– 45 ಕೋಟಿಯ ವಂಚನೆ ಆರೋಪ
ಹುಬ್ಬಳ್ಳಿ: ಭೀಕರ ಮಳೆಯ ಪ್ರವಾಹದಿಂದ ಉತ್ತರ ಕರ್ನಾಟಕ ತತ್ತರಿಸಿ ಹೋಗಿದ್ದು, ಇಂದಿಗೂ ಮಳೆರಾಯನ ಆರ್ಭಟ ನಿಂತಿಲ್ಲ. ಉತ್ತರದಲ್ಲಿ ಮಳೆಗೆ ಜನರು ತತ್ತರಿಸಿ ಹೋದರೂ ಮತ್ತಷ್ಟೂ ಮಳೆ ತರಿಸಲು ಸರ್ಕಾರ ಮುಂದಾಗಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಲ್ಲದೆ ಮೋಡ ಬಿತ್ತನೆ ನಿಲ್ಲಿಸುವಂತೆ ಸ್ವತ: ಸಿಎಂ ಬಿಎಸ್‍ವೈ ಆದೇಶಿಸಿದರೂ ಮೋಡ ಬಿತ್ತನೆ ಮುಂದುವರಿದಿದೆ. ಮಳೆಗಾಲದಲ್ಲಿ ಮೋಡ ಬಿತ್ತನೆ ಹೆಸರಿನಲ್ಲಿ 45 ಕೋಟಿ ರೂ. ಮಹಾವಂಚನೆ ನಡೆಯುತ್ತಿದೆ ಎಂಬ ಆರೋಪವೊಂದು ಕೇಳಿಬಂದಿದೆ.
Advertisement
ಹೌದು. ಉತ್ತರ ಕರ್ನಾಟಕ ಸೇರಿದಂತೆ ಬರಪೀಡಿತ ಪ್ರದೇಶಗಳಲ್ಲಿ ಮೋಡಬಿತ್ತನೆ ಮೂಲಕ ಮಳೆ ತರಿಸುವ ಯೋಜನೆ ರಾಜ್ಯದಲ್ಲಿ ಸಾಕಷ್ಟು ವರ್ಷಗಳಿಂದ ನಡೆಯುತ್ತಿದೆ. ಆದರೆ ಈ ಬಾರಿ ರಾಜ್ಯದಲ್ಲಿ ಸಾಕಪ್ಪ ಸಾಕು ಅನ್ನುವಷ್ಟೂ ಮಳೆರಾಯನ ಆರ್ಭಟ ಮುಂದುವರಿದಿದೆ. ಆದಾಗ್ಯೂ, ಮೋಡಬಿತ್ತನೆ ಕಾರ್ಯ ನಡೆದಿರೋದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
Advertisement
Advertisement
ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮೋಡ ಬಿತ್ತನೆ ಮಾಡಲು `ಕ್ಯಾತಿ ಕ್ಲೈಮೇಟ್ ಮಾಡಿಫಿಕೇಷನ್ ಕನ್ಸಲ್ಟೆಂಟ್’ ಸಂಸ್ಥೆಯು ಮೋಡ ಬಿತ್ತನೆಯ ಗುತ್ತಿಗೆ ಪಡೆದಿದೆ. ಮಾಜಿ ಸ್ಪೀಕರ್ ಕೆಬಿ ಕೋಳಿವಾಡರ ಪುತ್ರ ಪ್ರಕಾಶ್ ಕೋಳಿವಾಡರ ಈ ಕಂಪನಿ 45 ಕೋಟಿ ರೂ. ವೆಚ್ಚದಲ್ಲಿ 90 ದಿನಗಳಲ್ಲಿ 400 ಗಂಟೆ ಮೋಡ ಬಿತ್ತನೆ ಮಾಡಲು ಗುತ್ತಿಗೆ ಪಡೆದಿದೆ. ಆದರೆ ಉತ್ತರ ಕರ್ನಾಟಕದಲ್ಲಿ ಇನ್ನೂ ಭಾರೀ ಮಳೆ ಮುಂದುವರಿದಿರುವುದರಿಂದ ಮೋಡ ಬಿತ್ತನೆ ನಿಲ್ಲಿಸುವಂತೆ ಸಚಿವ ಜಗದೀಶ್ ಶೆಟ್ಟರ್, ಸಿಎಂ ಬಿಎಸ್‍ವೈಗೆ ಮನವಿ ಮಾಡಿದ್ದಾರೆ. ಶೆಟ್ಟರ್ ಮನವಿಯಂತೆ ಸಿಎಂ ಬಿಎಸ್‍ವೈ ಸಹ ಮೋಡಬಿತ್ತನೆ ನಿಲ್ಲಿಸುವಂತೆ ಆದೇಶಿಸಿದ್ದರು. ಆದರೂ ಮೋಡ ಬಿತ್ತನೆ ಮಾತ್ರ ನಿಂತಿಲ್ಲ.
