ಹೃದಯದ ಮೌನ.. ಹೃದಯಕೆ ಸೀದಾ.. ತಲುಪುವ ಹಾಗೆ ಮಾತಾಡು ನೀ…….

Public TV
2 Min Read
valentines day

ಕ್ಷಾಂತರ ಹೃದಯಗಳ ನಡುವೆಯೂ ಜೀವದ ಗೆಳತಿಯನ್ನೇ ಅರಸುವ ಹೃದಯ, ಎಂದೂ ತುಟಿಗೆ ತಾಕಿಸದೇ ಇರುವ ಟೀ ಯನ್ನೇ ಬೈಟು ಮಾಡಿಕೊಂಡು ಕುಡಿಯಬೇಕೆನ್ನಿಸುತ್ತದೆ. ಮುಂಜಾನೆ ತಿಳಿಬಿಸಿಲಿನ ಕಿರಣ ಮೈತಾಕುತ್ತಿದ್ದಂತೆ ಉಂಟಾಗುವ ಬೆಚ್ಚನೆಯ ಅನುಭವಕ್ಕೆ ಗೆಳತಿಯ ಗಟ್ಟಿ ಅಪ್ಪುಗೆ ಬೇಕು ಎಂದು ಮನ ಬಯಸುತ್ತದೆ. ಪ್ರೀತಿಯ ಕಾಲದಲ್ಲಿ ಕಳೆದ ತುಂಟತನಗಳನ್ನು ನೆನಪಿಸಿಕೊಂಡರೆ, ಮತ್ತೆ ಸಂಗಾತಿಯ ತೋಳಿನಲ್ಲಿ ಕಳೆದುಹೋಗಬೇಕೆನ್ನಿಸುತ್ತದೆ ಇಂತಹ ಸಂದರ್ಭಗಳನ್ನು ಕೂಡಿಡಲೇಬೇಕಾಗುತ್ತದೆ. ಅದಕ್ಕೆಂದೇ ಒಂದು ದಿನವೂ ಬಂದಿದೆ. ಫೆ.14ರ ಪ್ರೇಮಿಗಳ ದಿನ – ಪ್ರೀತಿ ಹಂಚಿದ ವ್ಯಾಲಂಟೈನ್ಸ್ ದಿನ.

Love

ಉಸಿರಾಗುವೆ ಹಸಿರಾಗುವೆ
ಆ ಸೂರ್ಯ ಚಂದ್ರ ಇರುವವರೆಗೂ
ಆಕಾಶ ಭೂಮಿ ಇರುವವರೆಗೂ
ನನ್ನಾಣೆಗೂ ನಿನ್ನಾಣೆಗೂ
ಜೊತೆ ಇರುವೆ ನಾ ಎಂದೆಂದಿಗೂ…

ಎಂಬ ಶ್ರೀನಿವಾಸ್‌, ಶ್ರೇಯಾಗೋಷಲ್‌ ಅವರ ಧನಿಯಲ್ಲಿ ಮೂಡಿದ ಗುರುಕಿರಣ ಸಂಗೀತದಲ್ಲಿ ಮೂಡಿಬಂದ ʻಮೌರ್ಯʼ ಸಿನಿಮಾದ ಈ ಗೀತೆಯನ್ನು ಪ್ರೇಮಿಗಳು ಯಾರೂ ಮರೆಯುವಂತಿಲ್ಲ. ಏಕೆಂದರೆ ಈ ಗೀತೆಯ ಪ್ರತಿ ಸಾಲುಗಳೂ ಪ್ರೇಮಿಗಳ ಮನಸ್ಸು ಮತ್ತು ಹೃದಯದ ಸಂಬಂಧವನ್ನು ನೆನಪಿಸುತ್ತದೆ. ಪ್ರೇಮಿಗಳ ದಿನಾಚರಣೆಯಲ್ಲಿಯಂತೂ ಎಷ್ಟೋ ಜೀವ ಜೋಡಿಗಳ ಕಾಲರ್ ಟ್ಯೂನ್ ಸಹ ಇದೇ ಆಗಿರುತ್ತದೆ. ಅಷ್ಟೇ ಅಲ್ಲ, ಇತ್ತೀಚೆಗೆ ರಿಲೀಸ್‌ ಆಗಿರುವ ʻಜಗವೇ ನೀನು ಗೆಳತಿಯೇ, ನನ್ನಾ ಜೀವದ ಒಡತಿಯೇʼ, ʻಸುಮ್ಮನೆ, ಹೀಗೆ ನಿನ್ನನೇ ನೋಡುತಾ, ಪ್ರೇಮಿಯಾದೆನೆʼ, ʻಹೇ ಹೃದಯ, ಅವಳ ಮನಸಿನ ಜೊತೆ ಮಾತಾಡಿದೆಯಾ…..ʼ, ʻಕನಸಲೂ ನೂರು ಬಾರಿ, ಕರೆಯುವೆ ನಿನ್ನ ನಾನು, ಅಭ್ಯಾಸವಾಗಿ ಹೋಗಿದೆ, ಜೀವಕೆʼ ಇಂತಹ ಗೀತೆಗಳು ಪ್ರೇಮಿಗಳ ಮನಸ್ಸನ್ನು ಆಹ್ಲಾದಗೊಳಿಸುತ್ತವೆ.

