Connect with us

Bengaluru City

ಥಕ ಥೈ ಥಕ ಥೈ ಅಂತಾ ಏಕೆ ಕುಣಿತೀಯಾ: ಏಕವಚನದಲ್ಲೇ ಪಾಟೀಲ್ ವಿರುದ್ಧ ಸೋಮಣ್ಣ ಕಿಡಿ

Published

on

ಬೆಂಗಳೂರು: ನಡೆದಾಡುವ ದೇವರ ವಿಚಾರಕ್ಕೆ ಬಂದ್ರೆ ಸುಟ್ಟು ಭಸ್ಮ ಆಗ್ತೀರಾ ಅಂತ ಸಚಿವ ಎಂ.ಬಿ.ಪಾಟೀಲ್ ವಿರುದ್ಧ ವಿಧಾನಪರಿಷತ್ ಸದಸ್ಯ ವಿ.ಸೋಮಣ್ಣ ವಾಗ್ದಾಳಿ ನಡೆಸಿದ್ದಾರೆ.

ಎಂ.ಬಿ.ಪಾಟೀಲ್ ಈಗ ನಿನಗೆ ವೀರಶೈವ ಲಿಂಗಾಯತರ ನೆನಪಾಯ್ತಾನೇಪ್ಪಾ? ಈಗ ಥಕ ಥೈ ಥಕ ಥೈ ಅಂತಾ ಏಕೆ ಕುಣಿತೀಯಾ? ಶ್ರೀಗಳನ್ನ ಮಧ್ಯೆ ಎಳೆದು ತರೋದು ಸರಿಯಿಲ್ಲ. ಅವರೇ ಈಗ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಸಾವಿರ ಸುಳ್ಳು ಹೇಳಿ ನಿಜ ಮಾಡಲು ಆಗಲ್ಲ. ಯಡಿಯೂರಪ್ಪ ಅವರನ್ನ ಸಿಎಂ ಅಭ್ಯರ್ಥಿ ಅಂತಾ ಘೋಷಣೆ ಮಾಡಿದ್ಮೇಲೆ ಈಗ ನಾಟಕ ಏಕೆ? ನಿನ್ನ ಹೆಂಡ್ತಿ, ಮಕ್ಕಳ ಮೇಲೆ ಏಕೆ ಅಣೆ ಹಾಕ್ತೀಯಾ? ಅವರನ್ನ ಏಕೆ ಸಾಯಿಸ್ತೀಯಾ ಪಾಪ? ನಿನಗೆ ಏನಾಗಿದೆ ಪಾಟೀಲ್? ಇವೆಲ್ಲವನ್ನು ಬಿಟ್ಟುಬಿಡು, ಸರಿಯಲ್ಲ ಅಂತ ಏಕವಚನದಲ್ಲಿ ಪ್ರಶ್ನಿಸಿ ವಾಗ್ದಾಳಿ ನಡೆಸಿದ್ರು.

ಸಣ್ಣ ವಯಸ್ಸಿನಲ್ಲೇ ಸಚಿವನಾಗಿದ್ದೀಯಾ. ಇನ್ನು ಐದಾರು ತಿಂಗಳು ಸಚಿವನಾಗಿ ಇರ್ತೀಯಾ ಅಷ್ಟೇ. ಅಮೇಲೆ ಏನ್ ಮಾಡ್ತಿಯಾಪ್ಪಾ ಪಾಟೀಲಾ? ಶಿವಕುಮಾರ ಮಹಾಸ್ವಾಮಿಗಳು ಪ್ರತಿಕ್ರಿಯೆ ನೀಡಿದ್ದಾರೆ. ವೀರಶೈವ – ಲಿಂಗಾಯತ ಎರಡೂ ಒಂದೇ. ಸಮಾಜ ಒಡೆಯುವ ಕೆಲಸ ಮಾಡಬೇಡಿ ಅಂತ ಸ್ವಾಮೀಜಿ ಸ್ಪಷ್ಟೀಕರಣ ನೀಡಿದ್ದಾರೆ. ಎಂ.ಬಿ ಪಾಟೀಲ್ ಅವ್ರು ನಾನು ಹೇಳಿದ್ದು ಸತ್ಯ, ಆಣೆ ಪ್ರಮಾಣ ಮಾಡ್ತೀನಿ ಅಂದಿದ್ದಾರೆ. ಏತಕ್ಕೋಸ್ಕರ ಆಣೆ ಪ್ರಮಾಣ ಮಾಡ್ತಿಯಪ್ಪಾ? ನಿನ್ ಮನೆ ಕಾಯೋಗಾ? ಬಿಜೆಪಿ ವರಿಷ್ಟರು ಯಡಿಯೂರಪ್ಪ ಅವ್ರನ್ನ ಮುಂದಿನ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ಅದಕ್ಕೆ ಕಾಂಗ್ರೆಸ್‍ನವರಿಗೇಕೆ ತಳಮಳ ಶುರ ವಾಗಿದೆಯೋ ಗೊತ್ತಿಲ್ಲ. ಚುನಾವಣೆ ಐದಾರು ತಿಂಗಳಿರೋವಾಗ ಈ ರೀತಿ ಗೊಂದಲ ಸೃಷ್ಟಿಸೋದು ಸರಿಯಲ್ಲ. ಒಬ್ಬ ಸಮಾಜದ ನಾಯಕ ಸಿಎಂ ಆಗ್ತಾನೆ ಅಂತ ಘೋಷಣೆ ಮಾಡಿದ ತಕ್ಷಣ ಈ ರೀತಿ ಎಂ.ಬಿಪಾಟೀಲ್ ಹೇಳಿಕೆ ನೀಡ್ತಿರೋದು ಸರಿಯಲ್ಲ. ಮಾಧ್ಯಮದವರು ಇಂಥವರಿಗೆ ತಿಳುವಳಿಕೆ ಹೇಳಿ ಸರಿ ದಾರಿಗೆ ತೆಗೆದುಕೊಂಡು ಬನ್ನಿ ಅಂತ ಹೇಳಿದ್ರು.

ಸಿದ್ಧಗಂಗಾ ಶ್ರೀಗಳು ಈ ರಾಷ್ಟ್ರದ ನಡೆದಾಡುವ ದೇವರು. ಎಂಬಿ ಪಾಟೀಲ್ ಗೆ ಎಷ್ಟು ವರ್ಷದಿಂದ ಸಿದ್ದಗಂಗಾ ಶ್ರೀಗಳು ಗೊತ್ತು? 48-50 ವರ್ಷದಿಂದ ನಾನು ಅವರ ಅಪ್ಪಟ ಶಿಷ್ಯನಾಗಿ ಕೆಲಸ ಮಾಡಿದ್ದೇನೆ. ನಮ್ಮ ಹತ್ರನೇ ಸ್ವಾಮೀಜಿ ಅವರು ಇವತ್ತಿಗೂ ಕೂಡ ಒಂದು ಗುಟ್ಟನ್ನೂ ಬಿಟ್ಟುಕೊಟ್ಟವರಲ್ಲ. ಅವರು ಸಮಾಜದ ಸಾಮರಸ್ಯ ಕದಡುವಂತಹ ಕೆಲಸ ಯಾವತ್ತೂ ಮಾಡಿಲ್ಲ. ಅದಕ್ಕಾಗಿಯೇ ಸ್ವತಃ ಸ್ವಾಮೀಜಿಯವರೇ ಈಗಾಗಲೇ ಸ್ಪಷ್ಟೀಕರಣ ನೀಡಿದ್ದಾರೆ ಎಂದರು.

ಆದ್ದರಿಂದ ನಾನು ಎಂಬಿ ಪಾಟೀಲ್‍ರಿಗೆ ಇಷ್ಟು ಹೇಳ್ತೀನಿ. ನೀವು ಮಂತ್ರಿಗಳಾಗಿದ್ದೀರಿ. ನೀರಾವರಿ ಮಂತ್ರಿಯಾಗಿದ್ದೀರಿ. ಆ ಇಲಾಖೆನ ಸರಿಮಾಡಿಕೊಂಡು ಕೆಲಸ ಮಾಡಿಕೊಂಡು ಹೋಗಿ. ಯಡಿಯೂರಪ್ಪ ಅವರನ್ನ ಬಿಜೆಪಿಯ ರಾಷ್ಟ್ರೀಯ ನಾಯಕರು ಮುಂದಿನ ಮುಖ್ಯಮಂತ್ರಿ ಅಂತ ಹೇಳಿದ ತಕ್ಷಣನೇ ನಾಲ್ಕೂವರೆ ವರ್ಷ ಆರಾಮಾಗಿ ಕಾಲ ಕಳೆದುಕೊಂಡು ಇದ್ದೋರು ಇದ್ದಕ್ಕಿದ್ದಂಗೆ ಹೇಗೆ ವೀರಶೈವರ ಮೇಲೆ ನಿಮಗೆ ಅಭಿಮಾನ ಬಂತು? ಯಡಿಯೂರಪ್ಪ ಮುಖ್ಯಮಂತ್ರಿ ಆಗಬಾರದು ಅನ್ನೋ ಒಂದೇ ದೃಷ್ಟಿಕೋನದಿಂದ ಈ ಕೆಟ್ಟ ಚಾಳಿ ಕೈಗೆತ್ತಿಕೊಂಡಿದ್ದೀರ. ಆದ್ರೆ ಒಂದು ಸತ್ಯ, ಸಾವಿರ ಸಲ ಹೇಳಿದ್ರೂ ಸುಳ್ಳು ಸುಳ್ಳೇ. ನಡೆದಾಡುವ ದೇವರ ಬಗ್ಗೆ ಜಾಸ್ತಿ ಮಾತಾಡಿ, ಅಪಚಾರಕ್ಕೆ ಗುರಿಯಾಗಿ ಸುಟ್ಟಿಹೋಗ್ಬಿಟ್ರೆ ಇನ್ನು 5 ತಿಂಗಳಲ್ಲಿ ಬೇರೆ ಮಂತ್ರಿ ಬರಬೇಕಾಗುತ್ತೆ. ಅದಕ್ಕೆ ಅವಕಾಶ ಕೊಡ್ಬೇಡಿ. ಇನ್ಯಾರ ಬಗ್ಗೆಯಾದ್ರೂ ಮಾತಾಡಿ. ಸಿದ್ದಗಂಗಾ ಶ್ರೀಗಳ ಬಗ್ಗೆ ಮಾತಾಡಬೇಕಾದ್ರೆ ಅವರ ಇತಿಹಾಸ ಗೊತ್ತಿಲ್ಲದೆ ಮಾತಾಡಬೇಡಿ. ಇದನ್ನ ಇಲ್ಲಿಗೆ ನಿಲ್ಲಿಸಿ ನಿಮ್ಮ ಕರ್ತವ್ಯ ನಿರ್ವಹಣೆ ಮಾಡಿ. ಅದನ್ನ ಮಾಡೋದಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾ ಇದೆ. ಅವರು ಮಾಡ್ಕೋತಾರೆ. ಇಂಥ ಚಿಲ್ರೆ ಕೆಲಸವನ್ನ ದಯವಿಟ್ಟು ನಿಲ್ಲಿಸಬೇಕು ಎಂದು ತಿಳಿಸಿದರು.

ಇವರೊಬ್ಬರೇ ಲಿಂಗಾಯತರಲ್ಲ. ನಾವೆಲ್ಲರೂ ವೀರಶೈವರೇ ಲಿಂಗಾಯತರೇ. ಯಡಿಯೂರಪ್ಪ ಮುಂದಿನ ಮುಖ್ಯಮಂತ್ರಿ ಅಂದ ತಕ್ಷಣ ಬಂದುಬಿಡ್ತಾ? ನಾಲ್ಕೂವರೆ ವರ್ಷ ಯಾಕೆ ಸುಮ್ಮನಿದ್ರಿ? ಮಣ್ಣು ತಿಂತಿದ್ರಾ? ಸಿದ್ದರಾಮಯ್ಯನವರ ಕೈಲಿ ಅವತ್ತೇ ಮಾಡಿಸ್ಬೇಕಿತ್ತು. ಕೊನೇ ಮೂರ್ನಾಲ್ಕು ತಿಂಗಳು ಇದೆ, ನಿಮಗೆ ಠೇವಣಿ ಬರ್ತಿಲ್ಲ, ಎಲ್ಲೂ ಮಾರ್ಕೆಟ್ ಇಲ್ಲ ಅಂತ ವೀರಶೈವರು ಎಲ್ಲೋ ಒಂದು ಕಡೆ ಸೌಮ್ಯ ಸ್ವಭಾವದವ್ರು ಅಂತ ನೀವು ಈ ಥರ ಹಿಡ್ಕೊಂಡು ಸಮಾಜವನ್ನ ರುಬ್ಬಕ್ಕೆ ಯಾರ್ಯಾರ ಕೈಲೋ ಮಾಡಿಸ್ತೀರಲ್ಲ. ಎಂಬಿ ಪಾಟೀಲ್…… ಒಂದು ದಿನ ಇದೇ ತಿರುಗುಬಾಣವಾಗುತ್ತೆ. ಗೌರವದಿಂದ ನಡೆದುಕೊಳ್ಳಿ. ಇದು ಒಳ್ಳೆಯದಲ್ಲ. ಯಡಿಯೂರಪ್ಪ ಅವರು ಈ ರಾಜ್ಯಕ್ಕೆ ಕೊಟ್ಟಿರುವ ಸೇವೆ, ವಿಶೇಷವಾಗಿ ಎಲ್ಲಾ ಜಾತಿ ಎಲ್ಲಾ ವರ್ಗದ ಜನ ಅದನ್ನ ಅಕ್ಸೆಪ್ಟ್ ಮಾಡಿದ್ದಾರೆ. ಯಡಿಯೂರಪ್ಪ ಬಂದ್ರು, ಮುಂದಿನ ದಿನಗಳಲ್ಲಿ ನಮಗೆ ಕಷ್ಟವಾಗುತ್ತೆ ಅಂತ ಮೈ ಪರಚಿಕೊಂಡು, ಬಟ್ಟೆ ಬಿಚ್ಕೊಂಡ್ರೆ ನಾವೇನು ಮಾಡೋಕಾಗುತ್ತೆ? ಇದು ಒಳ್ಳೆಯದಲ್ಲ. ನಾಲ್ಕೂವರೆ ವರ್ಷ ಸುಮ್ಮನಿದ್ದು, ಈ ನಾಲ್ಕು ತಿಂಗಳಲ್ಲಿ ಯಾಕೆ ಕುಣೀತಿದ್ಯಾ ಥಕ ಥೈ ಅಂತ? ಮೊಸರಲ್ಲಿ ಕಲ್ಲು ಹುಡಕೋ ಅಪವಿತ್ರ ಕೆಲಸ ದಯವಿಟ್ಟು ಮಾಡ್ಬೇಡಿ ಅಂತ ಹೇಳಿದ್ರು.

https://www.youtube.com/watch?v=aISmN-KBS7U

https://www.youtube.com/watch?v=hNv8RwnL6XM

Click to comment

Leave a Reply

Your email address will not be published. Required fields are marked *

www.publictv.in