ಕಾರವಾರ: ತಮ್ಮ ಮಕ್ಕಳು ಉತ್ತಮ ಶಾಲೆಯಲ್ಲಿ ಕಲಿಬೇಕು. ಅದರಲ್ಲೂ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಬೇಕು ಎನ್ನುವ ಆಸೆ ಬಹುತೇಕ ಪೋಷಕರಲ್ಲಿಯೂ ಇರುತ್ತದೆ. ಹೀಗಾಗಿ ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಲಕ್ಷ ಲಕ್ಷ ಶುಲ್ಕ ಪಾವತಿಸಿ ಖಾಸಗಿ ಶಾಲೆಗೆ ಸೇರಿಸುತ್ತಾರೆ. ಇದನ್ನು ಅರಿತ ಸರ್ಕಾರವು ಬಡವರು ಮಕ್ಕಳಿಗೂ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಅವಕಾಶ ಮಾಡಿಕೊಟ್ಟಿದೆ.
ಉತ್ತರ ಕನ್ನಡ ಜಿಲ್ಲೆಯ 26 ಕಡೆಗಳಲ್ಲಿ ಈ ವರ್ಷ ಮೊದಲ ಬಾರಿಗೆ ಒಂದನೇ ತರಗತಿಯಿಂದ ಸರ್ಕಾರಿ ಶಾಲೆಯಲ್ಲಿಯೂ ಇಂಗ್ಲಿಷ್ ಮಾಧ್ಯಮ ಪ್ರಾರಂಭವಾಗಿದೆ. ಜಿಲ್ಲೆಯ ಶಿರಸಿಯ ಶಾಸಕರ ಮಾದರಿ ಶಾಲೆಯಲ್ಲಿ ಎರಡು ವಾರದ ಹಿಂದೆ ಬಡ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮಕ್ಕೆ ಪ್ರವೇಶ ನೀಡಲಾಗಿತ್ತು. ಸರ್ಕಾರದ ಮಾರ್ಗದರ್ಶನದಂತೆ 30 ಜನರನ್ನು ಮಾತ್ರ ಅಗತ್ಯ ದಾಖಲೆಯೊಂದಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದರಂತೆಯೇ ಹಲವು ಪೊಷಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ದಾಖಲು ಮಾಡಿದ್ದಾರೆ. ಶಾಲೆ ಉತ್ತಮವಾಗಿದ್ದರಿಂದ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಕಲಿತ ಮಕ್ಕಳು ಸಹ ಇಲ್ಲಿ ಪ್ರವೇಶ ಪಡೆದಿದ್ದಾರೆ. ಇದರಿಂದಾಗಿ 30 ಮಕ್ಕಳ ಸಂಖ್ಯೆ ಏಕಾಏಕಿ 69ಕ್ಕೆ ಏರಿಕೆಯಾಗಿದೆ.
ಸರ್ಕಾರದ ಮಾರ್ಗದರ್ಶಿಯಂತೆ 30 ಜನರಿಗೆ ಮಾತ್ರ ಅವಕಾಶವಿದ್ದು 39 ಮಕ್ಕಳು ಹೆಚ್ಚುವರಿಯಾಗಿ ಸೇರಿಕೊಂಡಿದ್ದಾರೆ. ಹೀಗಾಗಿ ಅಲ್ಲಿನ ಆಡಳಿತ ಮಂಡಳಿ (ಎಸ್‍ಡಿಎಂಸಿ) ಹಾಗೂ ಮುಖ್ಯ ಶಿಕ್ಷಕರು ತಮಗೆ ಬೇಕಾದವರಿಗೆ ಮಾತ್ರ ಅವಕಾಶ ಕಲ್ಪಿಸಿದ್ದಾರೆ. ಉಳಿದ ಮಕ್ಕಳನ್ನು ಎರಡು ವಾರಗಳ ಕಾಲ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಿದ್ದರೂ ಶಾಲೆಯಿಂದ ಹೊರಹಾಕಿದ್ದಾರೆ. ಇದನ್ನು ಪ್ರಶ್ನಿಸಿ ಪೂಷಕರು ಮುಖ್ಯ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಬಳಿ ಹೋದರೂ ಯಾವುದೇ ಪರಿಹಾರ ನೀಡದೇ ಕನ್ನಡ ಮಾಧ್ಯಮಕ್ಕೆ ಸೇರಿಸಿ ಎಂದು ನುಣಿಚಿಕೊಂಡಿದ್ದಾರೆ.
ಶಾಸಕರು, ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಕೆ:
ನಿಯಮದಂತೆ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿಕೊಂಡು ಈಗ ಮಕ್ಕಳನ್ನು ಹೊರಹಾಕಲಾಗಿದೆ. ತಮಗೆ ಬೇಕಾದ ಮಕ್ಕಳಿಗೆ ಅವಕಾಶ ಕೊಡಲಾಗಿದೆ. ಸಂಖ್ಯೆ ಹೆಚ್ಚು ಆಗಿದ್ದಾಗ ಕೊನೆ ಪಕ್ಷ ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಬಹುದಿತ್ತು. ಆದರೆ ಅದನ್ನೂ ಕೂಡ ಮಾಡಲಿಲ್ಲ ಎಂದು ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಮನವಿ ಮಾಡಿದ್ದಾರೆ.
ಈವರೆಗೂ ಶಾಸಕರು ಹಾಗೂ ಶಿಕ್ಷಣಾಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಮ್ಮ ಮಕ್ಕಳು ಸರ್ಕಾರಿ ಶಾಲೆಯ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಾರೆಂಬ ಆಸೆ ಇತ್ತು. ಹೀಗಾಗಿ ಈ ಶಾಲೆಗೆ ಸೇರಿಸಿದ್ದೇವು ಎಂದು ಮಕ್ಕಳ ಪೋಷಕರು ಅಳಲು ತೋಡಿಕೊಂಡಿದ್ದಾರೆ.