ಮೈಸೂರು: ಚಾಮರಾಜನಗರ ಕ್ಷೇತ್ರದ ಬಿಜೆಪಿ ಸಂಸದ, ಮೈಸೂರು–ಚಾಮರಾಜನಗರ ಭಾಗದ ದಲಿತ ನಾಯಕ ವಿ.ಶ್ರೀನಿವಾಸ ಪ್ರಸಾದ್ (V Srinivasa Prasad) ಅವರಿಂದು ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಪ್ರಸಾದ್ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ (Private Hospital) ನಸುಕಿನ ಜಾವ 1.27ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಪ್ರಸಾದ್ ಅವರಿಗೆ ಪತ್ನಿ, ಮೂವರು ಪುತ್ರಿಯರು (ಪ್ರತಿಮಾ ಪ್ರಸಾದ್, ಪೂರ್ಣಿಮಾ ಪ್ರಸಾದ್ ಮತ್ತು ಪೂನಂ ಪ್ರಸಾದ್) ಇದ್ದಾರೆ.
Advertisement
ಕೆಲ ವರ್ಷಗಳಿಂದ ಬಿಗಡಾಯಿಸಿದ್ದ ಆರೋಗ್ಯ ಸ್ಥಿತಿ:
75 ವರ್ಷ ವಯಸ್ಸಿನ ಪ್ರಸಾದ್ ಅವರು ಪ್ರಸಾದ್ ಅವರ ಕಳೆದ ಕೆಲ ವರ್ಷಗಳಿಂದ ಚೆನ್ನಾಗಿರಲಿಲ್ಲ. ಅದರಲ್ಲೂ ಕೊನೇ ಬಾರಿ ಸಂಸದರಾಗಿ ಆಯ್ಕೆಯಾದ ಮೇಲೆ ಸಾರ್ವಜನಿಕವಾಗಿ ಹೆಚ್ಚು ಗುರುತಿಸಿಕೊಂಡಿರಲಿಲ್ಲ. ಆದರೂ ಚಿಕಿತ್ಸೆ ನಡುವೆಯೂ ಅವರು ರಾಜಕೀಯ ಜೀವನ ಮುಂದುವರಿಸಿದ್ದರು. ಕಳೆದ ಏಳೆಂಟು ವರ್ಷಗಳ ಹಿಂದೆಯೇ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿದಾಗ ಹೊರ ದೇಶದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆನಂತರ ಅವರು ಚೇತರಿಸಿಕೊಂಡಿದ್ದರು. ಇದಾದ ಬಳಿಕ ಆಗಾಗ ಅವರ ಆರೋಗ್ಯದಲ್ಲಿ ಸಣ್ಣ ಪುಟ್ಟ ಏರುಪೇರುಗಳು ಕಾಣಿಸಿಕೊಳ್ಳುತ್ತಿದ್ದವು. ಇದರ ನಡುವೆಯೇ ಬಿಜೆಪಿ ಸೇರಿ 2019ರ ಚುನಾವಣೆಯಲ್ಲಿ ಗೆದ್ದು ಸಂಸದರೂ ಆಗಿದ್ದರು.
Advertisement
Advertisement
ಕಳೆದ ತಿಂಗಳಷ್ಟೇ ನಿವೃತ್ತಿ ಘೋಷಣೆ:
ಅನಾರೋಗ್ಯ ತೀವ್ರವಾಗಿ ಬಿಗಡಾಯಿಸಿದ್ದರಿಂದ ಕಳೆದ ತಿಂಗಳು ಸಕ್ರೀಯ ರಾಜಕೀಯದಿಂದ ನಿವೃತ್ತಿ ಹೊಂದುತ್ತಿರುವುದಾಗಿ ಮೈಸೂರಿನಲ್ಲಿ ಘೋಷಿಸಿದ್ದರು. ಈ ಬಾರಿ ಅವರ ಅಳಿಯ ಡಾ.ಮೋಹನ್ ಅವರಿಗೆ ಚಾಮರಾಜನಗರದಿಂದ ಟಿಕೆಟ್ ಕೊಡಿಸುವ ಇರಾದೆಯನ್ನೂ ಪ್ರಸಾದ್ ಅವರು ಹೊಂದಿದ್ದರು. ಆದರೆ ಪಕ್ಷ ಡಾ.ಪ್ರಸಾದ್ ಅವರ ಬದಲು ಬಾಲರಾಜು ಅವರಿಗೆ ಚಾಮರಾಜನಗರದಲ್ಲಿ ಟಿಕೆಟ್ ನೀಡಿತ್ತು. ಕಳೆದ ಎರಡು ದಿನಗಳ ಹಿಂದೆಯಷ್ಟೇ ಪ್ರಸಾದ್ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು, ಆದ್ರೆ ಭಾನುವಾರ ಅವರ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಕಂಡುಬರುತ್ತಿರುವುದಾಗಿ ವೈದ್ಯರ ಮೂಲಗಳು ತಿಳಿಸಿದ್ದವು. ದುರದೃಷ್ಟವಶಾತ್ ಇಂದು ಬೆಳಗ್ಗಿನ ಜಾವ ಕೊನೆಯುಸಿರೆಳೆದಿದ್ದಾರೆ.