love 1 1

ಹೌದು….. ಯುವ ಸಮುದಾಯಕ್ಕೆ ಫೆ.14ರ ಪ್ರೇಮಿಗಳ ದಿನ ಎಂಬುದೇ ವಿಶೇಷ ಅದರಲ್ಲೂ ಬೆಂಗಳೂರಿನಂತಹ ಮಹಾನಗರಗಳಲ್ಲಿ ಪ್ರೇಮಿಗಳ ಅಡ್ಡಗಳಿಗೇನು ಕಮ್ಮಿಯಿಲ್ಲ. ಚಿತ್ತಾಕರ್ಷಕ ಉದ್ಯಾನ, ಲಾಲ್‌ಬಾಗ್‌ ಬಟಾನಿಕಲ್‌ ಗಾರ್ಡನ್‌, ಕಬ್ಬನ್‌ ಪಾರ್ಕ್‌, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಲುಂಬಿನಿ ಗಾರ್ಡನ್ಸ್‌, ಬೆಂಗಳೂರು ಅರಮನೆ, ನಂದಿ ಬೆಟ್ಟ, ಹಲಸೂರು ಕೆರೆ, ತಟ್ಟೆಕೆರೆ, ಹೆಬ್ಬಾಳ ಕೆರೆ, ಸ್ಯಾಂಕಿ ಟ್ಯಾಂಕ್‌ ಸೇರಿದಂತೆ ಪ್ರತಿಷ್ಟಿತ ಹೋಟೆಲ್‌ಗಳೂ ಪ್ರೇಮಿಗಳ ಪ್ರಮುಖ ಅಡ್ಡಗಳೇ ಆಗಿರುತ್ತವೆ. ಪ್ರೇಮಿಗಳ ದಿನ ಬಂತೆಂದರೆ ಸಾಕು ಇವಿಷ್ಟೂ ತಾಣಗಳಲ್ಲಿ ಯುವ ಪ್ರೇಮಿಗಳ ಕಲರವ ಶುರುವಾಗುತ್ತದೆ. ಕಾಫಿ-ಡೇ ಶಾಪ್‌ಗಳು ಹಾಗೂ ಡಾಲ್ಛಿನ್ ಸೆಂಟರ್‌ಗಳಲ್ಲಿ ಚಳಿ ಬಿಡಿಸುವ ಬೆಚ್ಚನೆಯ ಕಾಫಿಯೊಂದಿಗೆ ಮನದ ಮಾತನ್ನೂ ಹಂಚಿಕೊಳ್ಳುತ್ತಾರೆ.

ಕೆಲವರಿಗಂತೂ ದಿನಪೂರ್ತಿ ಕಳೆದರೂ ಬಾಯಿಂದ ಒಂದು ಮಾತು ಹೊರಳಲ್ಲ, ಮಾತು ಆಡಿದರೆ ಹೋಯ್ತು, ಮುತ್ತು ಹೊಡೆದರೆ ಹೋಯ್ತು ಅನ್ನೋದನ್ನು ಇವರನ್ನ ನೋಡಿಯೇ ಬರೆದಿರಬೇಕು. ಅದಕ್ಕಾಗಿ ಕಣ್ಸನ್ನೆಯಲ್ಲೇ ಮಾತನಾಡಿಕೊಳ್ತಾರೆ. ಇನ್ನೂ ಕೆಲವರು ಕಿ.ಲೋ ಮೀಟರ್‌ಗಳವರೆಗೆ ಜಾಲಿರೈಡ್ ಮಾಡಿ ಪ್ರಕೃತಿ ಸೌಂದರ್ಯದಲ್ಲೇ ಲೀನವಾಗಿಬಿಡ್ತಾರೆ. ಇದನ್ನ ಪ್ರಶ್ನೆ ಮಾಡಿದ್ರೆ ಪ್ರೀತಿಯನ್ನೂ ಹೀಗು ಸವಿಯಬಹುದು ಅಂತಾ ಉದ್ದುದ್ದ ಡೈಲಾಗ್‌ ಬೇರೆ.. ಕೆಲ ಬಿಸಿ ರಕ್ತದ ಯುವಕರಂತೂ ತೀರಾ ಅತಿರೇಖಕ್ಕೆ ಹೋಗಿ ರಕ್ತದಲ್ಲೇ ತಮ್ಮ ಪ್ರೇಯಸಿಗೆ ಕವಿತೆ ಬರೆದುಕೊಡುತ್ತಾರೆ. ಈ ಹುಚ್ಚಾಟಗಳಿಂದ ಕೆಲವರು ಆಸ್ಪತ್ರೆ ಸೇರಿದ್ದೂ ಉಂಟೂ..

ಈ ಹಿಂದೆ ಕೆಲವು ರಾಜ ಮಹಾರಾಜರು ತಮ್ಮ ಪತ್ನಿ ಅಥವಾ ಪ್ರೇಯಸಿಗಾಗಿ ಪ್ರೇಮ ಸೌಧಗಳನ್ನೇ ನಿರ್ಮಿಸಿ ಮಾದರಿಯಾಗಿರುವುದನ್ನು ನಾವು ನೋಡಬಹುದು. ಆದರೀಗ ಕಾಲ ಬದಲಾಗಿದೆ, ಪ್ರೀತಿ ಪ್ರೇಮದ ಅರ್ಥವೇ ಬದಲಾಗಿದೆ. ಕೆಲವರು ಮೋಸದ ಪ್ರೀತಿಯಲ್ಲಿ ಬಿದ್ದು ಯಡವಟ್ಟು ಮಾಡಿಕೊಳ್ತಾರೆ. ಅದರಲ್ಲಿ ಕೆಲವರು ಮದುವೆಗೆ ಮುನ್ನ ಒಂದಿಷ್ಟು ಪ್ರೇಮಕಾಲದಲ್ಲಿ ಕಳೆದು, ಹುಡುಗ/ಹುಡಗಿ ಸಿಗದಿದ್ದಾಗ, ಬಿಡು ಗುರು ನನ್ನ ಹಣೆಯಲ್ಲಿ ಬರೆದಿರೋದು ಇಷ್ಟೇ ಅಂತ ಸುಮನ್ನಾಗಿ ಕೊನೆಗೆ ಅಪ್ಪ ಅಮ್ಮ ತೋರಿಸಿದ ಹುಡುಗಿಯನ್ನ ಮದುವೆಯಾಗ್ತಾರೆ. ಮುಂದಿನ ಒಂದಿಷ್ಟು ಕಾಲ ಪತಿ-ಪತ್ನಿಯಾಗಿ ಪ್ರತಿದಿನ ಪ್ರೀತಿಸುತ್ತಾ ಬದುಕು ಕಳೆಯುತ್ತಾರೆ.

-ಮೋಹನ ಬನ್ನಿಕುಪ್ಪೆ

Share This Article