ಚಿನ್ನ ಅಂದ್ರೆ ಎಲ್ಲರಿಗೂ ಇಷ್ಟ. ಮಹಿಳೆಯರಿಗಂತೂ ಪಂಚಪ್ರಾಣ. ಚಿನ್ನದ (Gold) ಬೆಲೆ ಎಷ್ಟೇ ಗಗನಕ್ಕೇರಿದರೂ ಕೂಡ ಅದರ ಮೇಲಿನ ಆಸೆಯಂತೂ ಕಡಿಮೆಯಾಗಲ್ಲ. ದಿನೇ ದಿನೇ ಅದರ ಮೇಲಿನ ಪ್ರೀತಿ ಹೆಚ್ಚಾಗುತ್ತಲೇ ಹೋಗುತ್ತದೆ ವಿನಃ ಕಡಿಮೆಯಾಗಲ್ಲ. ಹೀಗಿರುವಾಗ ಇಲ್ಲೊಂದು ಗ್ರಾಮದಲ್ಲಿ ವಾಸಿಸುವ ಮಹಿಳೆಯರು ಕೇವಲ ಮೂರು ಆಭರಣಗಳನ್ನು ಮಾತ್ರ ಧರಿಸಬೇಕು. ಒಂದು ವೇಳೆ ಹೆಚ್ಚು ಆಭರಣವನ್ನು ಧರಿಸಿದರೆ 50,000 ರೂ. ವಿಧಿಸಲಾಗುತ್ತದೆ. ಯಾಕೆ ಈ ರೀತಿ? ಗ್ರಾಮದಲ್ಲಿ ಈ ನಿಯಮ ಜಾರಿಗೆ ಬರಲು ಕಾರಣವೇನು? ಸಂಪೂರ್ಣ ಮಾಹಿತಿ ಇಲ್ಲಿದೆ.
ಹೌದು, ಉತ್ತರಾಖಂಡದ (Uttarkhand) ಡೆಹರಾಡೂನ್ ಜಿಲ್ಲೆಯ ಚಕ್ರತಾ ಭಾಗದಲ್ಲಿರುವ ಕಂದಾರ್ (Kandhar) ಎಂಬ ಗ್ರಾಮದಲ್ಲಿ ಈ ವಿಶಿಷ್ಟ ನಿಯಮ ಜಾರಿಯಲ್ಲಿದೆ. ಈ ಗ್ರಾಮದಲ್ಲಿ ಜಾನ್ಸರ್-ಬಾವರ್ ಬುಡಕಟ್ಟು ಸಮುದಾಯದವರು ವಾಸಿಸುತ್ತಾರೆ. ಈ ಗ್ರಾಮದ ಸದಸ್ಯರು ಎಲ್ಲರೂ ಒಟ್ಟುಗೂಡಾಗಿ, ಜನರ ಅಭಿಪ್ರಾಯಗಳನ್ನ ಸಂಗ್ರಹಿಸಿ ಈ ನಿಯಮ ಜಾರಿ ಮಾಡಿದ್ದಾರೆ. ಈ ಮೂಲಕವೇ ಮಹಿಳೆಯರು ಚಿನ್ನದ ಆಭರಣ ಧರಿಸುವುದಕ್ಕೆ ಕಡಿವಾಣ ಬಿದ್ದು, ಕೇವಲ ಮೂರು ಆಭರಣ ಹಾಕಿಕೊಳ್ಳಲು ಮಾತ್ರ ಅವಕಾಶವಿದೆ.
ನಿಯಮ ಜಾರಿಗೆ ಕಾರಣವೇನು?
ಜನರ ನಡುವೆ ಸಮಾನತೆಯನ್ನು ತರುವುದು ಈ ನಿಯಮದ ಮುಖ್ಯ ಉದ್ದೇಶವಾಗಿದೆ. ಸಾಮಾಜಿಕ ಸಮಾರಂಭಗಳಲ್ಲಿ ಜನರು ತಮ್ಮಲ್ಲಿರುವ ಹೆಚ್ಚಿನ ಒಡವೆ ಹಾಗೂ ಆಭರಣಗಳನ್ನ ಧರಿಸುವುದರ ಮೂಲಕ ಆಡಂಬರ ಮಾಡುತ್ತಿದ್ದಾರೆ. ಇಂತಹ ವಿಷಯಗಳಲ್ಲಿ ಮಹಿಳೆಯರ ಮೇಲೆ ಪರಿಣಾಮ ಬೀಳುವುದು ಜಾಸ್ತಿ. ಇದು ಕೇವಲ ಮಹಿಳೆಯರ ಮೇಲೆ ಪರಿಣಾಮ ಬೀರುವುದಲ್ಲದೆ, ಮನೆಯಲ್ಲಿ ಅಥವಾ ಕುಟುಂಬದಲ್ಲಿ ಆರ್ಥಿಕ ಸಮಸ್ಯೆಯನ್ನ ಉಂಟು ಮಾಡುತ್ತದೆ. ಹೀಗಾಗಿ ಈ ರೀತಿಯ ಸಮಸ್ಯೆಗಳನ್ನು ಕಡಿಮೆ ಮಾಡುವುದರ ಜೊತೆಗೆ, ಮನೆಯಲ್ಲಿನ ಖರ್ಚನ್ನ ತಡೆಯುವುದು ಇದರ ಮತ್ತೊಂದು ಗುರಿಯಾಗಿದೆ. ಜೊತೆಗೆ ಮಹಿಳೆಯರು ಸಂಪತ್ತನ್ನ ಪ್ರದರ್ಶಿಸುವ ಆಸೆಯಲ್ಲಿ ಸಾಮಾಜಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ಕೌಟುಂಬಿಕ ಸಮಸ್ಯೆ ಹಾಗೂ ಆರ್ಥಿಕ ಒತ್ತಡ ಹೆಚ್ಚಾಗುತ್ತದೆ. ಎಲ್ಲ ಕಾರಣದಿಂದ ಸಮಾಜದಲ್ಲಿ ಅಸಮಾನತೆ ಉಂಟಾಗುತ್ತದೆ. ಇದನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ನಿಯಮ ಜಾರಿಗೆ ತರಲಾಗಿದೆ.
ಗ್ರಾಮದ ಸ್ವಯಂ ಆಡಳಿತದ ಅಡಿಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ನಿಯಮಗಳ ಪ್ರಕಾರ ಈ ಗ್ರಾಮದ ಅಥವಾ ಇಲ್ಲಿನ ವಿವಾಹಿತ ಮಹಿಳೆಯರು ಕೇವಲ ಮೂರು ಚಿನ್ನದ ಆಭರಣಗಳನ್ನ ಮಾತ್ರ ಧರಿಸಿಕೊಳ್ಳಬೇಕು.
ಧರಿಸಬೇಕಾದ ಆಭರಣಗಳು:
- ಮಂಗಳಸೂತ್ರ
- ಕಿವಿಯೋಲೆ
- ಮೂಗುತಿ
ಈ ಮೂರು ಚಿನ್ನದ ಆಭರಣಗಳನ್ನು ಮಾತ್ರ ಧರಿಸಲು ಅವಕಾಶವಿದೆ. ಇದರ ಹೊರತಾಗಿ ಬೇರೆ ಮೂರು ಆಭರಣಗಳನ್ನು ಧರಿಸುವಂತಿಲ್ಲ.
ಚಿನ್ನದ ಬೆಲೆ ಏರಿಕೆ ಆಗುತ್ತಿರುವುದರಿಂದ ಬಡ ಕುಟುಂಬಗಳು ಶ್ರೀಮಂತರನ್ನು ಅನುಕರಣೆ ಮಾಡಿ ಜೀವನ ನಡೆಸಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಚಿನ್ನದ ಆಸೆಗೆ ಬಿದ್ದು ಕುಟುಂಬಗಳು ಸಾಲ ಮಾಡಿ, ಚಿನ್ನವನ್ನ ಕೊಂಡುಕೊಂಡರೆ ಆ ಕುಟುಂಬದಲ್ಲಿ ಉಳಿತಾಯ ಎನ್ನುವುದು ಇರುವುದಿಲ್ಲ.
