ಲಕ್ನೋ: ಭಾರತೀಯ ಜನತಾ ಪಾರ್ಟಿ(ಬಿಜೆಪಿ) ಮುಖಂಡನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಹತ್ಯೆ ಸೇರಿ ಒಂದೇ ವಾರದಲ್ಲಿ ಮೂವರನ್ನು ಕೊಲೆಗೈಯಲಾಗಿದೆ.
ಹತ್ಯೆಯಾದವನನ್ನು 47 ವರ್ಷದ ಧರಾ ಸಿಂಗ್ ಎಂದು ಗುರುತಿಸಲಾಗಿದ್ದು, ಈತ ಕಾರ್ಪೋರೇಟರ್ ಆಗಿದ್ದನು. ಅಲ್ಲದೆ ಸ್ಥಳೀಯ ಸಕ್ಕರೆ ಕಾರ್ಖಾನೆಯಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದನು. ಧರಾ ಸಿಂಗ್ ಶನಿವಾರ ಶಹರಾನ್ ಪುರದಲ್ಲಿರುವ ತನ್ನ ಮನೆಯಿಂದ ಕೆಲಸಕ್ಕೆ ಬೈಕಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಈತನನ್ನು ತಡೆದಿದ್ದಾರೆ. ಅಲ್ಲದೆ ಕೂಡಲೇ ಧರಾ ಸಿಂಗ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಈ ಸಂಬಂಧ ಶಹರಾನ್ ಪುರ ಪೊಲೀಸ್ ಅಧಿಕಾರಿ ದಿನೇಶ್ ಕುಮಾರ್ ಮಾತನಾಡಿ, ರಣ್ಖಂಡ್ ರೈಲೈ ಕ್ರಾಸಿಂಗ್ ಬಳಿ ಅಪರಿಚಿತ ವ್ಯಕ್ತಿಗಳು ಧರಾ ಸಿಂಗ್ ಮೇಲೆ ಗುಂಡಿಕ್ಕಿದ್ದಾರೆ. ಪರಿಣಾಮ ಗಂಭೀರ ಗಾಯಗೊಂಡಿರುವ ಆತನನ್ನು ಕೂಡಲೇ ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ ಅದಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದರು ಎಂದು ತಿಳಿಸಿದರು.
ಈ ಕೊಲೆಗೆ ಕಾರಣವೇನೆಂದು ಪೊಲೀಸರಿಗೆ ಇದೂವರೆಗೂ ಗೊತ್ತಾಗಿಲ್ಲ. ಧರಾ ಸಿಂಗ್ ಬಗ್ಗೆ ಅವರ ಕುಟುಂಬದ ಸದಸ್ಯರ ಬಳಿ ಮಾತನಾಡುತ್ತೇವೆ. ಈ ಮೂಲಕ ಕೊಲೆಗೆ ಕಾರಣವೇನೆಂಬುದನ್ನು ತಿಳಿಯುವ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ.
ಅಕ್ಟೋಬರ್ 8ರಂದು ಬಿಜೆಪಿ ಮುಖಂಡ ಚೌಧರಿ ಯಶ್ ಪಾಲ್ ಸಿಂಗ್ ನನ್ನು ಕೊಲೆ ಮಾಡಲಾಗಿತ್ತು. ಅದಾದ ಬಳಿಕ ದಿನದ ಹಿಂದೆಯಷ್ಟೇ ಬಿಜೆಪಿ ನಾಯಕ ಕಬೀರ್ ತಿವಾರಿಯನ್ನು ಹತ್ಯೆ ಮಾಡಲಾಗಿತ್ತು.