ನೈಜ ಪ್ರೀತಿ ಅಂದ-ಚಂದ ನೋಡಿ ಹುಟ್ಟಲ್ಲ..

Public TV
2 Min Read
valentines day 1 1

ಗತ್ತಿನಲ್ಲಿ ಹಿಂದೆಯೂ ಇದ್ದ ಮುಂದೆಯೂ ಇರುವ ಸಾವೇ ಇರದ ಒಂದು ಪವಿತ್ರ ಭಾವ ಎಂದರೆ ಅದು ಪ್ರೀತಿ. ಒಬ್ಬ ವ್ಯಕ್ತಿಗೆ ಇನ್ನೊಬ್ಬ ವ್ಯಕ್ತಿ, ಪ್ರಾಣಿ, ನಿರ್ಜೀವ ವಸ್ತು ಯಾವುದರ ಮೇಲೆಯೂ ಪ್ರೀತಿ ಹುಟ್ಟಬಹುದು. ಪ್ರೀತಿ ತೋರ್ಪಡಿಕೆ ಅಲ್ಲ, ಅದು ಯಾವ ನಾಟಕವೂ ಅಲ್ಲ. ಅದು ಒಬ್ಬ ವ್ಯಕ್ತಿಯ ಮನಸ್ಸಿನಲ್ಲಿ ತನ್ನಿಂತಾನೆ ಹುಟ್ಟುವ, ತನ್ನಿಂತಾನೆ ಬೆಳೆಯುವ ಒಂದು ಸಾಮಾನ್ಯ ಪ್ರಕ್ರಿಯೆ. ಅದು ಸಾಯಲ್ಲ; ಸಲೀಂ-ಅನಾರ್ಕಲಿ, ರೋಮಿಯೋ-ಜೂಲಿಯೆಟ್ ಜೋಡಿಗಳೇ ಉದಾಹರಣೆ. ಅವರು ತಮ್ಮ ಜೀವವನ್ನೇ ಬಲಿಕೊಟ್ಟರೇ ವಿನಃ ಪ್ರೀತಿಯನ್ನು ಬಿಡಲಿಲ್ಲ. ಹಾಗಾಗಿ ಇಂದಿಗೂ ಅವರದ್ದು ಅಮರ ಪ್ರೇಮ ಎಂದೇ ಜಗಜ್ಜಾಹೀರು.

valentines day 2 1

“ಅವನ ಬಳಿ ಭಾರೀ ಹಣ ಇದೆ. ಹಾಗಾಗಿ ಹುಡುಗಿಯರು ಅವನ ಹಿಂದೆ ಹೋಗ್ತಾರೆ, ಅವನ ಆಸ್ತಿ ಅಂತಸ್ತಿನ ಮೇಲೆ ಹುಡುಗಿಯರಿಗೆ ಪ್ರೀತಿ ಹುಟ್ಟೋದು” ಎಂದೆಲ್ಲ ಜನ ಮಾತಾಡುತ್ತಾರೆ. ಅದು ಒಂದು ರೀತಿಯಲ್ಲಿ ಹೌದೆನಿಸಿದರೂ, ನೈಜ ಪ್ರೀತಿ ಯಾರ ಅಂದ-ಚಂದ ನೋಡಿ, ಆಸ್ತಿ-ಅಂತಸ್ತನ್ನು ನೋಡಿ ಬರುವುದಿಲ್ಲ. ಅದು ಪರಿಶುದ್ಧ ಭಾವನೆಗಳ ಒಂದು ಲೋಕ. ಪ್ರೇಮವು ಆತ್ಮಗಳ ನಡುವೆ ಒಂದು ಬಂಧವನ್ನು ಸೃಷ್ಟಿಸುತ್ತದೆ. ನಿಜವಾದ ಪ್ರೀತಿಯಲ್ಲಿ ನಂಬಿಕೆ ಹಾಗೂ ಆತ್ಮವಿಶ್ವಾಸವೇ ಮುಖ್ಯವಾಗಿರುತ್ತದೆ. ಒಬ್ಬರನ್ನೊಬ್ಬರು ಅರಿತುಕೊಂಡಾಗ, ಒಬ್ಬರಿನ್ನೊಬ್ಬರ ಸುಖ ದುಃಖಗಳಲ್ಲಿ ಒಂದಾದಾಗ, ಎಲ್ಲವನ್ನೂ ಸಮಾನವಾಗಿ ಹಂಚಿಕೊಂಡಾಗ ತಾವು ಪ್ರೀತಿಸುವವರನ್ನು ಬಿಟ್ಟುಕೊಡುವ ಪ್ರಮೇಯವೇ ಬರುವುದಿಲ್ಲ. ಇದನ್ನೂ ಓದಿ: ಅವನಿಗೆ ನಾನು ‘ಏಪ್ರಿಲ್ ಏಂಜಲ್’…

ಒಂದು ವೇಳೆ ತನ್ನ ಪ್ರೇಯಸಿ ಮುನಿಸಿಕೊಂಡರೂ, ತನ್ನ ಪ್ರೀತಿಯನ್ನು ಉಳಿಸಿಕೊಳ್ಳುವ ಸಲುವಾಗಿ, ಪ್ರಿಯಕರ ತನ್ನ ತಪ್ಪಿಲ್ಲದಿದ್ದರೂ ಕ್ಷಮೆಯನ್ನು ಕೇಳಲು ಮುಂದಾಗುತ್ತಾನೆ. ತಮ್ಮ ಪ್ರೀತಿಗೆ ಮನೆಯಲ್ಲಿ ವಿರೋಧ ವ್ಯಕ್ತವಾದಾಗ ಮನೆಯವರನ್ನು ಎದುರು ಹಾಕಿಕೊಂಡು, ಹೇಗಾದರೂ ಮಾಡಿ ತಮ್ಮ ಪ್ರೀತಿಯನ್ನು ಒಪ್ಪಿಸುವ ಪ್ರೇಮಿಗಳೂ ಇದ್ದಾರೆ. ಈ ಪ್ರೀತಿಯೇ ಹಾಗಲ್ಲವೇ. ಪ್ರೀತಿ ನಿಜವಾಗಿದ್ದಾಗ, ಆ ಪ್ರೀತಿಯೇ ಇದನ್ನೆಲ್ಲ ಮಾಡಿಸುತ್ತದೆ.!

valentines day 3 1

ಪ್ರೀತಿ ಯಾವತ್ತೂ ಎರಡೂ ಕಡೆಯಿಂದ ಸಮಾನವಾಗಿ ಬರುತ್ತೆ ಎಂತಿರಲ್ಲ. ವನ್ ಸೈಡೆಡ್ ಲವ್ ಸ್ಟೋರಿಗಳೂ ಇರುತ್ತವೆ. ಕೆಲವರು ತಾವು ಇಷ್ಟಪಟ್ಟವರನ್ನು ಹೇಗೆ ಒಲಿಸಿಕೊಳ್ಳುವುದು ಎಂಬ ಲೆಕ್ಕಾಚಾರದಲ್ಲಿ ಇದ್ದರೆ, ಇನ್ನೂ ಕೆಲವರು ತಾವು ಇಷ್ಟಪಡುವವರ ಪ್ರೇಮ ಪೂಜೆಗೆ ಅಣಿಯಾಗುತ್ತಾರೆ. ಸಾಮಾಜಿಕ ಮಾಧ್ಯಮಗಳಿಂದಾಗಿ ಇಂದು ಪ್ರೇಮಿಗಳ ದಿನ (Valentine’s Day) ಒಂದು ದಿನಕ್ಕೆ ಸೀಮಿತವಾಗಿಲ್ಲ. 24 ಗಂಟೆಯೂ ಪ್ರಿಯಕರ ಪ್ರೇಯಸಿಯ ಜೊತೆಗೆ ಸಂಪರ್ಕದಲ್ಲಿರುವುದರಿಂದ ಪ್ರತಿದಿನವೂ ಪ್ರೇಮಿಗಳ ದಿನವೇ! ಬಹುಶಃ ಹಾಗಾಗಿ ಇಂದು ಗ್ರೀಟಿಂಗ್ ಕಾರ್ಡ್, ಗುಲಾಬಿ ಎಲ್ಲ ಅಷ್ಟಕ್ಕಷ್ಟೆ ಎಂಬಂತಿದೆ. ಮುಂಚೆ ಅವುಗಳನ್ನು ನೀಡಿ ಪ್ರೇಮ ನಿವೇದನೆ ಮಾಡುತ್ತಿದ್ದರು. ಆದರಿಂದು ವಾಟ್ಸಾಪ್, ಇನ್‌ಸ್ಟಾಗ್ರಾಂ ಚಾಟಿಂಗ್ ಮೂಲಕವೇ ಪ್ರೇಮ ನಿವೇದನೆಯಿಂದ ಹಿಡಿದು, ನಿರಾಕರಣೆ, ಎಲ್ಲವೂ ಆಗಿಹೋಗುತ್ತದೆ. ಇದನ್ನೂ ಓದಿ: ಹೃದಯದ ಮೌನ.. ಹೃದಯಕೆ ಸೀದಾ.. ತಲುಪುವ ಹಾಗೆ ಮಾತಾಡು ನೀ…….

ಒಟ್ಟಿನಲ್ಲಿ ವ್ಯಾಲೆಂಟೈನ್ಸ್ ದಿನ ಇಂದು ಬಹುತೇಕರಿಗೆ ಒಂದು ಸರಳ ದಿನವಾಗಿಯೇ ಮಾರ್ಪಾಡಾಗಿದೆ. ಪ್ರೇಮಿಗಳೂ ಬಹಳ ವಿಶೇಷವಾಗಿ ಆಚರಿಸುವುದು ಕಡಿಮೆಯೇ ಆಗಿದೆ ಅನ್ನಬಹುದು.

– ಅಕ್ಷಿತಾ ಆಚಾರ್ಯ, ಬಿವೋಕ್ ವಿದ್ಯಾರ್ಥಿನಿ,
ಎಸ್‌ಡಿಎಂ ಕಾಲೇಜು, ಉಜಿರೆ.

Share This Article