ಲಕ್ನೋ: ರಿಮೋಟ್ ಕಂಟ್ರೋಲ್ ಚಿಪ್‍ಗಳನ್ನ ಬಳಸಿ ಗ್ರಾಹಕರಿಗೆ ವಂಚಸುತ್ತಿದ್ದ ಆರೋಪದ ಮೇಲೆ ಉತ್ತರಪ್ರದೇಶದ ಎಸ್‍ಟಿಎಫ್ ಪೊಲೀಸರು ಶುಕ್ರವಾರದಂದು ಇಲ್ಲಿನ 7 ಪೆಟ್ರೋಲ್ ಬಂಕ್‍ಗಳನ್ನ ಜಪ್ತಿ ಮಾಡಿದ್ದು, 4 ಪೆಟ್ರೋಲ್ ಬಂಕ್ ಮಾಲೀಕರು ಸೇರಿದಂತೆ 23 ಜನರನ್ನ ಬಂಧಿಸಿದ್ದಾರೆ. ಈ ಸಂಬಂಧ 7 ಎಫ್‍ಐಆರ್‍ಗಳು ದಾಖಲಾಗಿವೆ.
ಹೇಗೆ ಮೋಸ ಮಾಡ್ತಿದ್ರು: ಪೆಟ್ರೋಲ್ ಹಾಕಲಾಗುವ ಮಷೀನ್‍ನಲ್ಲಿ ಚಿಪ್ ಆಧಾರಿತ ಸಾಧನವನ್ನ ಅಳವಡಿಸಿ ಪೆಟ್ರೋಲ್ ಹರಿವನ್ನ ಶೇ. 5 ರಿಂದ 10 ರಷ್ಟು ಕಡಿಮೆಯಾಗಿಸುತ್ತಿದ್ದರು. ಆದ್ರೆ ಇದರಿಂದ ಮಷೀನಿನ ಮೀಟರ್ ರೀಡಿಂಗ್‍ನಲ್ಲಿ ಯಾವುದೇ ಬದಲಾವಣೆಯಾಗುತ್ತಿರಲಿಲ್ಲ. ಅಂದ್ರೆ ಗ್ರಾಹಕರು ಒಂದು ಲೀಟರ್ ಪೆಟ್ರೋಲ್‍ಗೆ ದುಡ್ಡು ಕೊಟ್ಟರೂ ಅವರಿಗೆ ಸಿಗುತ್ತಿದ್ದದ್ದು 900 ರಿಂದ 950 ಎಂಎಲ್ ಪೆಟ್ರೋಲ್ ಮಾತ್ರ.
ಈ ಬಗ್ಗೆ ಎಸ್‍ಟಿಎಫ್ ಮುಖ್ಯಕಚೇರಿಗೆ 2016ರಲ್ಲಿ ಮಾಹಿತಿ ಬಂದಿತ್ತು. ಅಂದಿನಿಂದ ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ರು. 2017ರಲ್ಲಿ ರವೀಂದರ್ ಎಂಬ ಎಲೆಕ್ಟ್ರಿಷಿಯನ್ ಈ ಜಾಲದ ಹಿಂದಿರುವುದು ಗೊತ್ತಾಯಿತು. ಈತನೇ ಪೆಟ್ರೋಲ್ ಪಂಪ್‍ಗಳಲ್ಲಿ ಚಿಪ್‍ಗಳನ್ನ ಅಳವಡಿಸುತ್ತಿದ್ದ ಎಂಬ ಬಗ್ಗೆ ಮಾಹಿತಿ ಸಿಕ್ಕಿತ್ತು.
ಎಸ್‍ಟಿಎಫ್ ಪೊಲೀಸರು ಈತನ ಮೇಲೆ ಕಣ್ಣಿಟ್ಟಿದ್ದರು. ಈತ ಎಲ್ಲೆಲ್ಲಿ ಓಡಾಡ್ತಾನೆ, ಯಾರನ್ನೆಲ್ಲಾ ಭೇಟಿ ಮಾಡ್ತಾನೆ ಎಂಬುದನ್ನ ಗಮನಿಸುತ್ತಿದ್ರು. ಈತ ಈ ಜಾಲದ ಹಿಂದಿರುವುದು ಖಾತ್ರಿಯಾದ ಮೇಲೆ ಪೊಲೀಸರು ರವೀಂದರ್‍ನನ್ನ ಬಂಧಿಸಿದ್ದಾರೆ.
