– ಇಂದ್ರಾಳಿ ಬ್ರಿಡ್ಜ್ ಉದ್ಘಾಟಿಸಲಿರುವ ವಿ.ಸೋಮಣ್ಣ
– ಟೀಕಿಸಿದವರಿಗೆ ಸ್ವಾಗತ- ಸಾರ್ವಜನಿಕರಿಗೆ ಸುಸ್ವಾಗತ ಎಂದ ಕೋಟ ಶ್ರೀನಿವಾಸ ಪೂಜಾರಿ
ಉಡುಪಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆ ಟಿಪ್ಪಣಿ, ಆರೋಪ ಪ್ರತ್ಯಾರೋಪ ಶವ ಮೆರವಣಿಗೆ, ತಲೆ ಬೋಳಿಸಿ ಪ್ರತಿಭಟಿಸೋದು ಸಾಮಾನ್ಯ. ಈ ಎಲ್ಲದರ ನಡುವೆ ಸುಸಜ್ಜಿತವಾದ ಉಕ್ಕಿನ ರೈಲ್ವೆ ಮೇಲ್ಸೇತುವೆ ಉದ್ಘಾಟನೆಗೆ ಸಿದ್ಧವಾಗಿದೆ. ಸೇತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ಬನ್ನಿ ಎಂದು ಸಾರ್ವಜನಿಕರಿಗೆ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದ್ದಾರೆ.
‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಸಾರ್ವಜನಿಕ ಸೇವೆಗೆಂದೇ ಜನಪ್ರತಿನಿಧಿಗಳ ಆಯ್ಕೆಯಾಗುತ್ತದೆ. ಹೊಗಳಿಕೆ ಮತ್ತು ಟೀಕೆಯನ್ನು ನಾನು ಸಮಾನವಾಗಿ ಸ್ವೀಕರಿಸುತ್ತೇನೆ ಎಂದರು.
ಉಡುಪಿ ನಗರದ ಎರಡು ದಶಕದ ಕನಸೊಂದು ನನಸಾಗುತ್ತಿದೆ. ಮಲ್ಪೆಯಿಂದ ಚಿತ್ರದುರ್ಗದ ಮೊಳಕಾಲ್ಮೂರು ನಡುವೆ ರಾಷ್ಟ್ರೀಯ ಹೆದ್ದಾರಿ 169 ಎ ನಿರ್ಮಾಣ ಆಗುತ್ತಿದೆ. ಉಡುಪಿಯ ಇಂದ್ರಾಳಿ ಬಳಿ ರೈಲ್ವೆ ಟ್ರ್ಯಾಕ್ ಹಾದು ಹೋಗುತ್ತದೆ. ಹೆದ್ದಾರಿಯಲ್ಲಿ ರೈಲ್ವೆ ಬ್ರಿಜ್ ಎರಡು ಇಲಾಖೆಯ ಸುಪರ್ದಿಗೆ ಬರೋದ್ರಿಂದ ಹಲವಾರು ತಾಂತ್ರಿಕ ಸಮಸ್ಯೆಗಳಾಗಿತ್ತು. ಸುಮಾರು ಎಂಟು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಗ್ಗೆ ಸಾಕಷ್ಟು ಹೋರಾಟಗಳಾಗಿತ್ತು.
ಭಾರೀ ವಾದ ವಿವಾದಗಳು, ಟ್ರೋಲ್‌ಗಳು ನಡೆದಿದ್ದವು. ಇದೀಗ ರೈಲ್ವೆ ಬ್ರಿಡ್ಜ್‌ನ ಕಾಮಗಾರಿ ಪೂರ್ಣಗೊಂಡಿದೆ. ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೊಸ ಉಕ್ಕಿನ ಬ್ರಿಡ್ಜ್ ಅನ್ನು ಉದ್ಘಾಟನೆ ಮಾಡುತ್ತಿದ್ದಾರೆ. ಕೊಂಕಣ ರೈಲು ಸಂಚಾರವನ್ನು ತಡೆ ಮಾಡದೆ ಈ ಬ್ರಿಡ್ಜನ್ನು ನಿರ್ಮಾಣ ಮಾಡರುವುದು ವಿಶೇಷ. ಹೊಸ ಬ್ರಿಡ್ಜ್ ನಿರ್ಮಾಣದೊಂದಿಗೆ ಅಪಘಾತ, ಒನ್ ವೇ, ಟ್ರಾಫಿಕ್ ಜಾಮ್, ಪಾದಚಾರಿಗಳ -ವಾಹನ ಸವಾರರ ಪರದಾಟಕ್ಕೆ ಪರಿಹಾರ ಸಿಕ್ಕಂತಾಗುತ್ತದೆ. ಉದ್ಘಾಟನೆ ಬಗ್ಗೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿಮಾಹಿತಿ ನೀಡಿದ್ದು, ಇಂದ್ರಾಳಿ ರೈಲ್ವೆ ಬ್ರಿಡ್ಜ್ ಕೇಂದ್ರ ಸಹಾಯಕ ಸಚಿವ ವಿ ಸೋಮಣ್ಣ ಭಾನುವಾರ ಬೆಳಗ್ಗೆ ನಡೆಸಲಿದ್ದಾರೆ.
ಹಲವಾರು ತಾಂತ್ರಿಕ ಸಮಸ್ಯೆಗಳು, ಹೆದ್ದಾರಿ ಮತ್ತು ರೈಲ್ವೆ ಇಲಾಖೆ ಜೊತೆ ಸಮನ್ವಯ ಸಾಧಿಸಬೇಕಾಗಿರುವ ಯೋಜನೆಯಾಗಿರುವುದರಿಂದ ಈ ವಿಚಾರದಲ್ಲಿ ತಾಂತ್ರಿಕ ಸಮಸ್ಯೆಗಳು ಎದುರಾಯ್ತು. ಈ ಕಾರಣಕ್ಕೆ ನಿಗದಿತ ಸಮಯಕ್ಕಿಂತ ಕೊಂಚ ವಿಳಂಬವಾಗಿ ಉದ್ಘಾಟನೆಗೊಳ್ಳುತ್ತಿದೆ ಆದರೆ ಸುಸಜ್ಜಿತವಾದ ರೈಲ್ವೆ ಮೇಲ್ಸೇತುವೆ ನಿರ್ಮಾಣ ಆಗಿ ಲೋಕಾರ್ಪಣೆಯಾಗುತ್ತಿದೆ ಎಂಬ ಖುಷಿ ಇದೆ ಎಂದು ಹೇಳಿದರು.