ದಾವಣಗೆರೆ: ಸಚಿವ ಸಂಪುಟ ವಿಸ್ತರಣೆಯ ಕುರಿತಂತೆ ರಾಜ್ಯ ರಾಜಕೀದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿದ್ದು, ಎಲ್ಲಾ ಸಮುದಾಯದ ಶಾಸಕರು ಅವರ ಶಕ್ತಿಯಾನುಸಾರ ಸಚಿವಸ್ಥಾನಕ್ಕಾಗಿ ಲಾಭಿ ನಡೆಸುತ್ತಿದ್ದಾರೆ. ಆದರೆ ನಿನ್ನೆ ಸಿಎಂ ಬಿಎಸ್ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ನಡೆದ ಘಟನೆಗೆ ಭಕ್ತರಲ್ಲಿ ವಚನಾಂದ ಸ್ವಾಮೀಜಿಗಳು ಕ್ಷಮೆ ಕೋರಿದ್ದಾರೆ.
ಸಂಪುಟ ವಿಸ್ತರಣೆ ಕಾರಣ ಆಯಾ ಸಮುದಾಯದ ಶಾಸಕರುಗಳಿಗೆ ಅವರ ಸಮುದಾಯದ ಪೀಠಾಧಿಪತಿಗಳು ಬೆಂಬಲ ನೀಡುತ್ತಿದ್ದಾರೆ. ಬುಧವಾರ ಜಿಲ್ಲೆಯ ಹರಿಹರದ ಪಂಚಮಸಾಲಿ ಗುರುಪೀಠ ಆಯೋಜಿಸಿದ್ದ ಹರಜಾತ್ರೆ ಮಹೋತ್ಸವದಲ್ಲೂ ಸಚಿವ ಸಂಪುಟದಲ್ಲಿ ಸಮುದಾಯದ ಶಾಸಕ ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ನೀಡುವಂತೆ ಗುರುಪೀಠದ ವಚನಾನಂದ ಸ್ವಾಮೀಜಿ ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಿದ್ದರು. ಈ ಸಂದರ್ಭದಲ್ಲಿ ವೇದಿಕೆ ಮೇಲೆಯೇ ಸಿಡಿಮಿಡಿಗೊಂಡ ಸಿಎಂ ಬಿಎಸ್‍ವೈ ಅವರು, ಸ್ವಾಮೀಜಿ ನೀವು ಸಲಹೆ ಕೊಡಿ, ಆದರೆ ಧಮ್ಕಿ ಹಾಕಬೇಡಿ ಎಂದಿದ್ದರು. ಆ ಬಳಿಕ ಶಾಸಕ ಮುರುಗೇಶ್ ನಿರಾಣಿಮೇಲೆ ಕೆಂಡಾಮಂಡಲವಾಗಿದ್ದರು.
Advertisement
Advertisement
ನಿನ್ನೆ ನಡೆದ ಘಟನೆಯಿಂದ ಇಂದು ನಡೆದ ಜಾತ್ರೆಯಲ್ಲಿ ಸ್ವಲ್ಪ ಭಕ್ತರ ಆಗಮನ ಕೂಡ ಕ್ಷೀಣಿಸಿತ್ತು. ಇಂದು ನಡೆದ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿಗಳು ಕೂಡ ಒಗ್ಗಟ್ಟಿನ ಮಂತ್ರ ಜಪಿಸಿದ್ದರು. ಪಂಚಮಸಾಲಿ ಗುರುಪೀಠದೊಂದಿಗೆ ತಾವು ಸದಾ ಇರುವುದಾಗಿ ಹೇಳಿ, ಎರಡು ಸಮುದಾಯಗಳು ಸಂಘಟಿತರಾಗಿ, ಮುಂಬರುವ ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ 51 ಸ್ಥಾನಗಳನ್ನು ಗೆಲ್ಲಬೇಕೆಂದರು ಕರೆ ನೀಡಿದರು.
Advertisement
ಆ ಬಳಿಕ ಮಾತನಾಡಿದ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಅವರು, ನಿನ್ನೆ ಅಥವಾ ಇಂದಿನ ಕಾರ್ಯಕ್ರಮದಲ್ಲಿ ಏನಾದರು ನಮ್ಮಿಂದ ತಪ್ಪಾಗಿದ್ದರೆ ಹೊಟ್ಟೆಗೆ ಹಾಕಿಕೊಳ್ಳಿ ಎಂದು ಭಕ್ತರಲ್ಲಿ ಮನವಿ ಮಾಡಿದರು. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಸಿಎಂ ಬಿಎಸ್‍ವೈ ಎದುರು ಸಮುದಾಯದ ನಿರಾಣಿ ಅವರಿಗೆ ಸಚಿವ ಸ್ಥಾನ ನೀಡಬೇಕು. ಒಂದು ವೇಳೆ ಸಚಿವ ಸ್ಥಾನ ನೀಡದಿದ್ದರೆ ನಮ್ಮ ಸಮುದಾಯ ಕೈಬಿಡುತ್ತದೆ ಎಂದಿದ್ದ ಸ್ವಾಮೀಜಿಗಳು, ಇಂದು ಸ್ವಲ್ಪ ತಮ್ಮ ವರಸೆಯನ್ನು ಬದಲಿಸಿದ್ದರು.