ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಹ ತಂದ ತೊಂದರೆ ಈಗ ವಿಘ್ನ ನಿವಾರಕ ಗಣಪತಿಗೂ ತಟ್ಟಿದ್ದು, ನೆರೆ ಸಂತ್ರಸ್ತರು ಹಬ್ಬವನ್ನೇ ಮುಂದೂಡಿದ್ದಾರೆ.
ಗಣೇಶ ಚತುರ್ಥಿ ಬಂತೆಂದರೇ ಇಡೀ ಜಿಲ್ಲೆಯ ಊರು ಕೇರಿಗಳಲ್ಲಿ ವಿಧ ವಿಧವಾದ ಗಜಮುಖನ ದರ್ಶನ ಸಡಗರ ತುಂಬಿ ತುಳುಕುತಿತ್ತು. ಆದರೆ ಈಗ ಜಿಲ್ಲೆಯ ಕರಾವಳಿ ಭಾಗದ ಕಾರವಾರ, ಅಂಕೋಲ, ಯಲ್ಲಾಪುರ ಗ್ರಾಮಗಳಲ್ಲಿ ಸಂಭ್ರಮವಿಲ್ಲ, ಎಲ್ಲೆಲ್ಲೂ ಸೂತಕದ ಛಾಯೆ ಕಾಣಿಸಿಕೊಂಡಿದೆ.
Advertisement
Advertisement
ಒಂದೆಡೆ ಪ್ರವಾಹ ತಗ್ಗಿದ್ದರೂ ಮಳೆಯ ಆರ್ಭಟ ಮುಂದುವರಿದಿದೆ. ಕೆಲವರು ಕುಸಿದು ಬಿದ್ದ ಮನೆಗಳ ಅವಶೇಷಗಳಲ್ಲಿ ಸಾಮಗ್ರಿಗಳನ್ನು ಹುಡುಕುತ್ತಾ, ಕೆಸರಲ್ಲಿ ಬಿದ್ದ ಪಾತ್ರೆಗಳನ್ನು ಎತ್ತಿ ಹುಡುಕಿ ತಂದು ತೊಳೆದು ಸ್ವಚ್ಛ ಮಾಡುತ್ತಾ ದುಖಃದ ದಿನ ಕಳೆಯುತ್ತಿದ್ದಾರೆ. ಹಲವರು ಮನೆಯೊಳಗೆ ನುಗ್ಗಿದ ನೀರಿನಿಂದಾದ ಗಲೀಜನ್ನು ಸರಿಮಾಡುವುದರಲ್ಲಿ ನಿರತರಾಗಿದ್ದಾರೆ. ಎಡೆಬಿಡದೆ ಮಳೆಯಿಂದ ತೇವ ತುಂಬಿದ ಮನೆಗಳು ಅಲ್ಲಲ್ಲಿ ಮುಗ್ಗರಸಿ ಬೀಳುತ್ತಿವೆ.
Advertisement
ಒಂದೆಡೆ ಆರ್ಥಿಕ ಸಂಕಷ್ಟ, ಮತ್ತೊಂದೆಡೆ ಇರಲು ಸೂರು ಸಹ ಇಲ್ಲದ ಪರಿಸ್ಥಿತಿ ಪ್ರವಾಹ ಪೀಡಿತ ಗ್ರಾಮಗಳಲ್ಲಿ ಎದುರಾಗಿದೆ. ಅರುಣನ ಅಬ್ಬರದಿಂದ ಮನೆ ಕಳೆದುಕೊಂಡ ಸಂತ್ರಸ್ತರು ಗಣಪತಿ ಹಬ್ಬವನ್ನು ಅಕ್ಟೋಬರ್ 2ರ ವಿನಾಯಕ ಚತುರ್ಥಿ ದಿನದಂದು ಮುಂದೂಡಿದ್ದಾರೆ.
Advertisement
ಭರ್ಜರಿ ಸಂಭ್ರಮಕ್ಕೂ ಬಿತ್ತು ಕತ್ತರಿ:
ಸಾರ್ವಜನಿಕ ಸಂಘಟನೆಯ ಗಣಪತಿಗೂ ವರುಣನ ಅಬ್ಬರದ ಬಿಸಿ ತಟ್ಟಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲು 30ರಿಂದ 40 ಅಡಿ ಎತ್ತರದ ಗಣೇಶ ಮೂರ್ತಿಗಳನ್ನು ಸಿದ್ಧಪಡಿಸಲಾಗಿತ್ತು. ಮಳೆಗೆ ಮೂರ್ತಿಗಳು ಹಾಳಾಗಿದ್ದರಿಂದ ಕಾರವಾರ ತಾಲೂಕಿನ ಮಲ್ಲಾಪುರ, ಕದ್ರಾ, ಕುನ್ನಿಪೇಠ್‍ನಲ್ಲಿ ಬೃಹತ್ ಗಣಪತಿ ಬದಲಿಗೆ ಚಿಕ್ಕ ಮೂರ್ತಿಗೆ ಸೀಮಿತವಾಗಿ ಪೂಜೆ ಮಾಡಲಾಗುತ್ತಿದೆ.
ಮಣ್ಣಿಲ್ಲ, ಗಣಪತಿಯೂ ಇಲ್ಲ!
ಜಿಲ್ಲೆಯ ಕದ್ರ, ಮಲ್ಲಾಪುರ, ಕಿನ್ನರ, ಅಂಕೋಲದ ಹಲವು ಗ್ರಾಮಗಳಲ್ಲಿ ಮಣ್ಣಿನ ಗಣೇಶ ಮೂರ್ತಿಯನ್ನು ತಯಾರಿಸಲಾಗುತ್ತದೆ. ಆದರೆ ಪ್ರವಾಹದಿಂದಾಗಿ ಮಣ್ಣಿನ ಸಮಸ್ಯೆ ಎದುರಾಗಿದೆ. ಹೀಗಾಗಿ ಗಣಪತಿ ಮೂರ್ತಿಯ ದರದ ಏರಿಕೆಯಾಗಿದೆ. ಇತ್ತ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳ ಮೇಲೆ ನಿಷೇಧ ಹೇರಿದ್ದರಿಂದ ಮಣ್ಣಿನ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ.