ಬೆಂಗಳೂರು: ನನ್ನಿಂದ ಪಕ್ಷಕ್ಕೆ ತೊಂದರೆ ಆಗಬಾರದು, ಆದರೆ ಬಿಜೆಪಿ ಬಿಡುವುದಿಲ್ಲ. ಬಿಜೆಪಿಯಲ್ಲೇ ಇರುತ್ತೇನೆ ಎಂದು ವಿ. ಸೋಮಣ್ಣ ಘೋಷಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಏನಾದರೂ ಸಮಸ್ಯೆ ಆಗಿದ್ದರೇ ರಾಜೀನಾಮೆ ಕೊಡುತ್ತಿದ್ದೆ. ಆದರೆ ಆ ರೀತಿಯ ಸಮಸ್ಯೆ ನನಗೆ ಏನೂ ಆಗಿಲ್ಲ. ಮುಂದಿನ ಚುನಾವಣೆಯಲ್ಲಿ ಟಿಕೆಟ್ ಕೊಟ್ಟರೇ ಸ್ಪರ್ಧಿಸುತ್ತೇನೆ. ಇಲ್ಲದಿದ್ದರೇ ಪಕ್ಷದ ಕೆಲಸ ಮಾಡಿಕೊಂಡು ಹೋಗುತ್ತೇನೆ. ಜೊತೆಗೆ ನಾನು ಬಿಜೆಪಿ ಬಿಡ್ತೀನಿ ಅಂತ ಹೇಳಿಲ್ಲ. ಆದರೆ ಸ್ವಾಭಿಮಾನ ಮಾರಿ ಜೀವನ ಮಾಡಲ್ಲ. ಮತ್ತೆ ಬೇಕಾದ್ರೆ ಪಿಗ್ಮಿ ಕಲೆಕ್ಟ್ ಮಾಡುವುದಕ್ಕೂ ಸಿದ್ಧ ಎಂದು ಹೇಳಿದರು.
ಕಾಂಗ್ರೆಸ್‍ಗೆ ಹೋಗುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದಿದ್ದೇನೆ. ನನ್ನ ಜೀವನ ನಾನೇ ರೂಪಿಸಿಕೊಂಡಿದ್ದೇನೆ. 56 ವರ್ಷದಿಂದ ಇಲ್ಲೇ ಇದ್ದೇನೆ. ಸಂಜೆ ಕಾಲೇಜಿನಲ್ಲಿ ಓದಿದ್ದೇನೆ. ಕರ್ತವ್ಯವೇ ದೇವರು. ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ನಾನು ಸುಮ್ಮನಿರಲ್ಲ. ಸುಳ್ಳು ಹೇಳಿ ನಾನು ಜೀವನ ಮಾಡಿಲ್ಲ. ಶಿವಕುಮಾರ ಸ್ವಾಮೀಜಿ, ಬಾಲಗಂಗಾಧರನಾಥ ಸ್ವಾಮೀಜಿ ನನಗೆ ಪ್ರೇರಣೆ. ಯಾರ ಮುಲಾಜಿನಲ್ಲೂ ಬದುಕಿಲ್ಲ. ಹಿಂದಿರುಗಿ ನೋಡಿದವನಲ್ಲ ಎಂದು ಕಣ್ಣೀರು ಹಾಕಿದರು.
ನಾನು ಪಕ್ಷಕ್ಕೆ ನಿಷ್ಠನಾಗಿದ್ದೇನೆ. ಯಾವ ಪಕ್ಷದಲ್ಲಿದ್ದರೂ ಆ ಪಕ್ಷವೇ ನನಗೆ ತಾಯಿ. ನನಗೆ ಡಬಲ್ ಸ್ಟಾಂಡರ್ಡ್ ಇಲ್ಲ. ಅಲ್ಲೊಂದು ಇಲ್ಲೊಂದು ಮಾತಾಡುವ ಬುದ್ಧಿ ಇಲ್ಲ ಎಂದ ಅವರು, ಮಠಮಾನ್ಯಗಳಿಗೆ ಒಬ್ಬನೇ ಸೋಮಣ್ಣ ಕೊಂಡಿಯಾಗಿದ್ದವನು. ಕಳೆದ ಕೆಲ ದಿನಗಳ ಬೆಳವಣಿಗೆ ನೋವು ತಂದಿದೆ. ಎಂದಾದರೂ ಬಿಜೆಪಿ ಬಿಡ್ತೀನಿ ಅಂತ ಮಾತಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಡಿಕೆಶಿ ಜತೆ ಫೋಟೋ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಜತೆ ಫೋಟೋ ಹಳೇದು. ಡಿಕೆಶಿ ನಮ್ಮ ಊರಿನವರು. ಮಾಧ್ಯಮಗಳು ನನ್ನ ಬಗ್ಗೆ ಸುದ್ದಿ ಹಾಕಿ ಮಜಾ ತೆಗೆದುಕೊಳ್ಳುತ್ತಾರೆ ಎಂದು ಕಿಡಿಕಾರಿದ ಅವರು, ಯಾರು ಕರೀತಾರೆ ನನಗೆ ಕಾಂಗ್ರೆಸ್‍ನಲ್ಲಿ? ಡಿಕೆಶಿ ಜತೆ ಫ್ಲೈಟ್‍ನಲ್ಲಿ ಬಂದರೆ ಆಹ್ವಾನ ಕೊಟ್ಟರು ಅಂತ ಅರ್ಥನಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಟಿಕೆಟ್ ಫೈಟ್- ದೆಹಲಿಯಲ್ಲಿ ದಲಿತ ಎಡ ನಾಯಕರ ಠಿಕಾಣಿ
ಅರುಣ್ ಸೋಮಣ್ಣ ವೈರಲ್ ವೀಡಿಯೋಗೆ ಸ್ಪಷ್ಟನೆ ನೀಡಿದ ಅವರು, ಆ ವೀಡಿಯೋ ಬಗ್ಗೆ ನನಗೆ ಗೊತ್ತಿಲ್ಲ. ಅರುಣ್ ಸೋಮಣ್ಣ ಪಕ್ಷದ ವಿರುದ್ಧ ನಡೆದುಕೊಂಡ್ರೆ ಪಕ್ಷದಿಂದ ಶಿಸ್ತು ಕ್ರಮ ಕೈಗೊಳ್ಳಲಿ. ನನ್ನ ಮಗ ಡಾಕ್ಟರ್. ಆತ ಎಳೆ ಮಗ ಅಲ್ಲ. ಆತ ಮಾತಾಡಿರುವುದಕ್ಕೂ ನನಗೂ ಸಂಬಂಧ ಇಲ್ಲ. ರಾಜಕೀಯದಲ್ಲಿ ಯಾರು ಯಾರೂ ಶತ್ರುಗಳಲ್ಲ. ಬಿಜೆಪಿಯಲ್ಲಿ ನನಗೆ ಯಾವುದೇ ಗೊಂದಲ ಇಲ್ಲ. ಒಟ್ಟಾಗಿ ಹೋಗ್ತೀವಿ, ಕೆಲಸ ಮಾಡ್ತೀವಿ. ಬಿಜೆಪಿಯಲ್ಲಿ ಯಾವುದೇ ನಾಯಕ ನನ್ನ ಬಗ್ಗೆ ಅಪಪ್ರಚಾರದ ಮಾತಾಡಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಮಂಡ್ಯ ಜನರ ಎದುರು ಮತ್ತೆ ಸಿಎಂ ಆಗುವ ಮಹಾದಾಸೆ ವ್ಯಕ್ತಪಡಿಸಿದ ಡಿಕೆಶಿ