ಯೋಗಿ ಸರ್ಕಾರದಿಂದ ಪ್ರತಿಭಟನಾಕಾರರ 67 ಅಂಗಡಿ ಮುಟ್ಟುಗೋಲು

Public TV
2 Min Read
yogi adityanath

ಲಕ್ನೋ: ಪೌರತ್ವ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ಸಾರ್ವಜನಿಕ ಆಸ್ತಿಯನ್ನು ನಾಶ ಮಾಡಿದ ಪ್ರತಿಭಟನಾಕಾರರ 67 ಅಂಗಡಿಗಳನ್ನು ಉತ್ತರ ಪ್ರದೇಶದ ರಾಜ್ಯ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ.

ಈ ಅಂಗಡಿಗಳು ಪೌರತ್ವ ವಿಧೇಯಕ ಕಾಯ್ದೆಯ ವಿರೋಧಿ ಪ್ರತಿಭಟನೆಯಲ್ಲಿ ಹಿಂಸಾತ್ಮಕವಾಗಿ ಸಾರ್ವಜನಿಕ ಆಸ್ತಿ ಹಾನಿ ಉಂಟುಮಾಡಿದರಿಗೆ ಸೇರಿದೆ. ಈ ವಿಚಾರದ ಬಗ್ಗೆ ನಾವು ತನಿಖೆ ಮಾಡುತ್ತಿದ್ದು, ಒಂದು ವೇಳೆ ತನಿಖೆಯಲ್ಲಿ ಈ ಅಂಗಡಿಗಳು ಅವರಿಗೆ ಸೇರದೇ ಇದ್ದರೆ ಅವುಗಳನ್ನು ವಶಕ್ಕೆ ಪಡೆದುಕೊಳ್ಳುತ್ತೇವೆ ಎಂದು ಉತ್ತರ ಪ್ರದೇಶ ರಾಜ್ಯ ಸರ್ಕಾರದ ವಕ್ತಾರರು ಹೇಳಿದ್ದಾರೆ.

shops 1577075693

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಹಿಂಸಾತ್ಮಕ ಪ್ರತಿಭಟನೆಯಲ್ಲಿ ಭಾಗಿಯಾಗಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಮತ್ತು ಅವರಿಗೆ ದಂಡ ವಿಧಿಸುವ ಮೂಲಕ ಸಾರ್ವಜನಿಕರ ಆಸ್ತಿಯನ್ನು ಮತ್ತೆ ದುರಸ್ಥಿ ಮಾಡಿಸಲಾಗುವುದು ಎಂದು ಹೇಳಿದ್ದರು. ಮುಖ್ಯಮಂತ್ರಿಯವರ ಈ ಹೇಳಿಕೆಯಂತೆ ಪ್ರತಿಭಟನಾಕರರ 67 ಅಂಗಡಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಪೌರತ್ವ ಕಾಯ್ದೆ ವಿರುದ್ಧದ ಪ್ರತಿಭಟನೆ ಹಿಂಸಾತ್ಮಕ ಮಾರ್ಗದಲ್ಲಿ ನಡೆದಿದ್ದು. ಇದರಲ್ಲಿ ರಾಜ್ಯದ ಹಲವಾರು ಜಿಲ್ಲೆಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯದ ಅಪಾರ ಆಸ್ತಿ ನಾಶವಾಗಿದೆ. ನಾವು ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದವರ ಎಲ್ಲ ಆಸ್ತಿಯನ್ನು ವಶಪಡಿಸಿಕೊಂಡು ಅವುಗಳನ್ನು ಹರಾಜು ಹಾಕಿ ಅದರಿಂದ ನಷ್ಟವನ್ನು ಸರಿದೂಗಿಸಲಾಗುವುದು ಎಂದು ಯೋಗಿ ಅದಿತ್ಯನಾಥ್ ಹೇಳಿದ್ದರು.

CAA Lucknow

ಗಲಭೆಯ ಸಮಯದಲ್ಲಿ ಸಿಸಿಟಿವಿ ದೃಶ್ಯವಾಳಿಗಳು ಮತ್ತು ಘಟನೆಯ ವಿಡಿಯೋವನ್ನು ರೆಕಾರ್ಡಿಂಗ್ ಮಾಡಿ ಅದರಲ್ಲಿ ಕಂಡು ಬರುವ ವ್ಯಕ್ತಿಗಳನ್ನು ಗುರುತಿಸಿ ಕ್ರಮಕೈಗೊಳ್ಳಲಾಗುವುದು ಎಂದು ಯೋಗಿ ಹೇಳಿದ್ದಾರೆ. ಆದರೆ ಮುಜಫರ್ ನಗರದಲ್ಲಿ ಒಂದೇ ಬಾರಿ ಜನಸಮೂಹ ಅಂಗಡಿಗಳ ಹೊರಗೆ ಜಮಾವಣೆಗೊಂಡಿತ್ತು. ಇದರಲ್ಲಿ ಅಂಗಡಿಯ ಮಾಲೀಕ ಯಾರು ಎಂದು ತಿಳಿಯಲು ಆಗಿಲ್ಲ. ಇದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಆ ಜಿಲ್ಲೆಯ ಎಸ್‍ಪಿ ಅಭಿಷೇಕ್ ಯಾದವ್ ಅವರು ಹೇಳಿದ್ದಾರೆ.

ಮುಜಫರ್ ನಗರ ಸೇರಿದಂತೆ ಉತ್ತರ ಪ್ರದೇಶದ 12 ಜಿಲ್ಲೆಗಳಲ್ಲಿ ಶುಕ್ರವಾರ ನಮಾಜ್ ಮುಗಿದ ಮಧ್ಯಾಹ್ನದ ನಂತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಈ ಪ್ರತಿಭಟನೆಯಲ್ಲಿ ಸುಮಾರು 10 ಬೈಕ್ ಮತ್ತು ಹಲವಾರು ಕಾರುಗಳನ್ನು ಸುಟ್ಟು ಹಾಕಲಾಗಿತ್ತು. ಉದ್ರಿಕ್ತ ಪ್ರತಿಭಟನಾಕಾರರು ಸಾರ್ವಜನಿಕ ಆಸ್ತಿಯನ್ನು ದ್ವಂಸಗೊಳಿಸಿದ್ದರು. ಈ ಪ್ರತಿಭಟನೆಯಲ್ಲಿ 12 ಮಂದಿ ಪೊಲೀಸ್ ಸಿಬ್ಬಂದಿ ಸೇರಿದಂತೆ ಸುಮಾರು 30 ಜನರು ಗಾಯಗೊಂಡಿದ್ದರು.

CAA Lucknow 1

ಉತ್ತರ ಪ್ರದೇಶದಲ್ಲಿ ಇನ್ನೂ ಪ್ರತಿಭಟನೆಯ ಕಿಚ್ಚು ಹಾಗೇ ಉಳಿದಿದ್ದು, ರಾಜ್ಯದ ಕೆಲ ಸೂಕ್ಷ್ಮ ಪ್ರದೇಶದಲ್ಲಿ ನಿಷೇಧಾಜ್ಞೆಯನ್ನು ಮುಂದುವರಿಸಲಾಗಿದೆ. ಇಂಟರ್ ನೆಟ್ ಸೌಲಭ್ಯವನ್ನು ಕಡಿತ ಮಾಡಲಾಗಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ ಸುಮಾರು 879 ಜನರನ್ನು ಬಂಧಿಸಲಾಗಿದೆ. ಈವರೆಗೆ 131 ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *