ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಇತಿಹಾಸ ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಆಡಳಿತವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮಹಾಬಲೇಶ್ವರ ದೇವಸ್ಥಾನದ ಆಡಳಿವನ್ನು ಮುಂದಿನ ಸೋಮವಾರದ ಒಳಗಾಗಿ ರಾಮಚಂದ್ರಪುರ ಮಠಕ್ಕೆ ವಹಿಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಗುರುವಾರ ಸೂಚನೆ ನೀಡಿತ್ತು. ಹೀಗಾಗಿ ರಾಜ್ಯ ಸರ್ಕಾವು ಮಹಾಬಲೇಶ್ವರ ದೇವಸ್ಥಾನದ ಚರ-ಸ್ಥಿರ ಆಸ್ತಿ, ದಾಖಲೆ ಹಾಗೂ ಆಭರಣಗಳು ರಾಮಚಂದ್ರಪುರ ಮಠಕ್ಕೆ ವರ್ಗಾವಣೆಗೆ ಅಧಿಕೃತ ಆದೇಶ ನೀಡಿದೆ.
ಸುಪ್ರೀಂಕೋರ್ಟ್ ಹೇಳಿದ್ದೇನು?:
ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್, ಎ.ಎಂ.ಕನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರಿದ್ದ ನ್ಯಾಯ ಪೀಠವು, ಕೋರ್ಟ್‍ನ ಈ ಹಿಂದಿನ ಆದೇಶಗಳಲ್ಲಿ ಯಾವುದೇ ಗೊಂದಲಗಳಿಲ್ಲ. ದೇವಸ್ಥಾನದ ಆಡಳಿತ ನಿರ್ವಹಣೆ ರಾಮಚಂದ್ರಾಪುರ ಮಠಕ್ಕೆ ಸೇರಬೇಕು ಎಂದು ಸ್ಪಷ್ಟವಾಗಿಯೇ ನಾವು ಹೇಳಿದ್ದೇವೆ. ಈಗಲೂ ಅದನ್ನೇ ಹೇಳುತ್ತಿದ್ದೇವೆ. ಸೋಮವಾರದೊಳಗೆ ಮಠಕ್ಕೆ ದೇವಸ್ಥಾನದ ಆಡಳಿತ ವಹಿಸಿಕೊಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು.
ಏನಿದು ಪ್ರಕರಣ?
2008ರ ಆಗಸ್ಟ್ 12ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರ ಗೋಕರ್ಣದ ಐತಿಹಾಸಿಕ ಗೋಕರ್ಣ ದೇವಾಲಯವನ್ನು ರಾಮಚಂದ್ರಾಪುರ ಮಠದ ಸುಪರ್ದಿಗೆ ನೀಡಿತ್ತು. ಸರ್ಕಾರದ ಆದೇಶವನ್ನು ಪ್ರಶ್ನಿಸಿ ಬಾಲಚಂದರ್ ದೀಕ್ಷಿತ್ ಮತ್ತು ನರಹರಿ ಕೃಷ್ಣ ಹೆಗ್ಡೆ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಕಳೆದ 10 ವರ್ಷಗಳಿಂದ ಗೋಕರ್ಣ ದೇಗುಲದ ಆಡಳಿತ ನಡೆಸುತ್ತಿದ್ದ ರಾಮಚಂದ್ರಾಪುರ ಮಠಕ್ಕೆ ಹೈಕೋರ್ಟ್ ಬ್ರೇಕ್ ಹಾಕಿ, ಸೆಪ್ಟೆಂಬರ್ 10ರಿಂದ ಉಸ್ತುವಾರಿ ಸಮಿತಿ ಅಸ್ಥಿತ್ವಕ್ಕೆ ಬರಬೇಕು ಎಂದು ಆದೇಶ ಹೊರಡಿಸಿತ್ತು.
ಹೈಕೋರ್ಟ್ ಆದೇಶ ಪ್ರಶ್ನಿಸಿ ಮಠದ ಪರವಾಗಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತ್ತು. ಕಳೆದ ಸೆಪ್ಟೆಂಬರ್ 7 ರಂದು ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಆಗಸ್ಟ್ 10 ರಂದು ರಾಜ್ಯ ಹೈಕೋರ್ಟ್ ಹೊರಡಿಸಿದ್ದ ಅಂತಿಮ ಆದೇಶದ ನಂತರ ತಾನು ಹೊರಡಿಸಿರುವ ಮಧ್ಯಾಂತರ ತೀರ್ಪು ಮುಂದುವರಿಯಲಿದೆ ಎಂದು ಹೇಳಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv