ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯ ವಿಷ್ಣುಪ್ರಯಾಗ ಬಳಿ ಭಾರೀ ಭೂ ಕುಸಿತ ಸಂಭವಿಸಿದೆ. ರಿಷಿಕೇಶ್ ಹಾಗೂ ಬದರೀನಾಥ್ ಸಂಪರ್ಕ ಕಲ್ಪಿಸುವ ಹೈವೇಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಕನ್ನಡಿಗರು ಸೇರಿದಂತೆ ಸಾವಿರಾರು ಯಾತ್ರಾರ್ಥಿಗಳು ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಹಾಥಿ ಪಹಾರ್ ಪರ್ವತದಿಂದ ಭಾರಿ ಗಾತ್ರದ ಬಂಡೆಗಳು ರಸ್ತೆಗೆ ಕುಸಿದು ಬಿದ್ದಿವೆ. ಚಮೋಲಿ ಜಿಲ್ಲೆಯ ಜೋಶಿ ಮಠದಿಂದ 5 ಕಿ.ಮೀ ದೂರದಲ್ಲಿ ಈ ಅನಾಹುತ ನಡೆದಿದೆ.
ದೇವಾಲಯಕ್ಕೆ ತೆರಳುವ ದಾರಿ ಸಂಪೂರ್ಣ ಬಂದ್ ಆಗಿ ಎರಡೂ ಕಡೆಗಳಲ್ಲಿ ಸಾವಿರಕ್ಕೂ ಹೆಚ್ಚು ವಾಹನಗಳು ನಿಂತಿವೆ. ಜೋಶಿಮಠ, ಕರ್ಣಪ್ರಯಾಗ, ಪೀಪಲ್‍ಕೋಟಿ, ಗೋವಿಂದಘಾಟ್ ಮತ್ತು ಬದರಿನಾಥದಲ್ಲಿರುವ 20 ಸಾವಿರದಿಂದ 25 ಸಾವಿರ ಯಾತ್ರಿಕರಿಗೆ ಎಲ್ಲ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಕಲ್ಲು-ಮಣ್ಣು ತೆರವು ಕಾರ್ಯ ಸಮರೋಪಾದಿಯಲ್ಲಿ ಸಾಗಿದ್ದು, ರಸ್ತೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲು ಹರ ಸಾಹಸ ನಡೆಯುತ್ತಿದೆ. ಇದೊಂದು ಭಾರೀ ಪ್ರಮಾಣದ ಭೂಕುಸಿತವಾಗಿದ್ದು, ದೊಡ್ಡ ದೊಡ್ಡ ಕಲ್ಲುಬಂಡೆಗಳು ರಸ್ತೆಯ ಮೇಲೆ ಬಿದ್ದಿವೆ. ಈ ಭೂ ಕುಸಿತವನ್ನು ತೆರವು ಮಾಡಲು ಇನ್ನೂ 2 ದಿನಗಳು ಬೇಕಾಗಬಹುದು. ಆದರೂ, ನಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದೇವೆ ಎಂದು ತೆರವು ಕಾರ್ಯಾಚರಣೆಯಲ್ಲಿ ನಿರತರಾಗಿರುವ ಗಡಿ ರಸ್ತೆ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.
ಸಿಎಂ ಸೂಚನೆ: ಅಪಾಯಕ್ಕೆ ಸಿಲುಕಿರುವ ಕನ್ನಡಿಗರ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ ಈ ಸಂಬಂಧ ಉತ್ತರಾಖಂಡ್ ಮುಖ್ಯ ಕಾರ್ಯದರ್ಶಿಗಳ ಜೊತೆ ಮಾತುಕತೆ ನಡೆಸುವಂತೆ ತಿಳಿಸಿದ ಅವರು, ಅಗತ್ಯವಿದ್ರೆ ಅಧಿಕಾರಿಗಳ ತಂಡವನ್ನು ಕಳುಹಿಸಿ ಎಂದು ಸೂಚಿಸಿದ್ದಾರೆ.
ಉತ್ತರಾಖಂಡದ ಬದರೀನಾಥದ ಸಮೀಪ ಭೂಕುಸಿತ ಉಂಟಾದ ಪರಿಣಾಮ ತೊಂದರೆಗೆ ಸಿಲುಕಿರುವ ರಾಜ್ಯದ ಪ್ರವಾಸಿಗರ ರಕ್ಷಣೆಗೆ ಸರ್ಕಾರವು ಸೂಕ್ತ ಕ್ರಮ ಕೈಗೊಂಡಿದೆ.
— CM of Karnataka (@CMofKarnataka) May 20, 2017