ಯುಪಿ 15 ಜಿಲ್ಲೆಗಳು ಏ.30ರವರೆಗೂ ಲಾಕ್‍ಡೌನ್ – ಮನೆಯಿಂದ ಯಾರೂ ಹೊರಬರುವಂತಿಲ್ಲ

Public TV
1 Min Read
Yogi

– ಹೋಮ್ ಡಿಲೆವರಿ, ವೈದ್ಯಕೀಯ ಸಿಬ್ಬಂದಿಗೆ ಮಾತ್ರ ಅನುಮತಿ
– ಅಗತ್ಯ ವಸ್ತುಗಳು ಮನೆ ಬಾಗಿಲಿಗೆ ರವಾನೆ

ಲಕ್ನೋ: ಹೆಮ್ಮಾರಿ ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಲಕ್ನೋ, ನೋಯ್ಡಾ, ಆಗ್ರಾ, ವಾರಣಾಸಿ, ಗಾಜಿಯಾಬಾದ್, ಮೀರತ್ ಸೇರಿದಂತೆ 15 ಜಿಲ್ಲೆಗಳಲ್ಲಿ ಏಪ್ರಿಲ್ 30ರವರೆಗೂ ಲಾಕ್‍ಡೌನ್ ವಿಸ್ತರಿಸಲಾಗಿದೆ.

ಈ ಕುರಿತು ಸ್ಪಷ್ಟನೆ ನೀಡಿರುವ ಉತ್ತರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿ ಆರ್.ಕೆ. ತಿವಾರಿ, ರಾಜ್ಯದ ಲಕ್ನೋ, ಆಗ್ರಾ, ಗಾಜಿಯಾಬಾದ್, ಗೌತಂಬುದ್ ನಗರ, ಕಾನ್ಪುರ, ವಾರಣಾಸಿ, ಶಾಮ್ಲಿ, ಮೀರತ್, ಬರೇಲಿ, ಬುಲಂದ್‍ಶಹರ್, ಫಿರೋಜಾಬಾದ್, ಮಹಾರಾಜಗಂಜ್, ಸೀತಾಪುರ, ಸಹರಾನ್‍ಪುರ ಹಾಗೂ ಬಸ್ತಿ ಜಿಲ್ಲೆಗಳಲ್ಲಿ ಏಪ್ರಿಲ್ 30ರವರೆಗೆ ಲಾಕ್‍ಡೌನ್ ವಿಸ್ತರಿಸಲಾಗಿದೆ. ಅಷ್ಟೇ ಅಲ್ಲದೆ ಕೇವಲ ವೈದ್ಯಕೀಯ ಹಾಗೂ ಹೋಮ್ ಡಿಲೆವರಿ ಸಿಬ್ಬಂದಿಗೆ ಮಾತ್ರ ಹೊರಗೆ ಬರಲು ಅವಕಾಶವಿದೆ ಎಂದು ತಿಳಿಸಿದ್ದಾರೆ.

ಎಲ್ಲಾ ಅಗತ್ಯ ಸರಕುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ರಾಜ್ಯ ಸರ್ಕಾರ ವ್ಯವಸ್ಥೆ ಮಾಡಲಿದೆ. ಯಾರಿಗೂ ತಮ್ಮ ಮನೆಗಳಿಂದ ಹೊರಹೋಗಲು ಅನುಮತಿ ನೀಡುವುದಿಲ್ಲ ಎಂದು ಆರ್.ಕೆ.ತಿವಾರಿ ಖಡಕ್ ಸಂದೇಶ ರವಾನಿಸಿದ್ದಾರೆ.

ಲಾಕ್‍ಡೌನ್ ವಿಸ್ತರಿಸಿದ 15 ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಹೀಗಾಗಿ ಸಮುದಾಯ ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಈ ಕ್ರಮಕೈಗೊಳ್ಳಲಾಗಿದೆ.

Coronavirus India

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ಉತ್ತರ ಪ್ರದೇಶದಲ್ಲಿ ಬುಧವಾರ ಬೆಳಗ್ಗೆ 8 ಗಂಟೆಯವರೆಗೆ 21 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 326ಕ್ಕೆ ತಲುಪಿದೆ. ಇಲ್ಲಿವರೆಗೂ ಸೋಂಕಿಗೆ ಒಳಗಾದವರಲ್ಲಿ 21 ಜನರು ಚೇತರಿಸಿಕೊಂಡಿದ್ದು, 3 ಮಂದಿ ಮೃತಪಟ್ಟಿದ್ದಾರೆ.

ಕೊರೊನಾ ಹರಡುವುದನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಏಪ್ರಿಲ್ 14 ರವರೆಗೆ 21 ದಿನಗಳ ಲಾಕ್‍ಡೌನ್ ಘೋಷಿಸಿದ್ದರು. ಮಂಗಳವಾರ ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳು ಲಾಕ್‍ಡೌನ್ ವಿಸ್ತರಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದವು. ಆದರೆ ಕೇಂದ್ರ ಸರ್ಕಾರ ಈವರೆಗೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ.

Share This Article
Leave a Comment

Leave a Reply

Your email address will not be published. Required fields are marked *