Advertisement
ಪ್ರಸಾದ್ ಬೆಳೆದು ಬಂದ ಹಾದಿ ಹೇಗಿದೆ?
1947 ಆಗಸ್ಟ್ 6 ರಂದು ಮೈಸೂರಿನ ಅಶೋಕಪುರಂನ ಮಣೇಗಾರ್ ವೆಂಕಟಯ್ಯ ಅವರ ಪುತ್ರನಾಗಿ ಜನಿಸಿದ್ದ ವಿ. ಶ್ರೀನಿವಾಸಪ್ರಸಾದ್ ಮೈಸೂರು-ಚಾಮರಾಜನಗರ ಭಾಗದಲ್ಲಿ ಪ್ರಭಾವಿ ದಲಿತ ನಾಯಕನಾಗಿ ಗುರುತಿಸಿಕೊಂಡಿದ್ದರು. ಅಲ್ಲದೇ ಅಂಬೇಡ್ಕರ್ ವಿಚಾರಧಾರೆಗಳನ್ನೇ ಉಸಿರಾಗಿಸಿಕೊಂಡಿದ್ದರು. ರಾಜಕೀಯದ ಏಳು-ಬೀಳುಗಳ ನಡುವೆ ಸ್ವಾಭಿಮಾನಕ್ಕೆ ಹೆಸರಾಗಿದ್ದ ವಿ.ಶ್ರೀನಿವಾಸ ಪ್ರಸಾದ್ ತತ್ವ ಸಿದ್ಧಾಂತಗಳನ್ನು ಎಂದಿಗೂ ಬಿಟ್ಟುಕೊಟ್ಟವರಲ್ಲ.
ದಲಿತ ನಾಯಕನ ರಾಜಕೀಯ ಏಳು-ಬೀಳಿನ ಹಾದಿ:
1974 ರಲ್ಲಿ ಕೃಷ್ಣರಾಜ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಣ್ಣಾ ಡಿಎಂಕೆ ಬೆಂಬಲಿತ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿದ್ದರು. 1977ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಲೋಕದಳ ಅಭ್ಯರ್ಥಿಯಾಗಿ ಸೋಲು ಕಂಡಿದ್ದರು. ಬಳಿಕ 1978ರಲ್ಲಿ ಟಿ.ನರಸೀಪುರ ವಿಧಾನಸಭಾ ಕ್ಷೇತ್ರದಿಂದ ಜನತಾ ಪಕ್ಷದ ಅಭ್ಯರ್ಥಿಯಾಗಿಯೂ ಸೋಲು ಕಂಡಿದ್ದರು. ಬಳಿಕ ರಾಜಕೀಯ ಅನುಭವ ಹೊಂದಿದ್ದ ಅವರು 1980, 1984, 1989, 1991 4 ಬಾರಿ ಚಾಮರಾಜನಗರ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು.
1998 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಸೋಲು ಎದುರಿಸಬೇಕಾಯಿತು. 1999 ರಲ್ಲಿ ಲೋಕಶಕ್ತಿ ಬಿಜೆಪಿ ಸಂಯುಕ್ತ ಅಭ್ಯರ್ಥಿಯಾಗಿ ಲೋಕಸಭೆಗೆ ಆಯ್ಕೆಯಾದರು. 1999 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಆಹಾರ ಮತ್ತು ನಾಗರಿಕರ ಪೊರೈಕೆ ರಾಜ್ಯ ಖಾತೆ ಸಚಿವನಾಗಿ ಕಾರ್ಯ ನಿರ್ವಹಿಸಿದ್ದರು. 2008 ಹಾಗೂ 2013 ರಲ್ಲಿ ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದ ಪ್ರಸಾದ್ 2013 ರಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಕಂದಾಯ ಸಚಿವರಾಗಿ ಕೆಲಸ ನಿರ್ವಹಿಸಿದ್ದರು.
ಸಿದ್ದರಾಮಯ್ಯ ತಮ್ಮ ಸಂಪುಟದಿಂದ ಶ್ರೀನಿವಾಸ್ ಪ್ರಸಾದ್ ಅವರನ್ನು ಕೈಬಿಟ್ಟ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಪ್ರಸಾದ್ ಅವರು ಕೆಲ ದಿನಗಳಲ್ಲೇ ಬಿಜೆಪಿ ಸೇರ್ಪಡೆಯಾದರು. ನಂತರ 2017ರಲ್ಲಿ ನಂಜನಗೂಡು ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸೋಲು ಎದುರಿಸಿದ ಅವರು, 2019ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ದಿವಂಗತ ಆರ್. ಧ್ರುವನಾರಾಯಣ ಅವರ ವಿರುದ್ಧ ಗೆಲುವು ಸಾಧಿಸಿದ್ದರು. ಕೇಂದ್ರ ಹಾಗೂ ರಾಜ್ಯ ಎರಡೂ ಕಡೆ ಸಚಿವರಾಗಿ ಸೇವೆ ಸಲ್ಲಿಸಿದ್ದ ಪ್ರಸಾದ್ 6 ಬಾರಿ ಸಂಸದರಾಗು ಹಾಗೂ 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.