ಫೆಬ್ರವರಿ ಅಂದ್ರೆ ಮೊದಲು ನೆನಪಾಗುವುದೇ ಪ್ರೇಮಿಗಳ ದಿನ. ಫೆ. 7ರಿಂದ 14ರವರೆಗೆ ಪ್ರೇಮಿಗಳ ದಿನಾಚರಣೆ ಆಚರಿಸಲಾಗುತ್ತದೆ. ರೋಸ್ ಡೇ ಇಂದ ಪ್ರಾರಂಭವಾಗುವ ಪ್ರೇಮಿಗಳ ದಿನಾಚರಣೆ ವ್ಯಾಲೆಂಟೈನ್ಸ್ ಡೇಯಲ್ಲಿ ಕೊನೆಗೊಳ್ಳುತ್ತದೆ. ಪ್ರೇಮಿಗಳ ದಿನಾಚರಣೆಯಂದು ಪ್ರೇಮಿಗಳು ತಮ್ಮ ಪ್ರೇಯಸಿಗೆ ಅಥವಾ ಪ್ರಿಯಕರನಿಗೆ ವಿಭಿನ್ನವಾದ ರೀತಿಯಲ್ಲಿ ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾರೆ.
ಪ್ರೀತಿ ಒಂದು ಮಧುರವಾದ ಭಾವನೆ, ಪ್ರೀತಿ ಇಲ್ಲದೆ ಬಹುಶಃ ಜಗತ್ತಿನಲ್ಲಿ ಯಾರೂ ಬದುಕಲು ಸಾಧ್ಯವೇ ಇಲ್ಲ. ನಿಮ್ಮಲ್ಲಿ ಇರುವ ಪ್ರೀತಿಯ ಭಾವನೆ ನಿಮ್ಮ ಸಂಗಾತಿಯಲ್ಲಿ ಕೂಡ ಇರಬೇಕು, ಆಗಲೇ ಅದು ಪರಿಶುದ್ಧ ಪ್ರೀತಿ ಎನಿಸಿಕೊಳ್ಳುತ್ತದೆ. ಈಗಿನ ಪೀಳಿಗೆಯ ಯುವಕರು ಅಥವಾ ಯುವತಿಯರು ಸೋಶಿಯಲ್ ಮೀಡಿಯಾದಲ್ಲೇ ಪ್ರೀತಿಯನ್ನು ಹೇಳಿಕೊಳ್ಳುತ್ತಾರೆ. ಇನ್ಸ್ಟಾಗ್ರಾಮ್, ಫೇಸ್ಬುಕ್, ವಾಟ್ಸಾಪ್ ನಲ್ಲಿ ಮೆಸೇಜ್ ಮೂಲಕ ಪ್ರಪೋಸ್ ಮಾಡಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.
ಹಿಂದಿನ ಕಾಲದಲ್ಲಿ ಈಗಿನ ತರ ಆಂಡ್ರಾಯ್ಡ್ ಮೊಬೈಲ್ ಅಥವಾ ಸಾಮಾಜಿಕ ಜಾಲತಾಣಗಳು ಇರ್ಲಿಲ್ಲ. ಆಗಿನ ಕಾಲದಲ್ಲಿ ಪ್ರೇಮ ಪತ್ರ ಬರೆಯುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದರು. ಹಾಗಿದ್ದರೆ ಮೊದಲ ಪ್ರೇಮ ಪತ್ರ ಬರೆದವರು ಯಾರು ಎಂಬುದು ನಿಮಗೆ ಗೊತ್ತಾ? ಇಲ್ಲಾಂದ್ರೆ ಇಂದು ನಾವು ತಿಳಿಸಿಕೊಡುತ್ತೇವೆ.
ಮೊದಲ ಪ್ರೇಮ ಪತ್ರಗಳ ಬಗ್ಗೆ ಮಾತನಾಡಿದಾಗ, ಅವುಗಳು ಭಾರತೀಯ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ ಎನ್ನುವುದು ತಿಳಿದುಬರುತ್ತದೆ. ಹೌದು, ಮೊದಲ ಪ್ರೇಮ ಪತ್ರವನ್ನು ಸುಮಾರು 2,000 ವರ್ಷಗಳ ಹಿಂದೆ ಬರೆಯಲಾಗಿದೆ ಎಂದು ಉಲ್ಲೇಖಗಳು ತಿಳಿಸಿವೆ.
ವಿದರ್ಭ ರಾಜಕುಮಾರಿ ರುಕ್ಮಿಣಿಯು ಶ್ರೀಕೃಷ್ಣನಿಗೆ ಮೊದಲ ಪ್ರೇಮ ಪತ್ರ ಬರೆದಳು ಎನ್ನಲಾಗಿದೆ. ಮಹರ್ಷಿ ವೇದವ್ಯಾಸರು 7 ಸುಂದರ ಶ್ಲೋಕಗಳೊಂದಿಗೆ ಬರೆದ ಶ್ರೀಮದ್ ಭಗವದ್ಗೀತೆಯ ಸರ್ಗದ 10 ನೇ ಅಧ್ಯಾಯದ, 52ರ ಭಾಗದಲ್ಲಿ ಇದು ಉಲ್ಲೇಖವಾಗಿದೆ. ಅದರಂತೆ ರುಕ್ಮಿಣಿಯು ತನ್ನ ಸ್ನೇಹಿತೆ ಸುನಂದಾ ಮೂಲಕ ಈ ಪ್ರೇಮ ಪತ್ರವನ್ನು ಶ್ರೀಕೃಷ್ಣನಿಗೆ ಕಳುಹಿಸಿದಳು.
ಪುರಾಣದ ಕಥೆಯ ಪ್ರಕಾರ, ರುಕ್ಮಿಣಿ ಶ್ರೀ ಕೃಷ್ಣನ ಗುಣಗಳು ಮತ್ತು ಧೈರ್ಯದ ಬಗ್ಗೆ ತಿಳಿದುಕೊಂಡು ಅವನನ್ನು ಪ್ರೀತಿಸಲು ಪ್ರಾರಂಭಿಸಿದಳು. ಕೃಷ್ಣನನ್ನೇ ಮದುವೆಯಾಗಬೇಕೆಂದು ಕೂಡ ಬಯಸಿದ್ದಳು. ಆದರೆ, ರುಕ್ಮಿಣಿಯ ಸಹೋದರ ಅವಳನ್ನು ತನ್ನ ಸ್ನೇಹಿತ ಶಿಶುಪಾಲನಿಗೆ ಕೊಟ್ಟು ಮದುವೆ ಮಾಡಲು ಬಯಸಿದನು. ಇದು ರುಕ್ಮಿಣಿಗೆ ಇಷ್ಟವಿರಲಿಲ್ಲ. ಅದಕ್ಕಾಗಿಯೇ ರುಕ್ಮಿಣಿ ಶ್ರೀಕೃಷ್ಣನಿಗೆ ಪ್ರೇಮ ಪತ್ರವನ್ನು ಕಳುಹಿಸಿದ್ದಳು. ರುಕ್ಮಿಣಿಯ ಪ್ರೇಮ ಪತ್ರವನ್ನು ಓದಿದ ಕೃಷ್ಣ ವಿದರ್ಭಕ್ಕೆ ತೆರಳಿ ರುಕ್ಮಿಣಿಯನ್ನು ಅಲ್ಲಿಂದ ಅಪಹರಿಸಿ ಕರೆದುಕೊಂಡು ಹೋದನು.
ಹಿಂದೆಲ್ಲಾ ಪ್ರೇಮ ನಿವೇದನೆಗೆ ಇದಿದ್ದು ಒಂದೇ ಮಾರ್ಗ, ಅದು ಲವ್ ಲೆಟರ್. ಕಾಲ, ತಂತ್ರಜ್ಞಾನ ಬದಲಾದಂತೆ ಪ್ರೇಮದ ಪರಿಭಾಷೆಯು ಬದಲಾಗಿದೆ. ಲವ್‌ಲೆಟರ್‌ಗಳು ಬರೆಯುವುದಿರಲಿ ಮೆಸೇಜ್ ಕೂಡ ಟೈಪ್ ಮಾಡುವ ಕಾಲ ಈಗಿಲ್ಲ. ಈಗೆಲ್ಲಾ ಮೀಮ್ಸ್, ಇಮೋಜಿ, ಜಿಫ್‌ಗಳ ಕಾಲ. ಎಲ್ಲ ಭಾವನೆಗಳು ಅದರಲ್ಲಿಯೇ ವಿನಿಮಯವಾಗುತ್ತದೆ.
ಪ್ರೇಮಪತ್ರ ಬರೆಯುವುದು ಒಂದು ಕಲೆ. ಇದನ್ನು ಎಲ್ಲರಿಂದಲೂ ಬರೆಯಲು ಸಾಧ್ಯವಿಲ್ಲ ಎನ್ನುತ್ತಾರೆ. ಆದರೆ ಮನದ ಮಾತನ್ನು ಅಕ್ಷರ ರೂಪಕ್ಕೆ ಇಳಿಸಲು ಯಾವ ಕಲೆಯೂ ಬೇಡ ಅಲ್ಲವೇ?