ಕಾರವಾರ: ಚಿರತೆ ಮರಿಯೊಂದು ಭಟ್ಕಳ ತಾಲೂಕಿನ ಮಾರುಕೇರಿ ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ ಆಗಾಗ ಜನರಿಗೆ ಕಾಡಿಸಿಕೊಂಡು ಭಯ ಹುಟ್ಟಿಸಿತ್ತು. ಆದರೆ ಅನುಮಾನಸ್ಪದ ರೀತಿ ಮೃತಪಟ್ಟಿದ್ದು, ಗುರುವಾರ ಕಲೇಬರ ಪತ್ತೆಯಾಗಿದೆ.
ಎರಡು ವರ್ಷದೊಳಗಿನ ಮರಿ ಚಿರತೆ ಇದಾಗಿದ್ದು, ಮಾರುಕೇರಿ ಗ್ರಾಮದ ಹೊರ ವಲಯದಲ್ಲಿ ಬೇಟೆ ಭಕ್ಷಿಸುತಿತ್ತು. ಆದರೆ ಆರೋಗ್ಯವಾಗಿದ್ದ ಚಿರತೆ ಮರಿ ಅರಣ್ಯಕ್ಕೆ ಸಮೀಪವಿರುವ ಮನೆಗಳ ಬಳಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹೀಗಾಗಿ ಯಾರೋ ದುಷ್ಕರ್ಮಿಗಳು ವಿಷ ಹಾಕಿ ಸಾಯಿಸಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗಿದೆ.
Advertisement
Advertisement
ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಚಿರತೆ ಮರಿ ದೇಹದಲ್ಲಿ ಯಾವುದೇ ಗಾಯಗಳು ಸಹ ಪತ್ತೆಯಾಗಿಲ್ಲ. ವಿಷವಿಟ್ಟು ಕೊಂದಿರುವ ಸಂಶಯವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ವ್ಯಕ್ತಪಡಿಸಿದ್ದು, ಚಿರತೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.