ಲಕ್ನೋ: ಬಿಜೆಪಿ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಚಿನ್ಮಯಾನಂದ ಅವರ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ಕಾನೂನು ವಿದ್ಯಾರ್ಥಿನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸ್ನೇಹಿತರ ಜೊತೆಗೂಡಿ ಅತ್ಯಾಚಾರ ಆರೋಪ ಮಾಡಿ ಚಿನ್ಮಯಾನಂದ ಅವರ ಬಳಿ 5 ಕೋಟಿ ರೂ. ಸುಲಿಗೆಗೆ ಯತ್ನಿಸಿದ್ದಾಳೆ ಎಂಬ ಆರೋಪ ಕೇಳಿ ಬಂದಿದ್ದು ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಸಂಬಂಧ ಇಂದು ಬೆಳಗ್ಗೆ ಆಕೆಯನ್ನು ವಿಶೇಷ ತನಿಖಾ ದಳ(ಎಸ್‍ಐಟಿ) ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರ ಆಕೆ ಬಂಧನದಿಂದ ರಕ್ಷಣೆ ಕೋರಿ ನ್ಯಾಯಾಲಯಕ್ಕೆ ಮನವಿ ಕೇಳಿದ್ದಳು. ಇದನ್ನು ಗುರುವಾರ ವಿಚಾರಣೆ ಮಾಡುವುದಾಗಿ ಕೋರ್ಟ್ ಒಪ್ಪಿಕೊಂಡಿತ್ತು. ಆದರೆ ಇಂದು ಎಸ್‍ಐಟಿ ಪೊಲೀಸರು ಆಕೆಯನ್ನು ಅರೆಸ್ಟ್ ಮಾಡಿದ್ದು, ಚಪ್ಪಲಿಯನ್ನು ಹಾಕಿಕೊಳ್ಳಲು ಬಿಡದೆ ಬಲವಂತವಾಗಿ ನಮ್ಮ ಮಗಳನ್ನು ಎಳೆದುಕೊಂಡು ಹೋಗಿದ್ದಾರೆ ಎಂದು ಆಕೆಯ ಕುಟುಂಬದವರು ಆರೋಪ ಮಾಡಿದ್ದಾರೆ.
ಮನೆಯಿಂದ ಆಕೆಯ ಬಂಧಿಸಿದ ಎಸ್‍ಐಟಿ ಪೊಲೀಸರು, ನಂತರ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆ ಮಾಡಿಸಿ ನಂತರ ಆಕೆಯನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಈ ವಿಚಾರವಾಗಿ ಬಂಧಿತರಾಗಿರುವ ಚಿನ್ಮಯಾನಂದ ಅವರು ಬಂಧಿಸಿದ ದಿನದಿಂದ ಅನಾರೋಗ್ಯಕ್ಕೆ ಒಳಗಾಗಿದ್ದು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಗಳವಾರ ಈ ವಿಚಾರದ ಬಗ್ಗೆ ಮಾತನಾಡಿದ್ದ ಚಿನ್ಮಯಾನಂದ ಅವರ ವಕೀಲ ಓಂ ಸಿಂಗ್ ಆಕೆ ಅವಳ ಸ್ನೇಹಿತರ ಜೊತೆ ಸೇರಿಕೊಂಡು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಚಿನ್ಮಯಾನಂದ ಅವರಿಂದ ದುಡ್ಡು ಸುಲಿಗೆ ಮಾಡವ ಪ್ರಯತ್ನ ಮಾಡಿದ್ದಾಳೆ. ಆದರೆ ಆಕೆ ಇನ್ನೂ ಯಾಕೆ ಅರೆಸ್ಟ್ ಆಗಿಲ್ಲ ಎಂದು ನನಗೆ ಅರ್ಥವಾಗಿಲ್ಲ. ಖಂಡಿತವಾಗಿಯೂ ಆಕೆ ಈ ವಿಚಾರದಲ್ಲಿ ಜೈಲಿಗೆ ಹೋಗುತ್ತಾಳೆ ಎಂದು ಹೇಳಿದ್ದರು.