ಡೆಹ್ರಾಡೂನ್: ಆತ್ಮಹತ್ಯೆಗೆ ಶರಣಾದ ಪತಿಯ ಮೃತದೇಹಕ್ಕಾಗಿ 7 ಜನ ಪತ್ನಿಯರು ಕಿತ್ತಾಡಿಕೊಂಡ ವಿಚಿತ್ರ ಪ್ರಸಂಗವೊಂದು ಉತ್ತರಾಖಂಡ ರಾಜ್ಯದಲ್ಲಿ ನಡೆದಿದೆ.
ಹರಿದ್ವಾರದ ರವಿದಾಸ್ ಬಸ್ತಿಯ ನಿವಾಸಿ ಪವನ್ ಕುಮಾರ್ (40) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಪವನ್ ಕುಮಾರ್ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅದೇ ದಿನ ರಾತ್ರಿ ಐವರು ಮಹಿಳೆಯರು ಹಾಗೂ ಮಾರನೇ ದಿನ ಇಬ್ಬರು ಪವನ್ ಕುಮಾರ್ ನನ್ನ ಪತಿ ಎಂದು ಪರಸ್ಪರ ಕಿತ್ತಾಡಿಕೊಂಡು ಹೈಡ್ರಾಮಾ ಸೃಷ್ಟಿಸಿದ್ದಾರೆ.
ಚಾಲಕನಾಗಿ ಕೆಲಸ ಮಾಡುತ್ತಿದ್ದ ಪವನ್ ಕುಮಾರ್ ಭಾನುವಾರ ರಾತ್ರಿ ವಿಷ ಕುಡಿದು ಒದ್ದಾಡುತ್ತಿದ್ದ. ಇದನ್ನು ನೋಡಿದ ಪತ್ನಿ ಪವನ್ ಕುಮಾರ್ ನನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಳು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದ. ಈ ವಿಚಾರ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ದೌಡಾಯಿಸಿದ ನಾಲ್ವರು ಮಹಿಳೆಯರು ಪವನ್ ಕುಮಾರ್ ತಮ್ಮ ಪತಿ ಎಂದು ವಾದಿಸಲು ಆರಂಭಿಸಿದರು. ಅವರ ವಾದವನ್ನು ತಳ್ಳಿ ಹಾಕಿದ ಪವನ್ ಕುಮಾರ್ ಪತ್ನಿ, ನನ್ನ ಪತಿ ನನ್ನನ್ನು ಬಿಟ್ಟರೆ ಬೇರೆ ಯಾವ ಮಹಿಳೆಯ ಜೊತೆಗೂ ಸಂಪರ್ಕ ಇಟ್ಟುಕೊಂಡಿಲ್ಲ ಎಂದು ತಿಳಿಸಿದ್ದಾರೆ.
ಐವರು ಪತ್ನಿಯರು ಆಸ್ಪತ್ರೆ ಹೊರಗೆ ಜಗಳವಾಡುತ್ತಿದ್ದರು. ಇದನ್ನು ನೋಡಿದ ಪೊಲೀಸರಿಗೆ ಏನು ಮಾಡಬೇಕು ಎನ್ನುವುದೇ ಅರ್ಥವಾಗಲಿಲ್ಲ. ಪವನ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಎನ್ನುವುದಕ್ಕಿಂತ ಆತ ಯಾರ ಪತಿ ಎಂಬ ಕುರಿತೇ ಕುತೂಹಲ ಹೆಚ್ಚಾಗಿತ್ತು. ಕೊನೆಗೂ ಆ ಐವರು ಪತ್ನಿಯರ ಒಪ್ಪಿಗೆ ಬಳಿಕ ಪತಿಯ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಆದರೆ ಐವರು ಪತ್ನಿರ ಕಿತ್ತಾಟಕ್ಕೆ ಪವನ್ ಕುಮಾರ್ ಸ್ಟೋರಿ ಮುಕ್ತಾಯವಾಗಲಿಲ್ಲ. ಆತನ ಅಂತ್ಯಸಂಸ್ಕಾರ ನೆರವೇರಿಸಿದ ಮಾರನೇ ದಿನ (ಸೋಮವಾರ) ಮತ್ತೆ ಇಬ್ಬರು ಮಹಿಳೆಯರು ಪೊಲೀಸ್ ಠಾಣೆಗೆ ಬಂದು ತಮಗೆ ತಿಳಿಸದೆ ಪತಿಯ ಅಂತ್ಯಸಂಸ್ಕಾರ ಮಾಡಿರುವುದು ಸರಿಯಲ್ಲ ಎಂದು ಗಲಾಟೆ ಮಾಡಿದ್ದಾರೆ. ಈ ಬೆಳವಣಿಗೆಯಿಂದ ಶಾಕ್‍ಗೆ ಒಳಗಾದ ಪೊಲೀಸರು, ಮತ್ತೆ ಯಾರಾದರು ಪವನ್ ಕುಮಾರ್ ತಮ್ಮ ಪತಿ ಅಂತ ಪೊಲೀಸ್ ಠಾಣೆಗೆ ಬರುತ್ತಾರಾ ಎಂದು ಕಾದು ನೋಡುತ್ತಿದ್ದಾರೆ. ಹೀಗಾಗಿ ನಾಲ್ಕೈದು ದಿನ ಕಾದು ನೋಡಿ ಪ್ರಕರಣದ ಕುರಿತು ತನಿಖೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ಮಹಿಳೆಯರು ಹಣಕ್ಕಾಗಿ ಪವನ್ ಕುಮಾರ್ ತಮ್ಮ ಪತಿ ಎಂದು ಹೇಳುತ್ತಿದ್ದಾರೆ ಎಂಬ ಅನುಮಾನ ಪೊಲೀಸರಿಗೆ ಮೂಡಿತ್ತು. ಈ ಸಂಬಂಧ ವಿವಾರಣೆ ಮಾಡಿದಾಗ, ಪವನ್ ಕುಮಾರ್ ಖಾತೆಯಲ್ಲಿ ಹಣವೇ ಇಲ್ಲ. ಅಷ್ಟೇ ಅಲ್ಲದೆ ಆತ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಇದರಿಂದಾಗಿ ಯಾರು ನಿಜವಾದ ಪತ್ನಿ, ಬೇರೆಯವರು ಯಾಕೆ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ.