ಬಳ್ಳಾರಿ: ಒಂದೆಡೆ ಮುಖ್ಯಮಂತ್ರಿಗಳು ಏಕಾಂಗಿಯಾಗಿ ಪ್ರವಾಹಕ್ಕೀಡಾದ ಪ್ರದೇಶಗಳಿಗೆ ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ಆದರೆ, ಕೆಲ ಶಾಸಕರು ರಾಜ್ಯದ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ಒಂದೆಡೆ ಪ್ರವಾಹ ಸಂತ್ರಸ್ತರನ್ನು ಕಾಪಾಡುವ ನೆಪದಲ್ಲಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರು ನೆಲದ ಮೇಲೆ ತೆಪ್ಪವನ್ನು ಓಡಿಸುತ್ತಾರೆ. ಇನ್ನೊಂದೆಡೆ ನನಗೆನೂ ಸಂಬಂಧವೇ ಇಲ್ಲ ಎನ್ನವಂತೆ ಮೊಳಕಾಲ್ಮೂರು ಶಾಸಕ ಶ್ರೀ ರಾಮುಲು ಅವರು ಕಬಡ್ಡಿ ಆಡುವುದರಲ್ಲಿ ನಿರತರಾಗಿದ್ದಾರೆ. ರಾಜ್ಯ ಸಂಕಷ್ಟದಲ್ಲಿ ಸಿಲುಕಿರುವಾಗ ಶಾಸಕರಿಗೆ ಅದರ ಅರಿವೇ ಇಲ್ಲದಂತಾಗಿದೆ. ರಾಜ್ಯವೇ ಕಂಬನಿ ಮಿಡಿಯುತ್ತಿದ್ದರೂ ಕೆಲ ಶಾಸಕರು ಮಾತ್ರ ಪರಿಹಾರ ಕಾರ್ಯದಲ್ಲಿ ಭಾಗಿಯಾಗುತ್ತಿಲ್ಲ.
Advertisement
Advertisement
18 ಜಿಲ್ಲೆಗಳನ್ನು ಪ್ರವಾಹ ಪೀಡಿತ ಎಂದು ಸರ್ಕಾರವೇ ಘೋಷಣೆ ಮಾಡಿದೆ. ಆದರೂ ನೆರೆ ಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿಯೊಬ್ಬರೇ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಇಳಿ ವಯಸ್ಸಿನಲ್ಲಿಯೂ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಪ್ರಯತ್ನ ಮೀರಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಅವರ ಬೆನ್ನಿಗೆ ಯಾವ ಶಾಸಕರು ಹಾಗೂ ನಾಯಕರೂ ನಿಲ್ಲುತ್ತಿಲ್ಲ. ಶಾಸಕರು ಸಿಎಂ ಕಾರ್ಯವನ್ನು ಅರಿತು ತಾವು ಒಂದು ಜಿಲ್ಲೆಯ ಉಸ್ತುವಾರಿಯನ್ನು ವಹಿಸಿಕೊಂಡು ಸಮಸ್ಯೆ ಪರಿಹರಿಸಬೇಕಿತ್ತು. ಆದರೆ, ಶಾಸಕರು ಮಾತ್ರ ತಮ್ಮದೇ ಲೋಕದಲ್ಲಿದ್ದಾರೆ ಎಂದು ಜನ ಕಿಡಿಕಾರುತ್ತಿದ್ದಾರೆ.
Advertisement
Advertisement
ಈ ಕುರಿತು ಶ್ರೀ ರಾಮುಲು ಅವರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ನಾನು ನಾಳೆಯಿಂದ ಪ್ರವಾಸಕ್ಕೆ ಹೊರಟಿದ್ದೇನೆ. ಹಗರಿಬೊಮ್ಮನಹಳ್ಳಿ, ಕೂಡ್ಲಗಿ, ರಾಯಚೂರು, ದೇವದುರ್ಗ, ಹರಪನಹಳ್ಳಿಗಳಲ್ಲಿ ಪರಿಹಾರ ಕಾರ್ಯದಲ್ಲಿ ಭಾಗಿಯಾಗುತ್ತೇನೆ. ನಾನು ಕಬ್ಬಡ್ಡಿ ಆಡಿರುವುದು ಬೇರೆ ಉದ್ದೇಶದಿಂದಲ್ಲ. ಮಕ್ಕಳು ಹಠ ಮಾಡಿದ್ದರಿಂದ ಕಬಡ್ಡಿ ಆಡಿದೆ. ಇದು ಪೂರ್ವನಿಯೋಜಿತ ಕಾರ್ಯಕ್ರಮವಾಗಿತ್ತು. ಹೀಗಾಗಿ ಭಾಗವಹಿಸಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈವರೆಗೆ ಯಾವ ಜಿಲ್ಲೆಯಲ್ಲೂ ನೆರೆ ಹಾವಳಿ ಪ್ರದೇಶಗಳಿಗೆ ಭೇಟಿ ನೀಡಿಲ್ಲ, ನನ್ನಿಂದ ತಪ್ಪಾಗಿದೆ. ಸುಷ್ಮಾ ಸ್ವರಾಜ್ ಅವರ ನಿಧನದ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿ ಮೊನ್ನೆಯಷ್ಟೇ ಬಂದೆ. ಮಕ್ಕಳೆಲ್ಲ ಈ ಕಾರ್ಯಕ್ರಮ ಆಯೋಜಿಸಿದ್ದರು. ಅಲ್ಲದೆ, ಮೂರು ತಿಂಗಳ ಹಿಂದೆಯೇ ನಿಗದಿಯಾಗಿತ್ತು. ಇವರು ರಾಜ್ಯಮಟ್ಟದಲ್ಲಿ ಭಾಗವಹಿಸಲಿದ್ದಾರೆ, ಜಿಲ್ಲಾ ಮಟ್ಟದ ಕಾರ್ಯಕ್ರಮವಾದ್ದರಿಂದ ಭಾಗವಹಿಸಬೇಕಾಯಿತು. ಇದರ ಹಿಂದೆ ಯಾವುದೇ ದುರುದ್ದೇಶವಿಲ್ಲ ಎಂದು ತಿಳಿಸಿದರು.