ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಅಂಕೋಲ ತಾಲೂಕಿನ ಗುಳ್ಳಾಪುರ, ಹೆಗ್ಗಾರ, ಶೇವ್ಕಾರ, ಕೈಗಡಿ ಗ್ರಾಮದ ಜನ ಶಿರಸಿಗೆ ಬರಲು ಗಂಗಾವಳಿ ನದಿ (Gangavali River) ದಾಟಲು ಪರದಾಡ ಬೇಕಾದ ಸ್ಥಿತಿ ನಿರ್ಮಾಣವಾಗಿದೆ. ನದಿ ದಾಟಲು ಸಣ್ಣ ತೆಪ್ಪದ ಮೂಲಕ ಜನರು ಜೀವ ಕೈಯಲ್ಲಿ ಹಿಡಿದು ಸಾಗಬೇಕಾಗಿದೆ.
ಈ ನದಿಗೆ ಇದ್ದ ಸೇತುವೆ (Bridge) 2021ರ ಅಬ್ಬರದ ಮಳೆಗೆ ಮುರಿದು ಬಿದ್ದಿತ್ತು. ಈ ವೇಳೆ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿಯವರೇ ಸ್ಥಳಕ್ಕೆ ಖುದ್ದು ಭೇಟಿ ನೀಡಿ, ಸೇತುವೆ ನಿರ್ಮಾಣದ ಭರವಸೆ ಕೊಟ್ಟಿದ್ದರು. ಅಲ್ಲದೇ 20 ಕೋಟಿ ರೂ. ಯೋಜನೆಗೆ ಎಸ್ಟಿಮೇಟ್ ಮಾಡಲಾಗಿತ್ತು. ಇನ್ನೇನೂ ಸೇತುವೆಗೆ ಹಣ ಬಿಡುಗಡೆ ಆಗುತ್ತದೆ ಎನ್ನುವುದರಲ್ಲಿ ನೆನೆಗುದಿಗೆಗೆ ಬಿದ್ದ ಪ್ರಾಜೆಕ್ಟ್, ಹೊಸ ಸರ್ಕಾರ ಬಂದಾದ ಮೇಲೂ ಹಾಗೆಯೇ ಉಳಿದಿದೆ.
ಸ್ಥಳಿಯ ಜನ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ನೀಡಿ ಬೇಸತ್ತು ತಮ್ಮ ಸ್ವಂತ ಖರ್ಚಿನಲ್ಲಿ ತೆಪ್ಪ ನಿರ್ಮಿಸಿ ಜೀವ ಕೈಯಲ್ಲಿ ಹಿಡಿದು ನಿತ್ಯ ಸಂಚರಿಸುತಿದ್ದಾರೆ. ಸುಮಾರು 3,000 ಜನಸಂಖ್ಯೆ ಇರುವ ಈ ಊರಿಗೆ ಬಸ್ ಸಂಪರ್ಕ ಸಹ ಇಲ್ಲ. ಅನ್ಯ ಮಾರ್ಗದಲ್ಲಿ ಸಂಚರಿಸಲು ಸಹ ತೊಂದರೆಯಾಗಿದೆ.
ಈ ಹಿಂದೆ ಸೇತುವೆ ಬಿದ್ದಾಗ ಗ್ರಾಮದ ಜನ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್‌ರವರ ಅನುದಾನ ಹಾಗೂ ತಮ್ಮ ಹಣದಲ್ಲಿ ಒಟ್ಟು 20 ಲಕ್ಷ ರೂ. ಖರ್ಚು ಮಾಡಿ ಚಿಕ್ಕ ಸೇತುವೆ ನಿರ್ಮಾಣ ಮಾಡಿಕೊಡಲಾಗಿತ್ತು. ಈ ಬಾರಿಯ ಮಳೆ ಆರ್ಭಟಕ್ಕೆ ಮತ್ತೆ ಆ ಸೇತುವೆಯೂ ಕೊಚ್ಚಿ ಹೋಗಿದೆ.
ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಿ ಸಾಕಾದ ಜನ, ವಿದ್ಯಾರ್ಥಿಗಳು, ಕೂಲಿ ಕೆಲಸಗಾರರು, ಕೃಷಿಕರು ಓಡಾಡಲು ಮತ್ತೆ ತಮ್ಮ ಹಣ ವಿನಿಯೋಗಿಸಿ ನದಿಗೆ ಹಗ್ಗ ಕಟ್ಟಿ ಅದಕ್ಕೆ ತೆಪ್ಪವನ್ನು ಜೋಡಿಸಿ ಸಂಚಾರ ವ್ಯವಸ್ಥೆ ಕಲ್ಪಿಸಿಕೊಂಡಿದ್ದಾರೆ. ಈ ವ್ಯವಸ್ಥೆ ನದಿ ಪ್ರವಾಹ ಹೆಚ್ಚಾಗಿದ್ದಾಗ ದಾಟಲು ಕಷ್ಟವಾಗುತ್ತದೆ.
ತೆಪ್ಪ ನಿರ್ಮಾಣಕ್ಕೆ ಸಹಕರಿಸಿರುವ ಅನಂತ್ ಗಾಂವ್ಕರ್ ಈ ಬಗ್ಗೆ ಮಾತನಾಡಿ, ಸರ್ಕಾರ ಸೇತುವೆ ನಿರ್ಮಿಸಿಕೊಡುವ ನಿರೀಕ್ಷೆ ಇದೆ. ಆದರೆ ಪ್ರತಿ ದಿನ ಕೂಲಿ ಕಾರ್ಮಿಕರು, ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ. ಹೀಗಾಗಿ ಈ ತೆಪ್ಪದ ವ್ಯವಸ್ಥೆ ಮಾಡಲಾಗಿದೆ. ನೀರಿನ ಹರಿವು ಹೆಚ್ಚಾಗಿದ್ದರೇ ಹಗ್ಗ ಎಳೆದುಕೊಂಡು ದಡ ಸೇರೋದು ಕಷ್ಟವಾಗುತ್ತದೆ. ಹೀಗಾಗಿ ಸರ್ಕಾರ ಸೇತುವೆ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.