ಚಾರಣಪ್ರಿಯರಿಗೆ ಅದ್ಭುತ ಪ್ರವಾಸಿ ತಾಣ ʼವ್ಯಾಲಿ ಆಫ್‌ ಫ್ಲವರ್ಸ್‌ʼ

Public TV
4 Min Read
ValleyOf Flowers

ಮುಂಗಾರು ಮಳೆಯ (Rain) ವೇಳೆ ಚಳಿ ಅಂತ ಕೆಲವರು ಬೆಚ್ಚಗೆ ಮನೆಯಲ್ಲಿ ಕೂತರೇ ಇನ್ನೂ ಕೆಲವರು ಪ್ರವಾಸ, ಟ್ರಕ್ಕಿಂಗ್‌ ಅಂತ ಹೊರಡುತ್ತಾರೆ. ಅದರಲ್ಲೂ ಜಿಟಿಜಿಟಿ ಮಳೆಯ ನಡುವೆ ಟ್ರಕ್ಕಿಂಗ್‌ ಹೋಗೋದು ಸುಲಭದ ಮಾತಲ್ಲ. ಆದರೆ ಅದರಲ್ಲೂ ಒಂಥರಾ ಖುಷಿ ಸಿಗುತ್ತದೆ. ಮಳೆಯ ನಡುವೆ ಹಚ್ಚಹಸಿರಾಗಿರುವ ಪರಿಸರದ ರಮಣೀಯ ದೃಶ್ಯಗಳು ಮನಸ್ಸಿಗೆ ಮುದ ನೀಡುತ್ತವೆ. ಇದೀಗ ಜೂನ್‌1ರಿಂದ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಿಕೊಂಡಿರುವ ʼವ್ಯಾಲಿ ಆಫ್‌ ಫ್ಲವರ್ಸ್‌ʼ ತೆರೆದಿದ್ದು, ಪರಿಸರ ಪ್ರೇಮಿಗಳು ಹಾಗೂ ಚಾರಣ ಪ್ರಿಯರು ತೆರಳಲು ಇದು ಉತ್ತಮ ಸಮಯವಾಗಿದೆ. ಹಾಗಿದ್ರೆ ಎಲ್ಲಿದೆ ಈ ʼವ್ಯಾಲಿ ಆಫ್‌ ಫ್ಲವರ್ಸ್‌ʼ? ತೆರಳೋದು ಹೇಗೆ? ಅಲ್ಲಿನ ವಿಶೇಷತೆಗಳೇನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ʼವ್ಯಾಲಿ ಆಫ್‌ ಫ್ಲವರ್ಸ್‌ʼ ಎಲ್ಲಿದೆ?
ಉತ್ತರಾಖಂಡದ (Uttarakhand) ಚಮೋಲಿ (Chamoli) ಜಿಲ್ಲೆಯಲ್ಲಿರುವ ʼವ್ಯಾಲಿ ಆಫ್‌ ಫ್ಲವರ್ಸ್ʼ (Valley Of Flowers) ನ್ಯಾಷನಲ್ ಪಾರ್ಕ್, ಉತ್ತರಾಖಂಡ್ ರಾಜ್ಯದ ಸ್ಥಳೀಯ ಆಲ್ಪೈನ್ ಹೂಗಳು ಮತ್ತು ಹುಲ್ಲುಗಾವಲು ಪ್ರದೇಶಗಳಿಂದ ಕೂಡಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಈ ಸುಂದರ ಪ್ರವಾಸಿ ತಾಣ ಮೋನಾಲ್ ಫೆಸೆಂಟ್ ಬರ್ಡ್ಸ್ ಸೇರಿದಂತೆ ಹಲವು ಎತ್ತರದ ಪಕ್ಷಿಗಳ ತವರೂರಾಗಿದೆ. ʼವ್ಯಾಲಿ ಆಫ್‌ ಫ್ಲವರ್ಸ್‌ʼ ಸಮುದ್ರ ಮಟ್ಟದಿಂದ 3,352 ಮೀಟರ್‌ ಎತ್ತರದಲ್ಲಿದೆ.

ಟ್ರಕ್ಕಿಂಗ್‌ಗೆ ತೆರಳುವ ಪ್ರದೇಶಗಳೆಲ್ಲಾ ಹೂವುಗಳಿಂದ ಆವೃತ್ತ ಆಗಿರುತ್ತೆ. ಅತ್ಯಂತ ಆಕರ್ಷಣೀಯ ಆಗಿರುತ್ತದೆ. ಪ್ರಕೃತಿಯ ಸೊಬಗಿಗೆ ಮತ್ತಷ್ಟು ಅಂದವನ್ನು ಈ ಹೂವಿನ ರಾಶಿ ನೀಡುತ್ತದೆ. ಉತ್ತರಾಖಂಡದ‌‌ ಈ ಹೂವಿನ ಕಣಿವೆಯಲ್ಲಿ 300 ಬಗೆಯ ಹೂಗಳು ಬೆಳೆಯುತ್ತವೆ. ಇವುಗಳಿಂದ ಉತ್ತರಾಖಂಡದ ಈ ಅರಣ್ಯ ಪ್ರದೇಶದ ಹಸಿರಿಗೆ ಮತ್ತಷ್ಟು ಮೆರಗು ಮೂಡಿದೆ. ಅದ್ರಲ್ಲೂ ಜೂನ್‌ನಿಂದ ಅಕ್ಟೋಬರ್ ಕಾಲಘಟ್ಟದಲ್ಲಿ ಹೂಗಳು ಅರಳುತ್ತವೆ. ಈ ಸಮಯದಲ್ಲಿ ಚಾರಣದ ಅನುಭವವೇ ರೋಮಾಂಚಕವಾಗಿ ಇರುತ್ತದೆ.

Valley Of Flowers

ಹೂವಿನ ಚಪ್ಪರದಂತೆ ಕಾಣುವ ಬೆಟ್ಟಗಳ ಈ ಕಣಿವೆಗೆ ಪ್ರತಿ ವರ್ಷ ಸಾವಿರಾರು ಪ್ರವಾಸಿಗರು ಹೋಗುತ್ತಾರೆ.. ಉತ್ತರಾಖಂಡದ ಈ ಹೂವಿನ ಕಣಿವೆಗೆ ನೀವೇನಾದರೂ ಚಾರಣ ಹೋಗಬೇಕು ಅಂತಾ ಅಂದುಕೊಂಡಿದ್ದರೆ ಈ ವಿಷಯಗಳನ್ನ ತಿಳಿದುಕೊಂಡಿರಬೇಕು.

ಯುನೆಸ್ಕೋ ಪಾರಂಪರಿಕ ತಾಣ:
ಈ ಉತ್ತರಾಖಂಡದ ಹೂವಿನ ಕಣಿವೆ ಪ್ರದೇಶವು ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಯಲ್ಲಿದೆ. 2005ರಲ್ಲೇ ಈ ಪ್ರದೇಶವನ್ನು ಯುನೆಸ್ಕೋ ಪಟ್ಟಿಗೆ ಸೇರಿಸಿ ಘೋಷಣೆ ಪ್ರಕಟಿಸಲಾಗಿದೆ.

ಅತ್ಯಂತ ಹೆಚ್ಚು ಜೀವವೈವಿಧ್ಯತೆ:
ಮತ್ತೊಂದು ವಿಚಾರ ಏನಂದರೆ ಹೂಗಳ ಸೊಬಗಿನಿಂದ ಕೂಡಿರುವ ಈ ಅರಣ್ಯ ಪ್ರದೇಶದಲ್ಲಿ ಜೀವ ವೈವಿಧ್ಯತೆ ಉತ್ತಮ ರೀತಿಯಾಗಿ ಇರುತ್ತದೆ. ಹೂಗಳ ರಾಶಿ ಇರುವಂತಹ ಈ ಕಣಿವೆಯಲ್ಲಿ ಅತ್ಯಂತ ಅಪರೂಪದ ಜೀವಿಗಳು ಕೂಡ ವಾಸ ಮಾಡುತ್ತವೆ. ಅದ್ರಲ್ಲೂ ಏಷ್ಯಾದ ಕರಡಿ, ಹಿಮ ಚಿರತೆ, ಹಿಮ ಮೇಕೆಯಂತಹ ಪ್ರಾಣಿಗಳು ಹೆಚ್ಚಾಗಿ ಇರುತ್ತವೆ.

ಆಧ್ಯಾತ್ಮಿಕ ತಾಣಗಳು
ಹೂವುಗಳಿಂದ ಆವೃತವಾಗಿರುವ ಈ ಕಣಿವೆ, ಆಧ್ಯಾತ್ಮಿಕ ಮತ್ತು ಧಾರ್ಮಿಕ ತಾಣಗಳಿಂದ ಕೂಡಿದೆ. ಪ್ರಶಾಂತತೆಗೆ ಖ್ಯಾತಿ ಪಡೆದಿದೆ. ಧ್ಯಾನಕ್ಕೆ, ಮನಶಾಂತಿಗೆ ಸೂಕ್ತ ಜಾಗಗಳಾಗಿ ಇರುತ್ತವೆ. ಹೇಮಕುಂಡ್ ಸಾಹೇಬ್ ಗುರುಧ್ವಾರ ಪ್ರದೇಶವೂ ಈ ಕಣಿವೆ ವ್ಯಾಪ್ತಿಯಲ್ಲಿದೆ. ಪ್ರತಿ ವರ್ಷ ಸಾವಿರಾರು ಭಕ್ತರು ಈ ಹೇಮಕುಂಡ್ ಸಾಹೇಬ್‌ಗೆ ಭೇಟಿ ನೀಡುತ್ತಾರೆ. ಆಧ್ಯಾತ್ಮಿಕ ಪ್ರವಾಸದ ದೃಷ್ಟಿಯಿಂದ ಸಾವಿರಾರು ಜನರನ್ನ ಈ ಪ್ರದೇಶವೂ ತನ್ನತ್ತ ಸೆಳೆಯುತ್ತದೆ.

