– ಶೀಘ್ರದಲ್ಲೇ ಪ್ರಸ್ತಾವನೆ ಮಂಡಿಸುವುದಾಗಿ ಸಿಎಂ ಭರವಸೆ
ಡೆಹ್ರಾಡೂನ್: ಇತ್ತೀಚೆಗೆ ಹರಿಯಾಣ ರಾಜ್ಯ ಸರ್ಕಾರ ವಿವಿಧ ನೇಮಕಾತಿಗಳಲ್ಲಿ ಅಗ್ನಿವೀರರಿಗೆ ಶೇ.10 ರಷ್ಟು ಮೀಸಲಾತಿ ಘೋಷಿಸಿತ್ತು. ಈ ಬೆನ್ನಲ್ಲೇ ಉತ್ತರಾಖಂಡ ರಾಜ್ಯ ಸರ್ಕಾರ (Uttarakhand Government) ಮತ್ತೊಂದು ಮಹತ್ವದ ತೀರ್ಮಾನಕ್ಕೆ ಮುಂದಾಗಿದೆ. ಉತ್ತರಾಖಂಡದಲ್ಲೂ ಅಗ್ನಿವೀರರಿಗೆ ಮೀಸಲಾತಿ (Reservation For Agniveers) ಕಲ್ಪಿಸುವ ಯೋಜನೆಯನ್ನು ರಾಜ್ಯ ಸರ್ಕಾರ ತರಲಿದೆ ಎಂದು ಸಿಎಂ ಪುಷ್ಕರ್ ಸಿಂಗ್ ಧಾಮಿ ಭಾನುವಾರ ಹೇಳಿದ್ದಾರೆ.
ಉತ್ತರಾಖಂಡ ರಾಜ್ಯದ ಅಗ್ನಿವೀರರು ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ ನಂತರ ಅವರಿಗೆ ಸರ್ಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ನೀಡಲಾಗುವುದು. ಅದಕ್ಕಾಗಿ ಮೀಸಲಾತಿಗಾಗಿ ತರಲು ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಪ್ರಸ್ತಾವನೆ ಮಂಡಿಸಲಿದೆ ಎಂದು ಸಿಎಂ ಧಾಮಿ (Pushkar Singh Dhami) ತಿಳಿಸಿದ್ದಾರೆ. ಇದನ್ನೂ ಓದಿ: ಜು.22ರಿಂದ ಲೋಕಸಭೆ ಮುಂಗಾರು ಅಧಿವೇಶನ – 6 ಹೊಸ ಮಸೂದೆ ಮಂಡನೆಗೆ ಕೇಂದ್ರ ಸಜ್ಜು!
ಉತ್ತರಾಖಂಡ ಮಿಲಿಟರಿ ಪ್ರಾಬಲ್ಯ ರಾಜ್ಯವಾಗಿದ್ದು, ಇಲ್ಲಿನ ಯುವಕರು ದೊಡ್ಡ ಸಂಖ್ಯೆಯಲ್ಲಿ ಭಾರತೀಯ ಸೇನೆಗೆ ಸೇರಿ ಸೇವೆ ಸಲ್ಲಿಸುತ್ತಾರೆ. ಆದ್ದರಿಂದ ರಾಜ್ಯದಲ್ಲಿ ಅಗ್ನಿವೀರರಿಗೆ ಸರ್ಕಾರಿ ನೌಕರಿ ನೀಡಲು ನಿರ್ಧರಿಸಿದೆ. ಅಗ್ನಿಪಥ್ ಯೋಜನೆ ಪರಿಚಯಿಸಿದಾಗ, ನಾನು ವಿವಿಧ ಮಿಲಿಟರಿ ಅಧಿಕಾರಿಗಳು ಮತ್ತು ಅನುಭವಿಗಳನ್ನು ಭೇಟಿಯಾಗಿ ಚರ್ಚಿಸಿದ್ದೆ. ಆಗಲೇ ಅಗ್ನಿವೀರರಿಗೆ ಉದ್ಯೋಗ ನೀಡಲು ನಿರ್ಧರಿಸಿದ್ದೆವು. ಈಗ ಅದಕ್ಕೆ ಸೂಕ್ತ ಸಮಯ ಬಂದಿದೆ. ಅಗ್ನಿಪಥ್ ಯೋಜನೆಗೆ ಆಯ್ಕೆಯಾಗಿ ಸೇನೆಯಲ್ಲಿ 4 ವರ್ಷ ಸೇನೆ ಸಲ್ಲಿಸಿದ ಅಗ್ನಿವೀರ್ ಸೈನಿಕರಿಗೆ ಉತ್ತರಾಖಂಡ ಪೊಲೀಸ್ ಮತ್ತು ರಾಜ್ಯ ಇತರೇ ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗ ನೀಡಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ಶೀಘ್ರವೇ ಸಂಪುಟದಲ್ಲಿ ಮಂಡಿಸಲಾಗುತ್ತದೆ ಎಂದು ವಿವರಿಸಿದ್ದಾರೆ.
ಅಲ್ಲದೇ ರಾಜ್ಯದಲ್ಲಿ ಕೌಶಲ ತರಬೇತಿ ಯೋಜನೆ ಜಾರಿಗೊಳಿಸಲು ಸಿದ್ಧತೆ ನಡೆಸಲಾಗಿದೆ. ಈ ಮೂಲಕ ನಿವೃತ್ತ ಅಗ್ನಿಶಾಮಕ ಸಿಬ್ಬಂದಿಗೆ ಹಲವು ಕ್ಷೇತ್ರಗಳಲ್ಲಿ ಉದ್ಯೋಗ ಸಂಬಂಧಿ ತರಬೇತಿ ನೀಡಲಾಗುವುದು. ಈ ಸಂಬಂಧವೂ ಆದಷ್ಟು ಬೇಗ ಪ್ರಸ್ತಾವನೆ ಸಿದ್ಧಪಡಿಸುವಂತೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಮುಂಬರುವ ವಿಧಾನಸಭೆ ಅಧಿವೇಶನದಲ್ಲೇ ಪ್ರಸ್ತಾವನೆ ಮಂಡಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಅಗ್ನಿವೀರರಿಗೆ 10% ಮೀಸಲಾತಿ – ಸ್ವಂತ ಉದ್ಯಮ ಆರಂಭಿಸುವವರಿಗೆ 5 ಲಕ್ಷ ರೂ. ವರೆಗೆ ಬಡ್ಡಿ ರಹಿತ ಸಾಲ: ಸಿಎಂ ಘೋಷಣೆ