ಕಾರವಾರ: ಅನರ್ಹ ಶಾಸಕರು ಹತಾಶರಾಗಿದ್ದಾರೆ ಎನ್ನುವುದು ಕೇವಲ ಊಹಾಪೋಹ. ನಾವು ಅನರ್ಹರೂ ಅಲ್ಲ, ಅನಾಥರೂ ಅಲ್ಲ ಎಂದು ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದರು.
ಶಿರಸಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸ್ವಯಂ ಘೋಷಿತ ಬುದ್ಧಿವಂತ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ರಾಜಕೀಯ ದ್ವೇಷ ಪ್ರೇರಿತರಾಗಿ ನಮ್ಮನ್ನು ಅನರ್ಹಗೊಳಿಸಿದ್ದಾರೆ. ಅವರು ಮನಸ್ಸಿಗೆ ಬಂದಂತೆ ನಿರ್ಣಯ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ನಾಯಕರ ಹಾಗೂ ಮುಖಂಡರ ಒತ್ತಡಕ್ಕೆ ಒಳಗಾಗಿ ಅಥವಾ ಅವರ ಓಲೈಕೆಗಾಗಿ ಹೀಗೆ ಮಾಡಿದ್ದಾರೆ ಎಂದು ಕಿಡಿಕಾರಿದರು.
ಅತೃಪ್ತ 15 ಜನ ಶಾಸಕರು ಸದನಕ್ಕೆ ಹಾಜರಾಗಬಹುದು, ಇಲ್ಲವೇ ಹಾಜರಾಗದೇ ಇರಬಹುದು. ಇದು ಶಾಸಕರ ವಿವೇಚನೆಗೆ ಬಿಟ್ಟ ವಿಚಾರ ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು. ಆದರೂ ರಮೇಶ್ ಕುಮಾರ್ ಅವರು ನಾವು ಸದನಕ್ಕೆ ಹಾಜರಾಗಿಲ್ಲವೆಂದು ಅನರ್ಹಗೊಳಿಸಿದ್ದಾರೆ. ಇದು ರಾಜಕೀಯ ದ್ವೇಷ ಪ್ರೇರಿತ ನಿರ್ಣಯವಾಗಿದೆ ಎಂದು ಆರೋಪಿಸಿದರು.
ಉತ್ತರ ಕನ್ನಡ ಜಿಲ್ಲೆಯಿಂದ ನಾನೊಬ್ಬನೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಗುತ್ತದೆ ಎಂಬ ನಿರೀಕ್ಷೆಯಿದೆ. ನಾವು ಎಲ್ಲಿಯೂ ಬಿಜೆಪಿ ಸೇರುತ್ತೇವೆ ಅಂತ ಹೇಳಿಕೆ ನೀಡಿಲ್ಲ. ಮೈತ್ರಿಯಿಂದ ಮೋಸಕ್ಕೆ ಒಳಗಾಗಿರುವ ಕಾರಣ ರಾಜೀನಾಮೆ ನೀಡಿದ್ದೇವೆ. ನ್ಯಾಯಾಲಯದ ಅಂತಿಮ ನಿರ್ಣಯ ಬಂದ ಮೇಲೆ ನಾವೆಲ್ಲರೂ ಸೇರಿ ನಿರ್ಣಯ ತೆಗೆದುಕೊಳ್ಳುತ್ತೇವೆ. ಜೊತೆಗೆ ಕಾಂಗ್ರೆಸ್ ನಾಯಕರ ಒತ್ತಡವನ್ನು ಬಹಿರಂಗಪಡಿಸುತ್ತೇವೆ ಎಂದು ಹೇಳಿದರು.