Advertisement
ಮಹಾಪ್ರವಾಹದ ನಂತರ ಉತ್ತರ ಕರ್ನಾಟಕದಲ್ಲಿ ಇನ್ನೂ ಮಳೆ ಮುಂದುವರಿದಿದೆ. ಆದರೂ ಅತಿವೃಷ್ಟಿಯ ನಡುವೆಯೂ ಉತ್ತರ ಕರ್ನಾಟಕದ ವಿವಿಧೆಡೆ ಇನ್ನೂ ಮೋಡಬಿತ್ತನೆ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಸೆಪ್ಟೆಂಬರ್ 19 ರಂದು ಜಮಖಂಡಿ, ಬೀಳಗಿ, ವಿಜಯಪುರ, ಇಂಡಿ ಭಾಗದಲ್ಲಿ ಮೋಡ ಬಿತ್ತನೆ ನಡೆಸಲಾಗಿದೆ. ಅಕ್ಟೋಬರ್ 28ರವರೆಗೆ ಮೋಡಬಿತ್ತನೆ ಕಾರ್ಯ ಮುಂದುವರಿಯಲಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಈಗಾಗಲೇ 194 ಗಂಟೆಗಳ ಕಾಲ ಮೋಡ ಬಿತ್ತನೆ ಮಾಡಲಾಗಿದ್ರೂ, ಇದೀಗ ಮಳೆಗಾಲದಲ್ಲೂ ಮೋಡಬಿತ್ತನೆ ಮುಂದುವರಿದಿರುದನ್ನ ನೋಡಿದರೆ 90 ದಿನಗಳ ಅವಧಿಯಲ್ಲಿ 400 ಗಂಟೆ ಮೋಡಬಿತ್ತನೆಯ ಕೋಟಾ ಮುಗಿಸಿ 45 ಕೋಟಿ ರೂಪಾಯಿ ಬಾಚಿಕೊಳ್ಳಲು ಗುತ್ತಿಗೆ ಪಡೆದ ಸಂಸ್ಥೆ ಹವಣಿಸುತ್ತಿದೆ ಎನ್ನಲಾಗಿದೆ. ಜೊತೆಗೆ ಮೋಡಬಿತ್ತನೆಯಿಂದಲೇ ಮಳೆಯಾಯ್ತು ಅನ್ನೋ ಬಿರುದನ್ನ ಪಡೆಯಲು ಗುತ್ತಿಗೆ ಸಂಸ್ಥೆ ಮುಂದಾಗಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ಈ ಬಗ್ಗೆ ಗುತ್ತಿಗೆದಾರ ಪ್ರಕಾಶ್ ಕೋಳಿವಾಡ ಅವರನ್ನು ಕೇಳಿದಾಗ, ಕರ್ನಾಟಕ-ಮಹಾರಾಷ್ಟ್ರ ಸರ್ಕಾರದ ಅಗ್ರಿಮೆಂಟ್ ಇದೆ. ಮೂರು ಸರ್ಕಾರಗಳ ಜೊತೆ ಅಗ್ರಿಮೆಂಟ್ ಇದೆ. ಅಗ್ರಿಮೆಂಟ್ ಪ್ರಕಾರ ನಾನು ಗುತ್ತಿಗೆದಾರನಾಗಿ ಪ್ರೆಸ್ ಜೊತೆ ಮಾತನಾಡಬಾರದು. ನೀವೂ ಚೀಫ್ ಎಂಜಿನಿಯರ್ ಜೊತೆ ಮಾತನಾಡಿ. ನಾನು ಪೇಪರ್, ಟಿವಿ ಜೊತೆ ಮಾತನಾಡಬಾರದು ಅಂತ ಸಹಿ ಮಾಡಿಸಿಕೊಂಡಿದ್ದಾರೆ. ನೀವೂ ಅವರ ಜೊತೆ ಮಾತನಾಡಿ. ಚೀಫ್ ಇಂಜಿನಿಯರ್ ಪ್ರಕಾಶ್ ಅಂತ ಇದ್ದಾರೆ. ಅವರ ಜೊತೆ ಮಾತನಾಡಿ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಮಳೆ ನಡುವೆಯೂ ಮೋಡ ಬಿತ್ತನೆ ಮಾಡುತ್ತಿರೋದು ಹಾಗೂ ಸಿಎಂ ಬಿಎಸ್‍ವೈ ಆದೇಶದ ನಂತರವೂ ಮೊಡ ಬಿತ್ತನೆ ಮುಂದುವರಿದಿರುವುದನ್ನ ನೋಡಿದರೆ ಗುತ್ತಿಗೆದಾರರು ಗುತ್ತಿಗೆ ಹಣ ಪಡೆಯಲು ಮುಂದುವರಿಸಿದ್ದಾರೆ ಅನ್ನೋ ಆರೋಪಗಳು ಕೇಳಿಬರುತ್ತಿದೆ.