Valley Of Flowers 1

ಹೂವುಗಳಿಂದ ಹೆಚ್ಚಾಗಿ ಅವೃತವಾಗಿರುವ ಈ ಪ್ರದೇಶದಲ್ಲಿ ಚಾರಣಕ್ಕೂ ಕೂಡ ಸಾಹಸಮಯ ಆಗಿರುತ್ತದೆ. ಇವು ಕೆಲವೊಂದು ವಿಶಾಲವಾಗಿಯೂ ಮತ್ತೆ ಕೆಲವೆಡೆ ಕಡಿದಾದ ಪ್ರದೇಶಗಳಿಂದ ಕೂಡಿರುತ್ತದೆ. ಗೋವಿಂದಘಾಟ್ ಪ್ರದೇಶವೇ ಇದಕ್ಕೆ ಉತ್ತಮ ನಿದರ್ಶನ. ಸುಮಾರು 17 ಕಿಲೋ ಮೀಟರ್ ಹಾದಿಯ ಈ ಚಾರಣವೂ, ಅತ್ಯಂತ ಸಾಹಸಮಯವಾಗಿರುತ್ತದೆ, ಹೂವಿನ ದಾರಿಯು ದುರ್ಗಮವಾಗಿರುತ್ತದೆ.

ಭೇಟಿಗೆ ಯಾವ ಸಮಯ ಉತ್ತಮ?
ಜೂನ್‌ನಿಂದ ಅಕ್ಟೋಬರ್‌ವರೆಗೆ ಬೇಸಿಗೆಯ ತಿಂಗಳುಗಳಲ್ಲಿ ಮಾತ್ರ ಸಂದರ್ಶಕರಿಗೆ ತೆರೆದಿರುತ್ತದೆ. ಏಕೆಂದರೆ ವರ್ಷದ ಉಳಿದ ಭಾಗಗಳಲ್ಲಿ ಭಾರೀ ಹಿಮವು ಆವರಿಸುತ್ತದೆ.

5 ರಿಂದ 12 ವರ್ಷದೊಳಗಿನ ಮಕ್ಕಳಿಗೆ ತಲಾ 25 ರೂ. ಮತ್ತು 12 ವರ್ಷಕ್ಕಿಂತ ಮೇಲ್ಪಟ್ಟವರಿಗೆ ತಲಾ 35 ರೂ. ಪ್ರವೇಶ ಶುಲ್ಕವಿರುತ್ತ ದೆ.ಮಂಗಳವಾರದಿಂದ ಭಾನುವಾರದವರೆಗೆ ಬೆಳಗ್ಗೆ 6ರಿಂದ ಮಧ್ಯಾಹ್ನ12 ಗಂಟೆಯವರೆಗೆ ಹಾಗೂ ಮಧ್ಯಾಹ್ನ 3ರಿಂದ ರಾತ್ರಿ 9ಗಂಟೆಯವರೆಗೆ ತೆರೆದಿರುತ್ತದೆ. ಸೋಮವಾರ ಉದ್ಯಾನವನ ಮುಚ್ಚಿರುತ್ತದೆ.

ವ್ಯಾಲಿ ಆಫ್ ಫ್ಲವರ್ಸ್ ಪ್ರಸಿದ್ಧ ಏಕೆ?
-600 ಕ್ಕೂ ಹೆಚ್ಚು ಹೂಬಿಡುವ ಪ್ರಭೇದಗಳು ಕಣಿವೆಯಲ್ಲಿ ವಾಸಿಸುತ್ತವೆ, ಇದರಲ್ಲಿ ಆಲ್ಪೈನ್ ಹೂವುಗಳು ಮತ್ತು ಉತ್ತರಾಖಂಡದ ರಾಜ್ಯದ ಹೂವು, ಬ್ರಹ್ಮಕಮಲ ಸೇರಿವೆ.
-ಚಿರತೆಗಳು, ಏಷ್ಯಾಟಿಕ್ ಕಪ್ಪು ಕರಡಿಗಳು, ಕಂದು ಕರಡಿಗಳು, ಕಸ್ತೂರಿ ಜಿಂಕೆಗಳು ಮತ್ತು ನೀಲಿ ಕುರಿಗಳಂತಹ ವೈವಿಧ್ಯಮಯ ಪ್ರಾಣಿ ಪ್ರಭೇದಗಳು ಕಾಣಸಿಗುತ್ತವೆ.
-ಪುಷ್ಪಾವತಿ ನದಿಯು ಹಿಮದಿಂದ ಆವೃತವಾದ ಪರ್ವತಗಳು, ಬಂಡೆಗಳು, ಹಿಮನದಿಗಳು, ಜಲಪಾತಗಳು ಮತ್ತು ರುದ್ರರಮಣೀಯ ದೃಶ್ಯಾವಳಿಗಳಿಂದ ಆವೃತವಾಗಿದೆ.
-ರಾಷ್ಟ್ರೀಯ ಉದ್ಯಾನವನ ಎಂದು ಪ್ರಸಿದ್ಧಿ ಪಡೆದಿದೆ.
-ಇಲ್ಲಿನ ಸೊಂಪಾದ ಕಾಡುಗಳು ಮತ್ತು ಶುದ್ಧ ಗಾಳಿಯು ಪ್ರವಾಸಿಗರಿಗೆ ಉಲ್ಲಾಸಕರ ಅನುಭವವನ್ನು ನೀಡುತ್ತದೆ ಮತ್ತು ಕಣ್ಣುಗಳನ್ನು ಆಕರ್ಷಿಸುತ್ತದೆ.

ತಲುಪುವುದು ಹೇಗೆ?
ರಸ್ತೆಯ ಮೂಲಕ: ಡೆಹ್ರಾಡೂನ್‌ನಿಂದ ಗೋವಿಂದಘಾಟ್‌ಗೆ ರಸ್ತೆಯ ಮೂಲಕ 300 ಕಿ.ಮೀ ಪ್ರಯಾಣ ಬೆಳೆಸಬೇಕು. ಡೆಹ್ರಾಡೂನ್‌ನಿಂದ ರಿಷಿಕೇಶವನ್ನು ತಲುಪಲು, ನೀವು ಖಾಸಗಿ ಅಥವಾ ಸಾರ್ವಜನಿಕ ಬಸ್ಸುಗಳನ್ನು ಆರಿಸಿಕೊಳ್ಳಬಹುದು. ರಿಷಿಕೇಶದಿಂದ ಗೋವಿಂದಘಾಟ್‌ ತಲುಪಲು ಕ್ಯಾಬ್ ಅನ್ನು ಬಾಡಿಗೆಗೆ ಪಡೆಯುವ ಆಯ್ಕೆಯಿರುತ್ತದೆ. ರಿಷಿಕೇಶ್‌ನಿಂದ ಕೈಗೆಟಕುವ ದರದಲ್ಲಿ ಜೀಪ್‌ಗಳು ಲಭ್ಯವಿವೆ. ಪರ್ಯಾಯವಾಗಿ, ಡೆಹ್ರಾಡೂನ್‌ನಿಂದ ಗೋವಿಂದಘಾಟ್‌ಗೆ ನೇರವಾಗಿ ಕ್ಯಾಬ್ ಅನ್ನು ಬಾಡಿಗೆಗೆ ಪಡೆಯುವ ಅನುಕೂಲವೂ ಇದೆ.

ವಿಮಾನದ ಮೂಲಕ: ಡೆಹ್ರಾಡೂನ್‌ಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಜಾಲಿ ಗ್ರಾಂಟ್ ವಿಮಾನ ನಿಲ್ದಾಣ. ವ್ಯಾಲಿ ಆಫ್ ಫ್ಲವರ್ಸ್‌ಗೆ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಲು, ನೀವು ಡೆಹ್ರಾಡೂನ್‌ನಿಂದ ರೈಲುಗಳು, ಬಸ್ಸುಗಳು ಅಥವಾ ಕ್ಯಾಬ್ ಬಾಡಿಗೆ ಸೇರಿದಂತೆ ವಿವಿಧ ಸಾರಿಗೆ ಆಯ್ಕೆ ಮಾಡಬಹುದು. ಈ ಮಾರ್ಗವು ಸಾಮಾನ್ಯವಾಗಿ ಮೊದಲು ರಿಷಿಕೇಶಕ್ಕೆ ಪ್ರಯಾಣಿಸುವುದನ್ನು ಒಳಗೊಂಡಿರುತ್ತದೆ. ಸುಮಾರು 270 ಕಿಮೀ ದೂರ ಕ್ರಮಿಸಿದ ಬಳಿಕ ನೀವು ಗೋವಿಂದ ಘಾಟ್‌ಗೆ ತಲುಪಬಹುದು. ಗೋವಿಂದ ಘಾಟ್‌ನಿಂದ ಚಾರಣ ಆರಂಭಗೊಳ್ಳುತ್ತದೆ.

Share This Article