ನಾಗರ ಹಾವು ಓಡಿಸಲು ಹೊಗೆ ಹಾಕಿದ ಕುಟುಂಬ- ಇಡೀ ಮನೆ ಭಸ್ಮ

Public TV
1 Min Read
COWDUNG HOUSE

ಲಕ್ನೋ: ಮನೆಯೊಳಗೆ ಸೇರಿಕೊಂಡಿದ್ದ ನಾಗರಹಾವನ್ನು (Cobra) ಓಡಿಸುವ ಸಲುವಾಗಿ ಮನೆ ಮಂದಿ ಹೊಗೆ ಹಾಕಿದ್ದಾರೆ. ಆದರೆ ಈ ಹೊಗೆ ಇಡೀ ಮನೆಯನ್ನೇ ಭಸ್ಮವಾಗಿಸಿದ ಪ್ರಕರಣವೊಂದು ಉತ್ತರಪ್ರದೇಶದಲ್ಲಿ ನಡೆದಿದೆ.

ಈ ಘಟನೆ ಉತ್ತರಪ್ರದೇಶದ (Uttarpradesh) ಬಂದ ಎಂಬಲ್ಲಿ ಭಾನುವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ನಡೆದಿದೆ. ಬೆಳಗ್ಗೆ ಕುಟುಂಬದ ಸದಸ್ಯರೊಬ್ಬರು ಮನೆಯೊಳಗೆ ಹಾವು ಸೇರಿಕೊಂಡಿದ್ದನ್ನು ಗಮನಿಸಿದ್ದಾರೆ. ಕೂಡಲೇ ಮನೆ ಮಂದಿಗೆ ಅವರು ತಿಳಿಸಿದ್ದು, ಎಲ್ಲರೂ ಸೇರಿ ಹಾವನ್ನು ಓಡಿಸುವ ಪ್ರಯತ್ನ ಮಾಡಿದ್ದಾರೆ.

cobra

ಏನೇ ಮಾಡಿದರೂ ಹಾವು ಮನೆಯಿಂದ ಹೊರ ಹೋಗಲೇ ಇಲ್ಲ. ಹೀಗಾಗಿ ಹಸುವಿನ ಸೆಗಣಿ (ಭರಣಿ) ಮೂಲಕ ಹೊಗೆ ಹಾಕಿದ್ದಾರೆ. ಈ ಹೊಗೆಯಿಂದ ಬೆಂಕಿ ಮನೆಪೂರ್ತಿ ಹರಡಿಕೊಂಡಿದೆ. ಇಡೀ ಮನೆಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಮನೆಯಲ್ಲಿದ್ದ ನಗದು, ಚಿನ್ನಾಭರಣ ಹಾಗೂ ಹಲವಾರು ಕ್ವಿಂಟಾಲ್ ಇದ್ದ ಧಾನ್ಯಗಳು ಭಸ್ಮವಾದವು.

ದೆಹಲಿಯಲ್ಲಿ ಕೂಲಿ ಕೆಲಸ ಮಾಡುತ್ತಿರುವ ರಾಜ್‍ಕುಮಾರ್, ಪತ್ನಿ ಮತ್ತು ಐವರು ಮಕ್ಕಳೊಂದಿಗೆ ಮನೆಯಲ್ಲಿ ವಾಸವಾಗಿದ್ದರು. ಕುಟುಂಬದ ಜೀವಮಾನದ ಉಳಿತಾಯ, ಆಸ್ತಿ ಸೇರಿದಂತೆ ಲಕ್ಷಗಟ್ಟಲೆ ಹಣ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಕೇರಳದಲ್ಲಿ ಸ್ಫೋಟ ಪ್ರಕರಣ- ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ

ಘಟನೆಯ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ದಳದ ತಂಡದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಕಂದಾಯ ಇಲಾಖೆಗೂ ಮಾಹಿತಿ ನೀಡಲಾಗಿದ್ದು, ಸದ್ಯ ಹಾನಿಯ ಪ್ರಮಾಣವನ್ನು ಅಂದಾಜಿಸಲಾಗುತ್ತಿದೆ.

ಹಾವನ್ನು ಓಡಿಸುವ ಸಲುವಾಗಿ ಮನೆಯೊಳಗೆ ಹೊಗೆ ಹಾಕಿರುವುದಾಗಿ ಕುಟುಂಬದವರು ತಿಳಿಸಿದ್ದು, ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Web Stories

Share This Article