ಡೆಹ್ರಾಡೂನ್: ನಾನಕಮಟ್ಟ ಗುರುದ್ವಾರದ (Gurdwara) ಕರಸೇವಾ ಮುಖ್ಯಸ್ಥ ಬಾಬಾ ತಾರ್ಸೆಮ್ ಸಿಂಗ್ (Karseva chief Baba Tarsem Singh) ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಉತ್ತರಾಖಂಡ ವಿಶೇಷ ಕಾರ್ಯಪಡೆ (Uttarakhand STF) ಎನ್‍ಕೌಂಟರ್‌ನಲ್ಲಿ ಹತ್ಯೆಗೈದಿದೆ.
ಅಮರ್‌ಜಿತ್ ಸಿಂಗ್ ಅಲಿಯಾಸ್ ಬಿಟ್ಟು ಎಂಬಾತ ಪೊಲೀಸರ (Haridwar Police) ಗುಂಡಿಗೆ ಬಲಿಯಾದ ದುಷ್ಕರ್ಮಿ. ಹತ್ಯೆಗೀಡಾದ ಆರೋಪಿಯ ವಿರುದ್ಧ 16ಕ್ಕೂ ಹೆಚ್ಚು ಪ್ರಕರಣಗಳಿದ್ದು, ಈತನ ತಲೆಗೆ 1 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಆತನ ಸಹಚರ ಪರಾರಿಯಾಗಿದ್ದಾನೆ ಎಂದು ಉತ್ತರಾಖಂಡ್ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಭಿನವ್ ಕುಮಾರ್ ತಿಳಿಸಿದ್ದಾರೆ.
ಇತ್ತೀಚೆಗೆ ಉಧಮ್ ಸಿಂಗ್ ನಗರ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‍ಎಸ್‍ಪಿ) ಅಮರ್‌ಜಿತ್ ಸಿಂಗ್ ಮತ್ತು ಆತನ ಸಹಚರ ಸರಬ್‍ಜಿತ್ ಸಿಂಗ್ ಪತ್ತೆಗೆ ತಲಾ 50 ಸಾವಿರ ರೂ. ನಿಂದ 1 ಲಕ್ಷ ರೂ.ಗಳಿಗೆ ಬಹುಮಾನ ಮೊತ್ತವನ್ನು ಹೆಚ್ಚಿಸಿದ್ದರು.
ಪ್ರಕರಣದಲ್ಲಿ ಹಣ ಒದಗಿಸುವ ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದ, ಮೂವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಬಾಬಾ ಹತ್ಯೆಯನ್ನು ಸವಾಲಾಗಿ ತೆಗೆದುಕೊಂಡಿದ್ದು, ಎಸ್‍ಟಿಎಫ್ ಮತ್ತು ಪೊಲೀಸರು ಹಂತಕರಿಗಾಗಿ ನಿರಂತರವಾಗಿ ಹುಡುಕಾಟ ನಡೆಸುತ್ತಿದ್ದಾರೆ. ಉತ್ತರಾಖಂಡದಲ್ಲಿ ಅಪರಾಧಿಗಳು ಘೋರ ಅಪರಾಧಗಳನ್ನು ಎಸಗಿದರೆ ಅವರನ್ನು ಪೊಲೀಸರು ಕಟ್ಟುನಿಟ್ಟಾಗಿ ನಿಭಾಯಿಸುತ್ತಾರೆ ಎಂದು ಡಿಜಿಪಿ ಎಚ್ಚರಿಕೆ ನೀಡಿದ್ದಾರೆ.
ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸಲು ಉತ್ತರಾಖಂಡ ಎಸ್‍ಟಿಎಫ್ ಮತ್ತು ಹರಿದ್ವಾರ ಪೊಲೀಸರು ಜಂಟಿ ಕಾರ್ಯಾಚರಣೆ ಆರಂಭಿಸಿದ್ದಾರೆ.
ಬಾಬಾ ತಾರ್ಸೆಮ್ ಸಿಂಗ್ ಅವರನ್ನು ಮಾರ್ಚ್ 28 ರಂದು ಉಧಮ್ ಸಿಂಗ್ ನಗರದ ನಾನಕಮಟ್ಟಾ ಗುರುದ್ವಾರದಲ್ಲಿ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು.