ಮಧ್ಯಾಹ್ನ ಕ್ಷಮೆ ಕೇಳಿ ಸಂಜೆ ಕಿಡಿಕಾರಿದ ಪಂಚಮಸಾಲಿ ಶ್ರೀ- ಸ್ವಾಮೀಜಿಗಳ ವರ್ತನೆಗೆ ಮಠಾಧೀಶರಲ್ಲೇ ಭಿನ್ನ ನಿಲುವುಗಳು

Public TV
2 Min Read
CM BSY 5

ಬೆಂಗಳೂರು: ಪಂಚಮ ಸಾಲಿ ಸಮುದಾಯಕ್ಕೆ ಸಚಿವ ಸ್ಥಾನ ನೀಡಬೇಕೆಂದು ಬಹಿರಂಗ ವೇದಿಕೆಯಲ್ಲಿ ಮುಖ್ಯಮಂತ್ರಿ ಬಿಎಸ್‍ವೈ ಮೇಲೆ ಒತ್ತಡ ಹೇರಿದ್ದ ಪಂಚಮಸಾಲಿ ಮಠದ ಶ್ರೀಗಳ ವರ್ತನೆ ಇದೀಗ ರಾಜ್ಯದಲ್ಲಿ ತೀವ್ರ ಚರ್ಚೆಗೆ ಈಡಾಗಿದೆ. ಆದರೂ ವಚನಾನಂದಶ್ರೀಗಳ ವರ್ತನೆ ಬದಲಾದಂತೆ ಕಾಣುತ್ತಿಲ್ಲ. ಇವತ್ತು ಕೂಡ ಸಿಎಂ ಮೇಲೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ನಿನ್ನೆಯಿಂದ ಸ್ವಾಮೀಜಿಗಳ ವರ್ತನೆಗೆ ವಿರೋಧ ವ್ಯಕ್ತವಾದ ಕಾರಣ ವಚನಾನಂದ ಶ್ರೀ, ತಮ್ಮ ಭಕ್ತರಲ್ಲಿ ಕ್ಷಮೆ ಕೇಳಿದರು. ವೇದಿಕೆ ಮೇಲೆ ಆಡಿದ ಮಾತುಗಳಲ್ಲಿ ತಪ್ಪಿದ್ದರೆ ನಿಮ್ಮ ಮಗ ಅಂದ್ಕೊಂಡು ಹೊಟ್ಟೆಗೆ ಹಾಕಿಕೊಳ್ಳಬೇಕು ಎಂದು ಮನವಿ ಮಾಡಿದರು. ಆದರೆ ಸಂಜೆ ಮತ್ತೆ ಉಲ್ಟಾ ಹೊಡೆದ ಪಂಚಮಸಾಲಿ ಶ್ರೀಗಳು,  ಸಿಎಂ ಯಡಿಯೂರಪ್ಪ ಹೆಸರೇಳದೇ ಕಿಡಿಕಾರಿದರು.

BSY Swamiji DVG copy

ಅಧಿಕಾರ ಬೇಕು ಅಂದಾಗ ಓಡೋಡಿ ಬಂದು ನಮ್ಮ ಆಶೀರ್ವಾದ ಕೇಳುತ್ತೀರಿ. ನೀವು ಪವರ್ ಫುಲ್ ಆಗಲು ಸಮಾಜದ ಪವರ್ ಬೇಕು. ಆದರೆ ಸಮಾಜಕ್ಕೆ ಪವರ್ ಹಂಚಿಕೆ ಮಾಡಿ ಎಂದಾಗ ನಿಮಗೆ ಸಿಟ್ಟು ಬರುತ್ತೆ. ಇದು ಒಳ್ಳೆಯ ಸಂದೇಶವಲ್ಲ ಎಂದು ವಾಗ್ದಾಳಿ ನಡೆಸಿದರು. ನಮ್ಮ ಬೆಂಬಲಕ್ಕೆ ವಾಲ್ಮೀಕಿ ಮತ್ತು ಬೋವಿ ಶ್ರೀಗಳು ಇದ್ದಾರೆ. ನಾವೆಲ್ಲಾ ಸ್ವಾಮೀಜಿಗಳು ಒಂದೇ ಎಂದು ಹೇಳಿ ಸಿಎಂಗೆ ಮತ್ತೊಮ್ಮೆ ಎಚ್ಚರಿಕೆಯ ಸಂದೇಶ ರವಾನಿಸಿದರು.

ಪಂಚಮಸಾಲಿ ಶ್ರೀಗಳ ವರ್ತನೆಗೆ ಮಠಾಧೀಶರಲ್ಲೇ ಭಿನ್ನ ನಿಲುವುಗಳು ವ್ಯಕ್ತವಾಗುತ್ತಿದೆ. ಕೆಲವರು ವಚನಾನಂದ ಸ್ವಾಮೀಜಿ ಪರ ಮಾತನಾಡಿದ್ದು, ಇನ್ನೂ ಕೆಲವರು ಶ್ರೀಗಳ ಹೇಳಿಕೆಯನ್ನು ಆಕ್ಷೇಪಿಸಿದ್ದಾರೆ. ಪಂಚಮಸಾಲಿ ಮಠಾಧೀಶರ ಬೆಂಬಲಕ್ಕೆ ವಾಲ್ಮೀಕಿ ಮಠದ ಪ್ರಸನ್ನಾನಂದ ಸ್ವಾಮೀಜಿ ಧಾವಿಸಿದ್ದಾರೆ. ಹರಜಾತ್ರೆಯಲ್ಲಿ ಇಬ್ಬರು ಸ್ವಾಮೀಜಿಗಳು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ನಿನ್ನೆ ವಚನಾನಂದ ಸ್ವಾಮೀಜಿಗಳು ಮಾಡಿದ್ದು ಸರಿ ಇದೆ. ನಮ್ಮ ಈ ಎರಡು ಸಮುದಾಯಗಳಿಂದ ಈಗ 21 ಜನ ಶಾಸಕರಿದ್ದಾರೆ. ಮುಂದಿನ ಚುನಾವಣೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸೋಣ ಎಂದು ಪ್ರಸನ್ನಾನಂದ ಸ್ವಾಮೀಜಿ ಕರೆ ನೀಡಿದರು.

CM BSY 1 2

ನಿಡುಮಾಮಿಡಿ ಶ್ರೀಗಳು ಮಾತನಾಡಿ, ಮುಖ್ಯಮಂತ್ರಿಗಳನ್ನ ಬೆದರಿಸೋ ತಂತ್ರ ಒಳ್ಳೆಯದಲ್ಲ. ಸಂಖ್ಯಾಬಲದಿಂದ, ಅಧಿಕಾರ ಬಲದಿಂದ ಸಿಎಂರನ್ನು ನಿಯಂತ್ರಣ ಮಾಡುತ್ತೇವೆ ಎಂಬುವುದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ನಿನ್ನೆಯ ಘಟನೆಗೆ ಕ್ಷಮೆಯಾಚಿಸುತ್ತೇವೆ ಎಂದರು. ಯಡಿಯೂರಪ್ಪ ಇಲ್ಲ ಅಂದ್ರೆ ಏನೂ ಇಲ್ಲ ಅನ್ನೋದು ಜನರಿಗೆ ಗೊತ್ತಿದೆ ಎನ್ನುವ ಮೂಲಕ ಪರೋಕ್ಷವಾಗಿ ಬಿಜೆಪಿಗೆ ಎಚ್ಚರಿಕೆ ನೀಡಿದರು. ಈ ನಡುವೆ ನಿನ್ನೆ ಘಟನೆಯಿಂದ ಮುನಿಸಿಕೊಂಡ ಮಾಜಿ ಸಚಿವ ಮುರುಗೇಶ ನಿರಾಣಿ, ದಾವಣಗೆರೆಯಲ್ಲಿ ಇದ್ದರೂ ಸಿಎಂ ಸ್ವಾಗತಕ್ಕೆ ಆಗಮಿಸಿರಲಿಲ್ಲ.

ಇತ್ತ ನಿನ್ನೆ ಸ್ವಾಮೀಜಿಗಳ ಮೇಲೆ ಗರಂ ಆಗಿದ್ದನ್ನು ಸಿಎಂ ಯಡಿಯೂರಪ್ಪ ಸಮರ್ಥಿಸಿಕೊಂಡಿದ್ದಾರೆ. ಹಾವೇರಿಯಲ್ಲಿ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿಗಳು, 15-16 ಜನರನ್ನು ಮಂತ್ರಿ ಮಾಡಲು ಏನು ಮಾಡ್ಬೇಕಪ್ಪಾ ಎಂಬ ಚಿಂತೆಯಲ್ಲಿದ್ದೇನೆ. ಹೀಗಿದ್ದಾಗ ಎಲ್ಲರನ್ನು ಮಂತ್ರಿ ಮಾಡಿ ಎಂದರೆ ಆಗಲ್ಲ. ಕಷ್ಟ ಆಗುತ್ತೆ ಅನ್ನೋದನ್ನು ತಿಳಿಸಿದ್ದೇನೆ. ಕೆಲವೊಂದು ಘಟನಾವಳಿಗಳು ನಡೆದಾಗ ಅದನ್ನು ಎದುರಿಸೋದು ಅನಿವಾರ್ಯವಾಗಿದೆ. ಎಲ್ಲಾ ಸಮುದಾಯವನ್ನು ಒಟ್ಟಿಗೆ ಕರೆದೊಯ್ಯಲಿದ್ದೇನೆ ಎಂದು ತಿಳಿಸಿದರು.

vlcsnap 2020 01 16 00h03m59s210

Share This Article
Leave a Comment

Leave a Reply

Your email address will not be published. Required fields are marked *