ಮದುವೆ ಎನ್ನುವುದು ಒಂದು ಪವಿತ್ರ ಆಚರಣೆ. ಚಿನ್ನದ ಆಭರಣ ಧರಿಸುವುದರ ಮೂಲಕ ಅದು ಪ್ರದರ್ಶನವಾಗಬಾರದು. ಹೀಗಾಗಿ ಈ ಪ್ರದರ್ಶನ ಮಾಡುವಂತಹ ಚಟುವಟಿಕೆಗಳನ್ನ ತಡೆ ಹಿಡಿಯುವುದನ್ನ ಈ ನಿಯಮ ಮಾಡುತ್ತದೆ. ಇದರ ಜೊತೆಗೆ ಶ್ರೀಮಂತ ಮತ್ತು ಬಡವರ ನಡುವಿನ ಗೆರೆಯನ್ನ ಅಳಿಸಿ ಹಾಕುವುದು, ಅನಗತ್ಯ ಖರ್ಚುಗಳನ್ನ ಕಡಿಮೆ ಮಾಡುವುದು, ಸರಳ ಜೀವನವನ್ನು ನಡೆಸುವುದು ಹಾಗೂ ಸಾಮಾಜಿಕ ಒಗ್ಗಟ್ಟನ್ನು ಈ ಮೂಲಕ ಬೆಳೆಸಲಾಗುವುದು.
ಇನ್ನು ಈ ನಿಯಮವನ್ನ ಜನರು ಪಾಲಿಸಲೇಬೇಕು ಎಂಬ ಉದ್ದೇಶದಿಂದ ಕಟ್ಟು ನಿಟ್ಟಿನ ನಿಯಮವನ್ನ ಜಾರಿ ಮಾಡಿದ್ದಾರೆ. ಒಂದು ವೇಳೆ ಯಾವುದೇ ಮಹಿಳೆ ಈ ನಿಯಮವನ್ನ ಅಂದರೆ ಮೂರು ಚಿನ್ನದ ಆಭರಣಗಳನ್ನ ಮಾತ್ರ ಧರಿಸುವ ನಿಯಮವನ್ನ ಉಲ್ಲಂಘಿಸಿದರೆ 50,000 ರೂಪಾಯಿ ದಂಡ ವಿಧಿಸಲಾಗುತ್ತದೆ. ಈ ದಂಡ ಗ್ರಾಮದಲ್ಲಿ ವಾಸವಾಗಿರುವ ಪ್ರತಿಯೊಂದು ಮನೆಗೂ ಅನ್ವಯಿಸುತ್ತದೆ.
ಈ ನಿಯಮ ಇದೆ ಅಕ್ಟೋಬರ್ 16ರಂದು ನಡೆದ ಸಭೆಯೊಂದರಲ್ಲಿ ಜಾರಿ ಬಂದಿದೆ. ಈ ನಿರ್ಧಾರವನ್ನ ಆ ಗ್ರಾಮದ ಹೆಚ್ಚಿನ ಮಹಿಳೆಯರು ಸ್ವಾಗತಿಸಿದ್ದು, ಆಡಳಿತ ಮಂಡಳಿಯ ಈ ನಿರ್ಧಾರ ಉತ್ತಮವಾಗಿದೆ ಎಂದಿದ್ದಾರೆ. ಹೆಚ್ಚಿನ ದುಡ್ಡು, ಶ್ರೀಮಂತಿಕೆ ಇರುವ ಮಹಿಳೆಯರು ಹೆಚ್ಚಿನ ಆಭರಣಗಳನ್ನ ಧರಿಸುತ್ತಾರೆ, ಆದರೆ ಬಡ ಕುಟುಂಬಸ್ಥರು ಇದೆಲ್ಲವನ್ನ ಅನುಭವಿಸುವ ಅವಕಾಶ ಅವರಿಗಿರುವುದಿಲ್ಲ. ಹೀಗಾಗಿ ಈ ನಿರ್ಧಾರ ಒಳ್ಳೆಯದು ಎಂದು ಗ್ರಾಮಸ್ಥರು ಹೇಳಿಕೊಂಡಿದ್ದಾರೆ.
ಚಿನ್ನದ ಈ ನಿರ್ಧಾರದ ಬಳಿಕ ಗ್ರಾಮಸ್ಥರು ಮದ್ಯವನ್ನು ತಡೆಯುವಂತೆ ಹೇಳಿಕೊಂಡಿದ್ದಾರೆ. ಈ ಮೊದಲು ಗ್ರಾಮದಲ್ಲೇ ಕೆಲವು ಪಾನೀಯಗಳು ತಯಾರಾಗುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಬ್ರಾಂಡೆಡ್ ಮದ್ಯ ಬರುತ್ತಿದೆ. ಇದರಿಂದ ಇದು ಕೂಡ ಕುಟುಂಬಕ್ಕೆ ಹೊರೆಯಾಗುತ್ತಿದೆ ಎಂದು ಗ್ರಾಮದ ಮಹಿಳೆಯರು ಹೇಳಿಕೊಂಡಿದ್ದಾರೆ.







