– 1 ಮಾತ್ರೆ ನುಂಗಿದರೆ 40 ತಾಸು ನಿದ್ರೆ ಬರಲ್ಲ
– ಮಾತ್ರೆಯಿಂದ ಗಂಭೀರ ಆರೋಗ್ಯ ಸಮಸ್ಯೆ
ಲಕ್ನೋ: ಇನ್ನೇನು ಕೆಲವೇ ದಿನಗಳಲ್ಲಿ 10ನೇ ತರಗತಿ ಪರೀಕ್ಷೆ (SSLC Exam) ನಡೆಯುತ್ತದೆ. ಈ ಸಮಯದಲ್ಲಿ ನಿದ್ದೆ ಬರಬಾರದೆಂದು ಶಾಲಾ ಮಕ್ಕಳು ಭಯೋತ್ಪಾದಕರು ತೆಗೆದುಕೊಳ್ಳುವಂತಹ ಮಾತ್ರೆಗಳನ್ನು ಸೇವಿಸುತ್ತಿರುವ ಆಘಾತಕಾರಿ ವಿಚಾರವೊಂದು ಬಯಲಾಗಿದೆ.
ಈ ಸಂಬಂಧ ವೈದ್ಯ ಲೋಕ ಕೂಡ ಆತಂಕ ವ್ಯಕ್ತಪಡಿಸಿದ್ದು, ಇಂತಹ ಮಾತ್ರೆಗಳನ್ನು (Tablets) ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿದೆ.
Advertisement
Advertisement
ಬೆಳಕಿಗೆ ಬಂದಿದ್ದು ಹೇಗೆ?: ಉತ್ತರ ಪ್ರದೇಶದ ಪ್ರಜಕ್ತಾ ಸ್ವರೂಪ್ ಎಂಬ ವಿದ್ಯಾರ್ಥಿನಿ 10ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಹೀಗಾಗಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಈಕೆ ಏಕಾಏಕಿ ಕುಸಿದುಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಈ ವೇಳೆ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
Advertisement
ತಪಾಸಣೆ ವೇಳೆ ಆಕೆಯ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ, ನರಗಳು ಊದಿಕೊಂಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ವೈದ್ಯರು ಆಕೆಗೆ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಸದ್ಯ ವಿದ್ಯಾರ್ಥಿನಿ ಆರೋಗ್ಯ ಚೇತರಿಸಿಕೊಳ್ಳುತ್ತಿದೆ. ಇದನ್ನೂ ಓದಿ: ಹೆಬ್ಬಾಳ ಬಳಿಕ ಯಶವಂತಪುರ, ಗೊರಗುಂಟೆಪಾಳ್ಯದಲ್ಲಿ ಸುರಂಗ ನಿರ್ಮಾಣಕ್ಕೆ ಚಿಂತನೆ
Advertisement
ಇತ್ತ ವಿದ್ಯಾರ್ಥಿನಿ ಆಸ್ಪತ್ರೆಗೆ ದಾಖಲಾದ ಬಳಿಕ ಪೋಷಕರು ಆಕೆ ಓದುತ್ತಿದ್ದ ಕೋಣೆಯನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಲ್ಲಿ ಮಾತ್ರೆಗಳು ತುಂಬಿದ ಬಾಟ್ಲಿಯೊಂದು ಪತ್ತೆಯಾಗಿದೆ. ಇದರಿಂದ ಆತಂಕಗೊಂಡ ಪೋಷಕರು ಮಾತ್ರೆಗಳನ್ನು ವೈದ್ಯರ ಬಳಿ ತೋರಿಸಿದ್ದಾರೆ. ಆಗ ವೈದ್ಯರು, ಇದು ನಿದ್ದೆಯಿಂದ ತಪ್ಪಿಸಿಕೊಳ್ಳಲು ಬಳಸುವ ಮಾತ್ರೆ ಎಂದು ತಿಳಿಸಿದ್ದಾರೆ.
ಈ ಕುರಿತು ಪೋಷಕರು ವಿದ್ಯಾರ್ಥಿನಿಯನ್ನು ವಿಚಾರಿಸಿದಾಗ ಆಕೆಯೂ ಒಪ್ಪಿಕೊಂಡಿದ್ದಾಳೆ. ಪರೀಕ್ಷೆಯ ಸಮಯದಲ್ಲಿ ರಾತ್ರಿಯಿಡೀ ಎಚ್ಚರದಿಂದ ಇರಲು ಈ ಮಾತ್ರೆ ಸೇವಿಸುತ್ತಿದ್ದೆ ಎಂದಿದ್ದಾಳೆ. ಇದು ವೈದ್ಯರು ಹಾಗೂ ಪೋಷಕರನ್ನು ದಿಗ್ಭ್ರಮೆಗೊಳಿಸಿದೆ.
ಏನಿದು ಮಾತ್ರೆ?: ಒಂದು ಮಾತ್ರೆ ಸೇವಿಸಿದರೆ ಸುಮಾರು 40 ಗಂಟೆಗಳ ಕಾಲ ಎಚ್ಚರದಿಂದ ಇರುವಂತೆ ಮಾಡುತ್ತದೆ. ಸಾಮಾನ್ಯವಾಗಿ ಈ ಮಾತ್ರೆಗಳನ್ನು ಉಗ್ರರು ತೆಗೆದುಕೊಳ್ಳುತ್ತಾರೆ. ಭಯೋತ್ಪಾದಕ ದಾಳಿ ವೇಳೆ ನಿದ್ರೆ ತಪ್ಪಿಸಲು ಉಗ್ರರು ಇಂತಹ ಮಾತ್ರೆಗಳನ್ನು ನುಂಗಿ ಕಾರ್ಯಾಚರಣೆ ಮಾಡುತ್ತಾರೆ. ಇದು ಮಾರುಕಟ್ಟೆಗಳಲ್ಲಿ ಸಿಗಲ್ಲ. ಆದರೆ ಕಳ್ಳ ಮಾರ್ಗದಲ್ಲಿ ಬೇರೆ ಬೇರೆ ಮಾತ್ರೆಗಳ ಹೆಸರಿನಲ್ಲಿ ಭಾರತಕ್ಕೆ ಸಾಗಿಸಲಾಗುತ್ತದೆ.
ಇದೀಗ ಈ ಮಾತ್ರೆಗಳನ್ನು ವಿದ್ಯಾರ್ಥಿಗಳು ಸೇವಿಸುತ್ತಿರುವುದು ಆತಂಕಕಾರಿಯಾಗಿದೆ. ಪರೀಕ್ಷೆಗಳ ಸಮಯಗಳಲ್ಲಿ ಇಂತಹ ಮಾತ್ರೆಗೆ ಬೇಡಿಕೆ ಕೂಡ ಹೆಚ್ಚಾಗುತ್ತದೆ ಎಂದು ಔಷಧ ವ್ಯಾಪಾರಿಗಳು ಹೇಳುತ್ತಾರೆ. ಒಟ್ಟಿನಲ್ಲಿ ಪರೀಕ್ಷೆ ಹತ್ತಿರ ಬರುತ್ತಿದ್ದಂತೆಯೇ ಪೋಷಕರು ಕೂಡ ತಮ್ಮ ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ.