– ಲೋಕಸಭೆ ಚುನಾವಣೆಗೆ ಬಿಜೆಪಿ ಫಸ್ಟ್ ಲಿಸ್ಟ್ ಬಿಡುಗಡೆ ಮುನ್ನವೇ ಕುತೂಹಲ ಮೂಡಿಸಿದ ಭೇಟಿ
– ಬಿಎಸ್‌ವೈ-ಸೋಮಣ್ಣ ದೋಸ್ತಿಗೆ ಶೆಟ್ಟರ್ ಮಧ್ಯಸ್ಥಿಕೆ?
ಬೆಂಗಳೂರು: ಲೋಕಸಭೆ ಚುನಾವಣೆಗೆ (General Elections 2024) ಬಿಜೆಪಿ ಇಂದು (ಶನಿವಾರ) ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸುವ ಸಾಧ್ಯತೆ ಇದ್ದು, ರಾಜ್ಯ ಬಿಜೆಪಿ ಪಾಳಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.
ಯಡಿಯೂರಪ್ಪ (Yediyurappa) ಸಿಎಂ ಆಗಿದ್ದಾಗ ಸೋಮಣ್ಣ (Somanna) ಭೇಟಿಯಾಗಿದ್ದರು. ಅದಾದ ಬಳಿಕ ನಾಲ್ಕು ವರ್ಷಗಳ ನಂತರ ಈಗ ಸೋಮಣ್ಣ ಭೇಟಿಯಾಗಿದ್ದಾರೆ. ಭೇಟಿ ವೇಳೆ ಯಡಿಯೂರಪ್ಪಗೆ ಹೂಗುಚ್ಛವನ್ನು ಸೋಮಣ್ಣ ನೀಡಿದ್ದಾರೆ. ಇದನ್ನೂ ಓದಿ: ಹೆಂಡತಿ ಎಂಪಿ ಆಗಲಿ ಎಂಬ ಆಸೆಯಿದೆ- ಪಾಲಿಟಿಕ್ಸ್ ಬಗ್ಗೆ ಶಿವಣ್ಣ ಮಾತು
ಬಹಳ ವರ್ಷಗಳ ನಂತರ ಮಾಜಿ ಸಚಿವ ವಿ.ಸೋಮಣ್ಣ ಇಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮನೆಗೆ ಭೇಟಿ ನೀಡಿರುವುದು ಕುತೂಹಲ ಮೂಡಿಸಿದೆ. ಹಳೆಯದನ್ನೆಲ್ಲ ಮರೆತು ಸಹಕಾರ ನೀಡುವಂತೆ ಯಡಿಯೂರಪ್ಪಗೆ ಸೋಮಣ್ಣ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಸೋಮಣ್ಣ ವಿರೋಧ ಮಾಡುತ್ತಿದ್ದರು. ಆದರೆ ಲೋಕಸಭೆ ಚುನಾವಣೆ ಹೊತ್ತಲ್ಲಿ ಬಿಎಸ್‌ವೈ ಭೇಟಿ ಕುತೂಹಲ ಮೂಡಿಸಿದೆ. ಇವರ ಜೊತೆ ಜಗದೀಶ್ ಶೆಟ್ಟರ್ ಕೂಡ ಕಾಣಿಸಿಕೊಂಡಿದ್ದಾರೆ. ಯಡಿಯೂರಪ್ಪ-ಸೋಮಣ್ಣ ದೋಡ್ತಿಗೆ ಶೆಟ್ಟರ್ ಮಧ್ಯಸ್ಥಿಕೆ ವಹಿಸಿದ್ದಾರಾ ಎಂಬ ಮಾತು ಕೇಳಿಬರುತ್ತಿದೆ. ಇದನ್ನೂ ಓದಿ: ಇಂದು ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್?
ಯಡಿಯೂರಪ್ಪ ಭೇಟಿ ಮೂಲಕ ಸೋಮಣ್ಣ ರಾಜಕೀಯ ದಾಳ ಉರುಳಿಸಿದ್ದಾರೆ ಎನ್ನಲಾಗಿದೆ. ತಮಗೆ ವಿರೋಧ ಮಾಡುತ್ತಿರುವ ತುಮಕೂರು ನಾಯಕರಿಗೆ ಈ ಮೂಲಕ ಸೋಮಣ್ಣ ಠಕ್ಕರ್ ಕೊಟ್ಟಿದ್ದಾರೆ. ತಮಗೆ ಯಡಿಯೂರಪ್ಪ ಬೆಂಬಲ ಇದೆ ಎಂದು ಸಂದೇಶ ರವಾನೆಗೆ ಮುಂದಾಗಿದ್ದಾರೆ. ಯಡಿಯೂರಪ್ಪ ಭೇಟಿ ಮೂಲಕ ಚುನಾವಣೆಗೆ ಹಾದಿ ಸುಗಮ ಮಾಡಿಕೊಳ್ಳುವ ಲೆಕ್ಕಾಚಾರ ಇದು ಎನ್ನಲಾಗುತ್ತಿದೆ. ಜೊತೆಗೆ ತುಮಕೂರು ಲಿಂಗಾಯತ ಮತದಾರರಿಗೂ ಒಂದು ಸ್ಪಷ್ಟ ಸಂದೇಶ ರವಾನೆ ತಂತ್ರ ಇದಾಗಿದೆ ಎಂಬ ಮಾತಾಗಿದೆ.