ಬೆಂಗಳೂರು: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದಲ್ಲಿ (Valmiki Development Corporation Scam) ಸಿಎಂ ಸಿದ್ದರಾಮಯ್ಯ (Siddaramaiah), ಸಚಿವ ನಾಗೇಂದ್ರ (B.Nagendra) ರಾಜೀನಾಮೆ ಕೊಡಬೇಕು. ಅಷ್ಟೇ ಅಲ್ಲದೇ ಭ್ರಷ್ಟ ಸರ್ಕಾರವನ್ನು ವಜಾ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಅಶೋಕ್ ನೇತೃತ್ವದಲ್ಲಿ ಶಾಸಕರನ್ನು ಒಳಗೊಂಡ ನಿಯೋಗ ರಾಜ್ಯಪಾಲರಿಗೆ ಮನವಿ ಮಾಡಿದೆ.
ರಾಜ್ಯಪಾಲರಿಗೆ ದೂರು ನೀಡಿದ ಬಳಿಕ ಮಾತನಾಡಿದ ವಿಜಯೇಂದ್ರ, ರಾಜ್ಯದಲ್ಲಿ ದೊಡ್ಡ ಹಗರಣ ನಡೆದಿದೆ. ವಾಲ್ಮೀಕಿ ನಿಗಮದ ಹಣ ಹೈದರಾಬಾದ್‍ನಲ್ಲಿ ಫೇಕ್ ಅಕೌಂಟ್ ತೆಗೆದು ವರ್ಗಾವಣೆ ಮಾಡಲಾಗಿದೆ. ಇದೊಂದು ದೊಡ್ಡ ಅಕ್ರಮ. ಹಣಕಾಸು ಇಲಾಖೆ ಅನುಮತಿ ಇಲ್ಲದೆ ಇದು ಆಗಲು ಸಾಧ್ಯವಿಲ್ಲ. ಸಿಎಂ ಗಮನಕ್ಕೆ ಬಾರದೇ ಈ ಹಗರಣ ನಡೆದಿಲ್ಲ. ಹೀಗಾಗಿ ಸಿಎಂ ರಾಜೀನಾಮೆ ಪಡೆಯಬೇಕು ಎಂದು ರಾಜ್ಯಪಾಲರಿಗೆ ತಿಳಿಸಿದ್ದೇವೆ ಎಂದರು. ಇದನ್ನೂ ಓದಿ: ನಾನು ನಿರಪರಾಧಿ, ಸ್ವಯಂಪ್ರೇರಿತನಾಗಿ ರಾಜೀನಾಮೆ ಸಲ್ಲಿಸುತ್ತಿದ್ದೇನೆ: ನಾಗೇಂದ್ರ
Advertisement
ಸಚಿವರ ರಾಜೀನಾಮೆ ಮಾತ್ರ ಅಲ್ಲ ಸಿಎಂ ರಾಜೀನಾಮೆ ಕೊಡಬೇಕು. ರಾಜ್ಯದಲ್ಲಿ ಇಂತಹ ದೊಡ್ಡ ಹಗರಣ ನಡೆದಿಲ್ಲ. ಸಿಎಂ, ಸಚಿವರು ಇಬ್ಬರ ರಾಜೀನಾಮೆ ಪಡೆಯಬೇಕು ಎಂದು ರಾಜ್ಯಪಾಲನ್ನು ಒತ್ತಾಯಿಸಿದ್ದೇವೆ ಎಂದರು.
Advertisement
Advertisement
ಬಿಜೆಪಿಯವರು ಪ್ರತಿಭಟನೆ ಮಾಡಿಕೊಳ್ಳಲಿ ಎಂಬ ಸಿಎಂ ಹೇಳಿಕೆಗೆ ತಿರುಗೇಟು ಕೊಟ್ಟ ಅವರು, ಸಿಎಂ ಹೀಗೆ ಉಡಾಫೆ ಮಾತಾಡಿ ಹೀಗೆ ಆಗಿದೆ. ಗ್ಯಾರಂಟಿ 20 ಸ್ಥಾನ ಗೆಲ್ತೀವಿ ಎಂದು ಹೇಳಿ ಜನ ಈ ಮಟ್ಟಕ್ಕೆ ನಿಮ್ಮನ್ನ ತಂದಿದ್ದಾರೆ. ಎಸ್‍ಟಿ ಸಮುದಾಯಕ್ಕೆ ಮೀಸಲಿದ್ದ ಹಣ ಅಕ್ರಮವಾಗಿದೆ. ಈ ಬಗ್ಗೆ ಸಿಎಂ ಹಾರಿಕೆ ಉತ್ತರ ಕೊಡೋದು ಸರಿಯಲ್ಲ. ಅವರು ಆನೆ ನಡೆದಿದ್ದೇ ದಾರಿ ಅಂದುಕೊಳ್ಳಬಾರದು. ಇದನ್ನ ನಾವು ಇಲ್ಲಿಗೆ ಬಿಡೋದಿಲ್ಲ. ರಾಜ್ಯಾದ್ಯಂತ ದೊಡ್ಡ ಹೋರಾಟ ಮಾಡುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.
Advertisement
ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ವಾಲ್ಮೀಕಿ ನಿಗಮದ ಬ್ರಹ್ಮಾಂಡದ ಭ್ರಷ್ಟಾಚಾರವಾಗಿದೆ. ಎಸ್‍ಟಿ ಸಮುದಾಯಕ್ಕೆ ಮೀಸಲಿದ್ದ ಹಣ ಇವತ್ತು ಸಿದ್ದರಾಮಯ್ಯ ಜೇಬಿಗೆ ಹೋಗಿದೆ. ಇಂತಹ ನೀಚ ಸರ್ಕಾರ ಯಾವತ್ತು ಬಂದಿಲ್ಲ. ಎಸ್‍ಟಿ ಜನಾಂಗಕ್ಕೆ ಸೇರಬೇಕಾದ ಹಣ ನುಂಗುತ್ತಾರೆ ಎಂದರೆ ಇಂತಹ ಸರ್ಕಾರ ಕರ್ನಾಟಕದ ಪಾಲಿಗೆ ಸತ್ತು ಹೋಗಿದೆ. ಚುನಾವಣೆಗಾಗಿ ಈ ಹಣ ಹೈದರಾಬಾದ್‍ಗೆ ಹೋಗಿದೆ. ಇದೆಲ್ಲ ಪ್ರೀ ಪ್ಲ್ಯಾನ್. ರಾಹುಲ್ ಗಾಂಧಿಯಿಂದಲೇ ಈ ಹಗರಣ ಆಗಿದೆ ಎಂದು ಅವರು ಆರೋಪಿಸಿದ್ದಾರೆ.
ಸಿದ್ದರಾಮಯ್ಯ ಮೂಗಿನ ಅಡಿ ಈ ಅಕ್ರಮ ನಡೆದಿದೆ. ನಿಮ್ಮ ಅನುಮತಿ ಇಲ್ಲದೆ ಹಣ ಹೇಗೆ ಹೋಯ್ತು? ಈ ಅಕ್ರಮದಿಂದ ನಾಗೇಂದ್ರಗೆ ಮಾತ್ರ ಕಮಿಷನ್ ಹೋಗಿಲ್ಲ. ನಾಗೇಂದ್ರ 20% ಸಿದ್ದರಾಮಯ್ಯಗೆ 80% ಶೇರ್ ಹೋಗಿದೆ. ಕಾಂಗ್ರೆಸ್ ಒಂದು ವರ್ಷದ ಸಾಧನೆ ಗ್ಯಾರಂಟಿ ಲೂಟಿ, ದೇಶವೇ ಮೆಚ್ಚುವ ಲೂಟಿ ಗ್ಯಾರಂಟಿ ಇವರದ್ದು. ಪಿಕ್ ಪಾಕೆಟ್ ಮಾಡೋದು ಇವರ ಸಾಧನೆ. ಕಾಂಗ್ರೆಸ್ ಎಂದರೆ ಲೂಟಿಕೋರರ ಪಾರ್ಟಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಪ್ರಕರಣ ಮುಚ್ಚಿ ಹಾಕಲು ಸಿಐಡಿಗೆ ಕೊಟ್ಟಿದ್ರು. ಸಿಬಿಐಗೆ ಬ್ಯಾಂಕ್‍ಗೆ ಪತ್ರ ಬರೆದ ಕೂಡಲೇ ಎಸ್‍ಐಟಿ ರಚನೆ ಮಾಡಿದ್ದಾರೆ. ಎಸ್‍ಐಟಿಗೆ ಕೊಟ್ಟರೆ ಸಿಬಿಐಗೆ ಕೇಸ್ ತೆಗೆದುಕೊಳ್ಳಲು ಆಗೊಲ್ಲ ಎಂಬ ತಂತ್ರ ಮಾಡಿದ್ರು. ಈಗಾಗಲೇ ಸಿಬಿಐ ಎಫ್‍ಐಆರ್ ಹಾಕಿದೆ. ಕರ್ನಾಟಕ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಸಿಬಿಐಗೆ ಒಪ್ಪಿಸಿ. ಇಲ್ಲದೆ ಹೋದರೆ ಇದರಲ್ಲಿ ನಿಮ್ಮ ಪಾತ್ರ ಇದೆ ಎಂದಾಗುತ್ತದೆ. ಇದು ಟಕಾ ಟಕ್ ಎಟಿಎಂ ಸರ್ಕಾರ ಇದು ಅಂತ ವಾಗ್ದಾಳಿ ನಡೆಸಿದ್ದಾರೆ.
ಇದೊಂದೆ ನಿಗಮ ಅಲ್ಲ, ಅನೇಕ ನಿಗಮಗಳಲ್ಲಿ ಹಣ ವರ್ಗಾವಣೆ ಆಗಿದೆ. ಎಲ್ಲೆಲ್ಲಿಗೆ ಹಣ ಸಾಗಿಸಿದ್ದಾರೆ ತನಿಖೆ ಆಗಬೇಕು. ಹೈದರಾಬಾದ್ ಕಂಪನಿಗಳಿಗೆ ಹೇಗೆ ಹಣ ಹೋಯ್ತು? ಇದಕ್ಕೆ ಸಿಎಂ ಉತ್ತರ ಕೊಡಬೇಕು. ಹೈದರಾಬಾದ್ ನಕಲಿ ಅಕೌಂಟ್‍ಗೆ ಹೋಗಲು ಸಚಿವರ ಪಿಎ ಕಾರಣ ಎಂದು ಹೇಳ್ತಿದ್ದಾರೆ. ಮಾನ ಮರ್ಯಾದೆ ಇದ್ದರೆ ಸಿಎಂ ರಾಜೀನಾಮೆ ಕೊಡಬೇಕು. ಈ ವಿಚಾರವಾಗಿ ಮುಂದೆ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಹಾಗೂ ಸಿಎಂ ಮನೆಗೆ ಮುತ್ತಿಗೆ ಹಾಕುತ್ತೇವೆ. ಇದಕ್ಕೂ ಬಗ್ಗದೇ ಹೋದರೆ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣೆ; ಮೈತ್ರಿ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ಭರ್ಜರಿ ಗೆಲುವು