ಕಾರವಾರ: ವಿವಿಧ ರೀತಿಯ ಉದ್ದೇಶಗಳಿಗೆ ದಾನ ಕೇಳುವುದನ್ನು ನೋಡಿದ್ದೇವೆ. ಆದರೆ ಡೀಸೆಲ್ ಕೊರತೆಯಿಂದ ಬಿಎಸ್‍ಎನ್‍ಎಲ್ ಟವರ್ ಕಾರ್ಯನಿರ್ವಹಿಸದ್ದಕ್ಕೆ ಗ್ರಾಮಸ್ಥರು ಡೀಸೆಲ್ ದಾನ ಮಾಡುವಂತೆ ಕೇಳುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಶಿರಸಿಯ ತಾರಗೋಡಿ ಇಂತಹದ್ದೊಂದು ಪ್ರಸಂಗ ನಡೆದಿದ್ದು, ಶಿರಸಿಯಿಂದ ಮುಂಡಗೋಡಿಗೆ ಹೋಗುವ ಮಾರ್ಗದಲ್ಲಿ 15 ಕಿ.ಮೀ ಕ್ರಮಿಸಿದರೆ ತಾರಗೋಡು ಗ್ರಾಮ ಸಿಗುತ್ತದೆ. ಸಂಪೂರ್ಣ ಅರಣ್ಯ ಇರುವುದರಿಂದ ಈ ಭಾಗದಲ್ಲಿ ಖಾಸಗಿ ಮೊಬೈಲ್ ಕಂಪನಿಗಳ ಸಿಗ್ನಲ್ ಸಿಗುವುದಿಲ್ಲ. ಹೀಗಾಗಿ ಅನೇಕ ಜನರು ಸರ್ಕಾರಿ ಸಾಮ್ಯದ ಬಿಎಸ್‍ಎನ್‍ಎಲ್ ಮೊಬೈಲ್ ಟವರ್ ನಂಬಿಕೊಂಡಿದ್ದಾರೆ. ಸ್ಥಿರ ದೂರವಾಣಿ ಸಹ ಇಲ್ಲಿನ ಮನೆಗಳಲ್ಲಿ ಇಲ್ಲ. ಹೀಗಾಗಿ ಇನ್ನೂ 2ಜಿ, 3ಜಿ ಜಮಾನದಲ್ಲಿರುವ ಬಿಎಸ್‍ಎನ್‍ಎಲ್ ನಂಬರ್ ನಿಂದ ಕಾಲ್ ಮಾಡಿ ಮಾತನಾಡಲು ಕಷ್ಟಪಡವ ಪರಿಸ್ಥಿತಿ ಇದೆ.
Advertisement
Advertisement
ಊರಿನ ಸಮೀಪದಲ್ಲಿರುವ ಬಹಿರುಂಬೆ ಗ್ರಾಮದಲ್ಲಿ ಬಿಎಸ್‍ಎನ್‍ಎಲ್ ಟವರ್ ಇದೆ. ಆದರೆ ವಿದ್ಯುತ್ ಸಂಪರ್ಕವಿದ್ದಾಗ ಮಾತ್ರ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಆಗ ಮಾತ್ರ ಸಿಗ್ನಲ್ ನೀಡುತ್ತದೆ. ಹಳ್ಳಿಯಾದ್ದರಿಂದ ದಿನಕ್ಕೆ ನಾಲ್ಕೈದು ಬಾರಿ ವಿದ್ಯುತ್ ಕಡಿತಗೊಳ್ಳುತ್ತದೆ. ಹೀಗಾಗಿ ಮೊಬೈಲ್ ಸಿಗ್ನಲ್ ಸಿಗದೆ ಊರಿನ ಜನ ಮೊಬೈಲ್ ಸಂಪರ್ಕವನ್ನೇ ಕಡಿದುಕೊಂಡಿದ್ದಾರೆ.
Advertisement
ಈ ಕುರಿತು ಬಿಎಸ್‍ಎನ್‍ಎಲ್ ಅಧಿಕಾರಿಗಳಿಗೆ ಮನವಿ ಮಾಡಿ ಗ್ರಾಮಸ್ಥರು ಸುಸ್ತಾಗಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಸಾಕಷ್ಟು ಬಾರಿ ಗಲಾಟೆಯನ್ನೂ ಮಾಡಿದ್ದಾರೆ. ಆದರೆ ಆರು ತಿಂಗಳಿಂದ ಸಂಬಳವೇ ಆಗದ ಬಿಎಸ್‍ಎನ್‍ಎಲ್ ಸಿಬ್ಬಂದಿ, ಸಂಸ್ಥೆಯಿಂದ ಡೀಸೆಲ್ ಕೊಟ್ಟರೆ ವಿದ್ಯುತ್ ಇಲ್ಲದ ಸಮಯದಲ್ಲಿ ಜನರೇಟರ್ ಆನ್ ಮಾಡುತ್ತೇವೆ ಎಂದು ಕೈ ಚಲ್ಲಿ ಕುಳಿತಿದ್ದಾರೆ. ಹೀಗಾಗಿ ತಾರಗೋಡಿನ ಜನ ಬಿಎಸ್‍ಎನ್‍ಎಲ್ ಟವರ್ ಜನರೇಟರ್ ಆನ್ ಮಾಡಲು ಖುದ್ದು ದಾನಿಗಳ ಮೊರೆಹೋಗಿದ್ದಾರೆ. ಊರಿನ ರಸ್ತೆ ಬಳಿ ಖಾಲಿ ಡೀಸೆಲ್ ಬ್ಯಾರಲ್ ಇಟ್ಟು ಅದರ ಮೇಲೆ ಬಿಎಸ್‍ಎನ್‍ಎಲ್ ಟವರ್ ಜನರೇಟರ್‍ಗೆ ಡೀಸೆಲ್ ಬೇಕಾಗಿದೆ. ದಾನಿಗಳು ಡಿಸೆಲ್ ದಾನ ಮಾಡಿ ಎಂದು ಬರೆದಿದ್ದಾರೆ.