ಲಕ್ನೋ: ಪ್ರೀತಿಸಿದ ಹುಡುಗನ ಜೊತೆ ಮನೆ ಬಿಟ್ಟು ಓಡಿಹೋಗಿದ್ದಕ್ಕೆ 17 ವರ್ಷದ ಹುಡುಗಿಯ ಮೇಲೆ ಕುಟುಂಬಸ್ಥರೇ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಉತ್ತರಪ್ರದೇಶದ ಮುಜಫರ್ ನಗರದ ದಂಧೇಡಾ ಗ್ರಾಮದಲ್ಲಿ ನಡೆದಿದೆ.
ನಾನು ಪ್ರಿಯಕರನ ಜೊತೆ ಓಡಿ ಹೋಗಿದ್ದಕ್ಕೆ ಕುಟುಂಬದವರೇ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ದೂರು ನೀಡಿದ್ದಾಳೆ. ಈ ದೂರಿನ ಅನ್ವಯ ಆಕೆಯ ಅಪ್ಪ, ಅಣ್ಣ ಮತ್ತು ಇಬ್ಬರು ಚಿಕ್ಕಪ್ಪಂದಿರನ್ನು ಪೊಲೀಸರು ಬಂಧಿಸಿದ್ದಾರೆ.
ಏನಿದು ಪ್ರಕರಣ?
ಅದೇ ಗ್ರಾಮದ ಮೂರು ಮಕ್ಕಳ ತಂದೆಯಾಗಿರುವ, 32 ವರ್ಷದ ವ್ಯಕ್ತಿಯ ಜೊತೆ ಇದೇ ವರ್ಷದ ಜುಲೈ ಮತ್ತು ಅಕ್ಟೋಬರ್ ನಲ್ಲಿ ಎರಡು ಬಾರಿ ಯುವತಿ ಓಡಿ ಹೋಗಿದ್ದಳು. ಈ ವೇಳೆ ಪೋಷಕರು ತನ್ನ ಮಗಳನ್ನು ಅಪಹರಣ ಮಾಡಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು.
ಈ ದೂರಿನ ಆಧಾರದಲ್ಲಿ ಸಂತ್ರಸ್ತೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದರು. ಈ ಸಂದರ್ಭದಲ್ಲಿ ಸಂತ್ರಸ್ತೆ ನಾನೇ ಇಷ್ಟ ಪಟ್ಟು ಆತನ ಹಿಂದೆ ಓಡಿ ಹೋಗಿದ್ದೆ ಎಂದು ಹೇಳಿದ ಮೇಲೆ ಆತನನ್ನು ಬಿಟ್ಟು ಕಳುಹಿಸಿದ್ದರು.
ಮನೆಯವರು ಎರಡನೇ ಬಾರಿ ಆರೋಪಿ ವ್ಯಕ್ತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದಾಗ, ಆಕೆ ಅಲಹಾಬಾದ್ ಹೈಕೋರ್ಟ್‍ಗೆ ನವೆಂಬರ್ 2 ರಂದು ಅರ್ಜಿ ಸಲ್ಲಿಸಿ ನರ್ಸಿಂಗ್ ಹೋಮ್ ಒಂದರಲ್ಲಿ ತನ್ನ ಮನೆಯವರೇ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಬಲವಂತದಿಂದ ಗರ್ಭಪಾತ ಮಾಡಿಸಲು ಮುಂದಾಗಿದ್ದರು ಎಂದು ತಿಳಿಸಿದ್ದಳು.
ಈಗ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 376ಡಿ ಮತ್ತು 313 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಸಂತ್ರಸ್ತೆಯ ತಾಯಿ ಮತ್ತು ಅತ್ತಿಗೆ ಪ್ರತಿಕ್ರಿಯಿಸಿ, ತಮ್ಮ ಮನೆಯವರ ವಿರುದ್ಧ ಮಾಡಲಾಗಿರುವ ಆರೋಪಗಳು ಸುಳ್ಳು ಎಂದು ಹೇಳಿದ್ದಾರೆ.