ವಿಜಯಪುರ/ ಬೆಳಗಾವಿ/ಉಡುಪಿ: ಅಜಾತಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮಕ್ಕೆ ಉಡುಪಿ, ವಿಜಯಪುರ, ಬೆಳಗಾವಿಯಲ್ಲಿ ಪಕ್ಷದ ಕಾರ್ಯಕರ್ತರು ಪುಷ್ಪಾರ್ಚನೆ ಸಲ್ಲಿಸಿ ಬಳಿಕ ಪವಿತ್ರ ನದಿಗಳಲ್ಲಿ ವಿಸರ್ಜನೆ ಮಾಡಿದರು.
ಕುಂದಾಪುರದಿಂದ ಹೂವಿನಿಂದ ಅಲಂಕೃತ ರಥದಲ್ಲಿ ಉಡುಪಿಗೆ ಬಂದ ರಥಯಾತ್ರೆಯನ್ನು ರಾಜಕೀಯ ಮುಖಂಡರು, ಗಣ್ಯರು ಉಡುಪಿ ನಗರದ ಚಿತ್ತರಂಜನ್ ವೃತ್ತದ ಬಳಿ ಸ್ವಾಗತಿಸಿದರು. ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಸುನಿಲ್ ಕುಮಾರ್, ರಘುಪತಿ ಭಟ್, ಎಂಎಲ್‍ಸಿ ಕೋಟಾ ಶ್ರೀನಿವಾಸ ಪೂಜಾರಿ, ವಾಜಪೇಯಿ ಆಪ್ತರಾದ ಬಿಜೆಪಿ ಹಿರಿಯ ಮುಖಂಡ ಸೋಮಶೇಖರ್ ಭಟ್ ಸೇರಿದಂತೆ ಹಲವು ಗಣ್ಯರು ಹಾಗೂ ಸಾರ್ವಜನಿಕರು ಚಿತಾಭಸ್ಮಕ್ಕೆ ಪುಷ್ಪನಮನ ಸಲ್ಲಿಸಿದರು.
Advertisement
Advertisement
ಈ ವೇಳೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಯವರ ಚಿತಾಭಸ್ಮವನ್ನು ಉಡುಪಿಯಲ್ಲಿ ಸ್ವಾಗತಿಸಿ ನಮನ ಸಲ್ಲಿಸಿದ್ದೇವೆ. ಈ ಚಿತಾಭಸ್ಮವನ್ನು ರಾಜ್ಯದ 8 ಕಡೆಯ ಪವಿತ್ರ ನದಿಗಳಲ್ಲಿ ವಿಸರ್ಜನೆ ಮಾಡಲಾಗುತ್ತದೆ ಎಂದು ತಿಳಿಸಿದರು.
Advertisement
ಉಡುಪಿಯಲ್ಲಿ ಸ್ವಾಗತಿಸಿದ ಚಿತಾಭಸ್ಮವನ್ನು ಮಂಗಳೂರು ಮೂಲಕ ದಕ್ಷಿಣದ ಗಯಾ ಎಂದೇ ಕರೆಯಲ್ಪಡುವ ಉಪ್ಪಿನಂಗಡಿಯಲ್ಲಿ ವಿಸರ್ಜನೆ ಮಾಡುತ್ತಿದ್ದೇವೆ. ಉಪ್ಪಿನಂಗಡಿಯ ಗಯಾ ಪ್ರದೇಶ ಕುಮಾರಧಾರ ಹಾಗೂ ನೇತ್ರಾವತಿಯ ಸಂಗಮ ಸ್ಥಾನವಾಗಿರುವುದರಿಂದ ಅಲ್ಲಿ ವಿಸರ್ಜನೆ ನಡೆಯುವ ಮೂಲಕ ವಾಜಪೇಯಿವರಿಗೆ ಮೋಕ್ಷ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸಲಾಗುವುದು. ಇನ್ನು ಈ ಚಿತಾಭಸ್ಮ ವಿಸರ್ಜನೆಯಲ್ಲೂ ರಾಜಕೀಯ ನೋಡಬಾರದು, ಇಲ್ಲೂ ರಾಜಕಾರಣ ಮಾಡಿದರೆ ಅವರ ಸಣ್ಣತನ ಹಾಗೂ ಕ್ಷುಲ್ಲಕತನವನ್ನು ತೋರಿಸುತ್ತದೆ ಎಂದು ಶೋಭಾ ಕರಂದ್ಲಾಜೆ ಕಿಡಿ ಕಾರಿದರು.
Advertisement
ಇನ್ನು ವಾಜಪೇಯಿ ಅವರ ಚಿತಾಭಸ್ಮವನ್ನು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿ ಗ್ರಾಮದ ಕೃಷ್ಣಾ ನದಿಯಲ್ಲಿ ಸಮರ್ಪಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ವಿಜಯಪುರ, ಬಾಗಲಕೋಟ ಜಿಲ್ಲೆಗಳ ಬಿಜೆಪಿ ಸಂಸದರು, ಶಾಸಕರು, ಅಟಲ್ ಅಭಿಮಾನಿಗಳು ಭಾಗಿಯಾಗಿದ್ದರು. ಬಳ್ಳಾರಿಯ ಬಿಜೆಪಿ ಕಚೇರಿಯಲ್ಲಿ ಅಟಲ್ ಚಿತಾಭಸ್ಮವನ್ನು ಸಾರ್ವಜನಿಕರ ದರ್ಶನದ ಬಳಿಕ ಹಂಪಿ ಬಳಿಯ ತುಂಗಭದ್ರೆಯಲ್ಲಿ ಚಿತಾಭಸ್ಮ ವಿಸರ್ಜಿಸಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್. ಈಶ್ವರಪ್ಪ, ಬಿ. ಶ್ರೀರಾಮುಲು, ಕೊಪ್ಪಳ ಸಂಸದ ಕರಡಿ ಸಂಗಣ್ಣ, ಬಳ್ಳಾರಿ ಶಾಸಕ ಜಿ.ಸೋಮಶೇಖರ್ ರೆಡ್ಡಿ, ಮಾಜಿ ಶಾಸಕ ಟಿಎಚ್ ಸುರೇಶ್ ಬಾಬು, ವಿಧಾನ ಪರಿಷತ್ ಮಾಜಿ ಸದಸ್ಯ ಮೃತ್ಯುಂಜಯ ಜಿನಗಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv