Connect with us

ಪ್ರವಾಹ ಪರಿಹಾರ ನಿಧಿಯಿಂದ ಕೋಹ್ಲಿಗೆ 47 ಲಕ್ಷ ರೂ. ನೀಡಿದ ಉತ್ತರಾಖಂಡ್ ಸರ್ಕಾರ?

ಪ್ರವಾಹ ಪರಿಹಾರ ನಿಧಿಯಿಂದ ಕೋಹ್ಲಿಗೆ 47 ಲಕ್ಷ ರೂ. ನೀಡಿದ ಉತ್ತರಾಖಂಡ್ ಸರ್ಕಾರ?

ಡೆಹ್ರಾಡೂನ್: ಚುನಾವಣಾ ಫಲಿತಾಂಶ ಹೊರಬೀಳಲು ಕೇಲವೇ ದಿನ ಬಾಕಿ ಇರುವ ಮುನ್ನವೇ ಉತ್ತರಾಖಂಡ್‍ನ ಹರೀಶ್ ರಾವತ್ ಸರ್ಕಾರ ವಿವಾದದ ಸುಳಿಯಲ್ಲಿ ಸಿಲುಕುವಂತಾಗಿದೆ. ಪ್ರವಾಹ ಸಂತ್ರಸ್ತರ ಪರಿಹಾರ ನಿಧಿಯಿಂದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರಿಗೆ 47.19 ಲಕ್ಷ ರೂ. ಹಣ ನೀಡಲಾಗಿದೆ ಅಂತಾ ಆರ್‍ಟಿಐ ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ.

2013ರ ಕೇದಾರನಾಥ ಪ್ರವಾಹ ಸಂತ್ರಸ್ತರ ನಿಧಿಯಿಂದ 47.19 ಲಕ್ಷ ರೂ. ಹಣವನ್ನು ಕೊಹ್ಲಿಗೆ 2015ರ ಜೂನ್ ನಲ್ಲಿ ಉತ್ತರಾಖಂಡ್ ಸರ್ಕಾರ ಪಾವತಿಸಿದೆ ಎಂದು ಆರ್‍ಟಿಐ ಕಾರ್ಯಕರ್ತ ಅಜಯ್ ಆರೋಪಿಸಿದ್ದಾರೆ.

ಕೊಹ್ಲಿ ಉತ್ತರಾಖಂಡ್ ಪ್ರವಾಸೋದ್ಯಮದ ಬ್ರಾಂಡ್ ಅಂಬಾಸಿಡರ್ ಆದ ನಂತರ 60 ಸೆಕೆಂಡ್‍ಗಳ ಪ್ರವಾಸೋದ್ಯಮದ ವಿಡಿಯೊವೊಂದರಲ್ಲಿ ನಟಿಸಿದ್ದರು. ಕೊಹ್ಲಿಯ ಈ ನಟನೆಗಾಗಿ ರಾವತ್ ಸರ್ಕಾರ ಕೇದಾರನಾಥ್ ಪ್ರವಾಹ ಸಂತ್ರಸ್ತರಿಗೆ ಮೀಸಲಿಟ್ಟಿದ್ದ ನಿಧಿಯಿಂದ ಹಣವನ್ನು ಪಾವತಿ ಮಾಡಿದೆ ಅಂತಾ ಆರೋಪಿಸಿದ್ದಾರೆ. ಆದರೆ ಕೊಹ್ಲಿಯ ಏಜೆಂಟ್ ಬಂಟಿ ಷಾ ಮಾತ್ರ ಈ ಆರೋಪವನ್ನು ತಳ್ಳಿ ಹಾಕಿದ್ದು, ಇಂತಹ ಯಾವುದೇ ಹಣದ ವಹಿವಾಟು ನಡೆದಿಲ್ಲ ಅಂತಾ ಹೇಳಿದ್ದಾರೆ.

ಈ ಬಗ್ಗೆ ಉತ್ತರಾಖಂಡ್ ಮುಖ್ಯಮಂತ್ರಿ ಹರೀಶ್ ರಾವತ್ ಅವರ ಮಾಧ್ಯಮ ಸಲಹೆಗಾರ ಸುರೇಂದ್ರ ಕುಮಾರ್ ಪ್ರತಿಕ್ರಿಯಿಸಿದ್ದು, ಈ ಆರೋಪಗಳೆಲ್ಲವೂ ಆಧಾರರಹಿತವಾಗಿದೆ. ಪ್ರವಾಸೋದ್ಯಮ ರಾಜ್ಯದ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬಾಗಿದೆ. ಹೀಗಾಗಿ ಒಬ್ಬ ಪ್ರಮುಖ ವ್ಯಕ್ತಿಯನ್ನು ರಾಜ್ಯದ ಪ್ರವಾಸಿ ತಾಣಗಳ ಜಾಹಿರಾತಿಗಾಗಿ ಆಯ್ಕೆ ಮಾಡಿಕೊಂಡರೆ ತಪ್ಪೇನು? ಎಲ್ಲವನ್ನೂ ಕಾನೂನಾತ್ಮಕವಾಗಿಯೇ ಮಾಡಲಾಗಿದೆ. ಈ ಆರೋಪಗಳೆಲ್ಲವೂ ಆಧಾರರಹಿತ. ಕೇದರನಾಥದ ಅಭಿವೃದ್ಧೆಯೇ ಸರ್ಕಾರದ ಮೊದಲ ಆದ್ಯತೆ ಎಂಬುದು ಜನರಿಗೆ ಗೊತ್ತು. ಬಿಜೆಪಿಗೆ ಈ ಚುನಾವಣೆಯಲ್ಲಿ ಸೋಲು ಖಚಿತ. ಹೀಗಾಗಿ ನಿರಾಸೆಯಿಂದ ಈ ರೀತಿ ಆರೋಪಗಳನ್ನು ಮಾಡುತ್ತಿದೆ ಎಂದಿದ್ದಾರೆ.

Advertisement
Advertisement