ ನಾಗೇಂದ್ರ ಅವರ ರಾಜೀನಾಮೆ ಪಡೆದಿದ್ದಾರೆ. ಸಚಿವರ ರಾಜೀನಾಮೆ ಮಾತ್ರ ಸಾಲದು, ಸಿಎಂ ಸಹ ರಾಜೀನಾಮೆ ಕೊಡಬೇಕು. ಇದೊಂದು ಹಗಲು ದರೋಡೆ. ಸಿಎಂ ಅನುಮತಿ ಇಲ್ಲದೆ ಇಷ್ಟು ಹಣ ಹೊರಗೆ ಹೋಗಿಲ್ಲ. ಇದು ಒಂದು ಇಲಾಖೆಯ ಭ್ರಷ್ಟಾಚಾರ ಅಲ್ಲ. ಬೇರೆ ಬೇರೆ ಇಲಾಖೆಯ ನಿಗಮದಲ್ಲೂ ಭ್ರಷ್ಟಾಚಾರ ಆಗಿದೆ. ಇದನ್ನ ನಮ್ಮ ನಾಯಕರು ಪತ್ತೆ ಹಚ್ಚುತ್ತಿದ್ದಾರೆ ಎಂದರು.
ಎಸ್‍ಟಿ ನಿಗಮದ ಹಣ ಅ ಸಮುದಾಯಕ್ಕಾಗಿ ಬಳಸುವ ಹಣ. ಆ ಸಮುದಾಯದ ಮಂತ್ರಿಯನ್ನು ಬಳಕೆ ಮಾಡಿಕೊಂಡು ಭ್ರಷ್ಟಾಚಾರ ಮಾಡಿದ್ದೀರಿ. ದಲಿತರಿಗೆ ಅನ್ಯಾಯ ಮಾಡೋಕೆ ಮಹಾದೇವಪ್ಪ ಅವರನ್ನು ಮಂತ್ರಿ ಮಾಡಿ ಭ್ರಷ್ಟಾಚಾರ ಮಾಡಿಸಿದ್ದಾರೆ. ಸಿದ್ದರಾಮಯ್ಯ ದರೋಡೆಕೋರರ ನಾಯಕ. ಅವರು ನೇರವಾಗಿ ಭ್ರಷ್ಟಾಚಾರ ಮಾಡುವುದಿಲ್ಲ. ಬೇರೆಯವರಿಂದ ಭ್ರಷ್ಟಾಚಾರ ಮಾಡಿಸುತ್ತಾರೆ. ಭೂಗತ ಡಾನ್‍ಗಳು ಮಾಡುವ ತರಹ ಚೇರ್‍ನಲ್ಲಿ ಕುಳಿತು ಭ್ರಷ್ಟಾಚಾರ ಮಾಡಿಸುತ್ತಾರೆ ಎಂದು ಅವರು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ರೂ. ಹಗರಣಕ್ಕೆ ತಲೆದಂಡ – ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