ಪೊಲೀಸ್ ತನಿಖೆ ವೇಳೆ ರವೀಂದರ್ ತನ್ನ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾನೆ. ಈ ಕೆಲಸವನ್ನ 6 ವರ್ಷಗಳಿಂದ ಮಾಡುತ್ತಿದ್ದು, 3 ಸಾವಿರ ರೂ.ನಿಂದ 40 ಸಾವಿರ ರೂ.ವರೆಗೆ ಈ ಚಿಪ್‍ಗಳನ್ನ ಪೆಟ್ರೋಲ್ ಪಂಪ್ ಮಾಲೀಕರಿಗೆ ಮಾರಾಟ ಮಾಡಿದ್ದೀನಿ ಎಂಬ ಸಂಗತಿಯನ್ನ ಬಹಿರಂಗಪಡಿಸಿದ್ದಾನೆ. ಕಾನ್ಪುರದ ಸಂಸ್ಥೆಯೊಂದರಿಂದ ಈ ಚಿಪ್ ಖರೀದಿಸಿ, ಪೆಟ್ರೋಲ್ ಪಂಪ್‍ಗಳಲ್ಲಿ ಅಳವಡಿಸುತ್ತಿದ್ದೆ. ಈ ಮಷೀನ್‍ಗಳಿಗೆ ರಿಪೇರಿ ಅಗತ್ಯವಿದ್ದಾಗಲೂ ನಾನೇ ರಿಪೇರಿ ಮಾಡಲು ಹೋಗಬೇಕಿತ್ತು ಎಂದು ಹೇಳಿದ್ದಾನೆ.
ಚಿಪ್ ಅಳವಡಿಸ್ತಿದ್ದಿದ್ದು ಹೇಗೆ?: ಪೆಟ್ರೋಲ್ ಪಂಪ್ ಮಾಲೀಕರು ಮಷೀನ್ ಸರಿಯಾಗಿ ಕೆಲಸ ಮಾಡ್ತಿಲ್ಲ ಅಂತ ಮೆಶರ್‍ಮೆಂಟ್ ಇಲಾಖೆಗೆ ದೂರು ನೀಡ್ತಿದ್ರು. ಇಲಾಖೆಯವರು ಬಂದು ಯಂತ್ರದ ಪ್ಲಾಸ್ಟಿಕ್ ಬಾಕ್ಸ್ ತೆಗೆದಾಗ ಚಿಪ್ ಅಳವಡಿಸುತ್ತಿದ್ರು. ವಿವಿಧ ರೀತಿಯ ಬಾಕ್ಸ್ ಗಳಿಗೆ ಬೇರೆ ಬೇರೆ ವಿಧದ ಚಿಪ್‍ಗಳನ್ನ ಹಾಕ್ತಿದ್ರು. ಆದ್ರೆ ಈ ಬಾಕ್ಸ್ ಗಳನ್ನ ಸೀಲ್ ಮಾಡಲಾಗುತ್ತಿದ್ದರಿಂದ ಇದನ್ನ ತೆಗೆಯಬೇಕಾದ್ರೆ ಮೆಶರ್‍ಮೆಂಟ್ ಇಲಾಖೆಯವರೇ ಬರಬೇಕು. ಯಾವಾಗ ಬಕ್ಸ್ ತೆಗೆಯುತ್ತಾರೋ ಆಗ ಚಿಪ್ ಅಳವಡಿಸಲಾಗ್ತಿತ್ತು. ಪ್ರತಿ ಚಿಪ್‍ನಲ್ಲೂ ವಿಶೇಷ ಕೋಡ್ ಇದ್ದು, ಇದನ್ನು ಅಳವಡಿಸಿದ ನಂತರ ಪೆಟ್ರೋಲ್ ಪಂಪ್ ಮ್ಯಾನೇಜರ್‍ಗಳ ಬಳಿ ಇರುತ್ತಿದ್ದ ರಿಮೋಟ್‍ನಿಂದ ಆಪರೇಟ್ ಮಾಡಲಾಗ್ತಿತ್ತು.
ಈ ಪೆಟ್ರೊಲ್ ವಂಚನೆ ಜಾಲ ಉತ್ತರಪ್ರದೇಶದ ಹಲವು ಜಿಲ್ಲೆಗಳಲ್ಲಿ ಹಾಗೂ ಬೇರೆ ರಾಜ್ಯಗಳಲ್ಲೂ ಇರಬಹುದು ಎಂದು ಎಸ್‍ಟಿಎಫ್ ಪೊಲೀಸರು ಶಂಕಿಸಿದ್ದಾರೆ. ಈ ಪ್ರಕರಣದ ಬಗ್ಗೆ ಶೀಘ್ರದಲ್ಲೇ ಸಂಪೂರ್ಣ ವರದಿ ಸಲ್ಲಿಸಲಿದ್ದಾರೆ.