ಹರೆಯ, ಹುಮ್ಮಸ್ಸು, ಆಕರ್ಷಣೆ, ಪ್ರೀತಿ-ಪ್ರೇಮ.. ಈ ಪ್ರಾಯವೇ ಹಾಗೆ. ಮನಸ್ಸು ಹುಚ್ಚಾಟದ ಕೋತಿಯಂತೆ ಆಡುತ್ತೆ. ಹಿಡಿತಕ್ಕೆ ಸಿಗದಷ್ಟು ನುಣುಪು. ಸರಿ-ತಪ್ಪುಗಳ ಗೊಡವೆಗೇ ಹೋಗದಷ್ಟು ಸ್ಪೀಡು. ತಾನು ಮಾಡಿದ್ದೆಲ್ಲವೂ ಸರಿ ಅನ್ನೋ ಪಾಸಿಟಿವ್ ಮೈಂಡ್ ಕಾಣೋದು ಈ ಹಂತದಲ್ಲೇ. ಗೆಳೆಯ-ಗೆಳತಿಯರೊಟ್ಟಿಗೆ ಕಳೆಯುವ ಸಮಯ. ಅದೊಂದು ಬೆಚ್ಚನೆಯ ಅನುಭವ. ‘ನೋಡೋ ಮಗಾ.. ಆ ಹುಡುಗಿ ಎಷ್ಟು ಚೆನ್ನಾಗಿದ್ದಾಳೆ’ ಅನ್ನೋದು. ಹುಡುಗಿಯರೂ ಅಷ್ಟೆ, ‘ನೋಡೇ.. ಅವ್ನು ಎಷ್ಟು ಚಂದ ಅಲ್ವಾ’?.. ಇಷ್ಟಾದ್ರೆ ಸಾಕು. ಅದೇನೊ ಹೇಳ್ತಾರಲ್ಲ, ‘Love At First Sight’ ಅಂತ.
ಪ್ರಾಯದ ಹುಡುಗ/ಹುಡುಗಿಯರ ಗುಣವೇ ಭಿನ್ನ. ಪ್ರೀತಿಯಲ್ಲಿ ಬೀಳುವವರೆಗೆ ಒದ್ದಾಡುತ್ತಾರೆ. ಒಮ್ಮೆ ಲವ್ವಲ್ಲಿ ಬಿದ್ರೆ ಸಾಕು, ತಾವಿರುವ ಪ್ರಪಂಚವನ್ನೇ ಮರೆತಂತೆ ಪ್ರೇಮಲೋಕದಲ್ಲಿ ತೇಲುತ್ತಾರೆ. ತಮ್ಮ ಯಾವುದೇ ಕೆಲಸದಲ್ಲಿ ಪ್ರೇಮಿಯನ್ನು ನೆನಪಿಸಿಕೊಳ್ಳದೇ ಇರಲಾರದಷ್ಟು ಪ್ರೀತಿ ಇಟ್ಟಿರುತ್ತಾರೆ. ಪ್ರೀತಿಯಲ್ಲಿ ಬಿದ್ದಾಗ ಮೊದಮೊದಲು ಚಾಟಿಂಗ್, ಆಮೇಲೆ ಡೇಟಿಂಗ್‌ನಲ್ಲಿ ಪರಸ್ಪರರು ಪ್ರೀತಿ ಹಂಚಿಕೊಂಡು ಸಾಗೋದು. ಇದನ್ನೂ ಓದಿ: 389 ರೂ. ಕೊಟ್ರೆ ಪ್ರೇಮಿಗಳ ದಿನಕ್ಕೆ ಬಾಡಿಗೆ ಬಾಯ್ ಫ್ರೆಂಡ್ – ಏನಿದು ಆಫರ್?
ಮನಸ್ಸಿಗೆ ಒಪ್ಪುವ ಗೆಳೆಯ/ಗೆಳತಿ ಸಿಕ್ಕರೆ ಸಾಕು. ಜಗತ್ತಿನ ಪರಿವೇ ಇಲ್ಲವೆಂಬಂತೆ ತಮ್ಮದೇ ಲೋಕದಲ್ಲಿ ವಿಹರಿಸುತ್ತಾರೆ. ಕೈ ಕೈ ಹಿಡಿದು ಸುತ್ತಾಡುವುದು, ಕ್ಯಾಂಟೀನ್‌ನಲ್ಲಿ ಕುಳಿತು ಒಬ್ಬರಿಗೊಬ್ಬರು ಕೈತುತ್ತು ತಿನ್ನಿಸುವುದು, ಹೋದಲ್ಲಿ ಬಂದಲ್ಲಿ ಕೇರ್ ಟೇಕರ್‌ರಂತೆ ಜೊತೆಯಾಗಿ ಇರುವುದು. ಈ ಸಾಂಗತ್ಯ ಸದಾ ಬೇಕು ಅನ್ನೋ ಹಂಬಲ.
ಈ ಪ್ರೀತಿ ಅನ್ನೋದೇ ಹಾಗೆ. ಸಮರ್ಪಣಾ ಭಾವದ ಸಂಕೇತ. ಅವನಿಗಾಗಿ/ಅವಳಿಗಾಗಿ ಏನು ಬೇಕಾದರೂ ಮಾಡುತ್ತೀನಿ ಅನ್ನೋ ಹುಚ್ಚು ಹಠ. ಮನೆಯವರಿಗೆ ಸುಳ್ಳು ಹೇಳುವ ಬುದ್ದಿ ಬರೋದು ಈ ಹಂತದಲ್ಲೇ. ಲವ್ವರ್ ಭೇಟಿಯಾಗಬೇಕು ಎನಿಸಿದರೆ, ‘ಅಮ್ಮ ಇವತ್ತು ನಮಗೆ ಸ್ಪೆಷಲ್ ಕ್ಲಾಸ್ ಇದೆ’ ಅಂತ ಸುಳ್ಳು ಹೇಳೋದು. ಖರ್ಚಿಗೆ ಪಾಕೆಟ್ ಮನಿ ಬೇಕು ಅಂದ್ರೆ, ‘ಅಪ್ಪ ನಮ್ಮ ಕಾಲೇಜಲ್ಲಿ ಫೀಸ್ ಕಲೆಕ್ಟ್ ಮಾಡ್ತಿದ್ದಾರೆ’ ಅಂತ ಹೇಳಿ ಹಣ ಪಡೆದು ಎಂಜಾಯ್ ಮಾಡುವುದು. ಇದನ್ನೂ ಓದಿ: ಕಾಣುವ ಕನಸಲ್ಲೂ ಕಾಡುವ ಕಣ್ಣು ಅವನದು!
ಈಗಿನದ್ದೆಲ್ಲಾ ಫೆಬ್ರವರಿ 14thಗೆ ಸೀಮಿತವಾದ ಪ್ರೀತಿಯಲ್ಲ, 24*7 ಪ್ರೀತಿ. ಹೊರಗಡೆ ಪ್ರೇಮಿ ಜೊತೆ ಸಮಯ ಕಳೆಯುವುದು. ಮನೆಗೆ ಹೋದರು ಕೂಡ ಮೊಬೈಲ್‌ನಲ್ಲಿ ಚಾಟಿಂಗ್. ಫೋನ್ ಕಾಲ್, ವೀಡಿಯೋ ಕಾಲ್‌ಗೆ ಲೆಕ್ಕವಿಲ್ಲ. ಒಟ್ಟಾರೆ ಬಿಡುವಿನ ಸಮಯವೆಲ್ಲ ಲವ್ವರ್‌ಗೆ ಮೀಸಲು. ಅರೆಕ್ಷಣವೂ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಆಪ್ತತೆ.
ಸಮಯ ಸಿಕ್ಕಾಗ ಲವ್ವರ್ ಜೊತೆ ಜಾಲಿ ರೈಡ್, ಥಿಯೇಟರ್‌ನಲ್ಲಿ ಸಿನಿಮಾ ವೀಕ್ಷಣೆ. ಫುಟ್‌ಪಾತ್‌ನಲ್ಲಿ ಪಾನೀಪೂರಿ, ಐಸ್‌ಕ್ರೀಮ್ ಸವಿಯೋದು. ಪಾರ್ಕ್‌ನಲ್ಲಿ ಸುತ್ತಾಡೋದು. ನೆನಪಿನ ಪುಟದಲ್ಲಿ ಉಳಿಯುವಂತೆ ಪ್ರೇಮಿ ಜೊತೆ ಸಮಯ ಕಳೆಯೋದು.
ಪ್ರೀತಿ ಅಂದ್ರೆ ಅದಷ್ಟೇ ಅಲ್ಲ. ಸುಖ-ದುಃಖವನ್ನು ಪ್ರೇಮಿಯೊಂದಿಗೆ ಹಂಚಿಕೊಳ್ಳಬೇಕೆನ್ನುವ ಭಾವವನ್ನು ಕಲಿಸುತ್ತದೆ. ಅದೇನೋ, ಮನಸ್ಸಿಗೆ ತುಂಬಾ ಖುಷಿಯಾದಾಗ ಅವನೊಂದಿಗೆ/ಅವಳೊಂದಿಗೆ ಹಂಚಿಕೊಳ್ಳಬೇಕೆನಿಸುತ್ತದೆ. ದುಃಖವಾದರೆ, ಪ್ರೇಮಿಯೊಂದಿಗೆ ಹೇಳಿಕೊಂಡಾಗಲೇ ಒಂದಷ್ಟು ಸಮಾಧಾನ. ನನ್ನ ಜೊತೆಯಲ್ಲಿ ಒಬ್ಬರು ಇದ್ದಾರೆ ಅನ್ನೋ ಭಾವ ಮೂಡಿಸುತ್ತದೆ. ಇದನ್ನೂ ಓದಿ: ಪ್ರೇಮವೆಂದರೆ ನನ್ನ ಪಾಲಿಗೆ ಅವಳ ಸೀರೆಯ ಮೇಲಿದ್ದ ಜಾರಿದ ನವಿಲ ಗರಿ!
ಸದಾ ಪ್ರೀತಿಯ ಗುಂಗಲ್ಲಿ ಇರೋರಿಗೆ ವಿಶೇಷ ದಿನ ಎಂದೇನಿಲ್ಲ. ಮನಸ್ಸಿನ ಒಡೆಯ/ಒಡತಿ ಜೊತೆ ಕಳೆಯುವ ಪ್ರತಿ ಕ್ಷಣವೂ ಅವರಿಗೆ ಪ್ರೇಮಿಗಳ ದಿನವೇ.