ಲಕ್ನೋ: ಎಲ್ಲೆಡೆ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಈ ಲಾಕ್‍ಡೌನ್ ಅವಧಿಯಲ್ಲಿ ಜನಿಸಿದ ಮಗುವಿಗೆ ಪೋಷಕರು ‘ಸ್ಯಾನಿಟೈಸರ್’ ಎಂದು ನಾಮಕರಣ ಮಾಡಿದ್ದಾರೆ.
ಉತ್ತರ ಪ್ರದೇಶದ ಸಹರನ್ಪುರ ಜಿಲ್ಲೆಯ ವಿಜಯ್ ವಿಹಾರದ ನಿವಾಸಿಯಾಗಿರುವ ಓಂ ವೀರ್ ಸಿಂಗ್ ತಮ್ಮ ಮಗುವಿಗೆ ಸ್ಯಾನಿಟೈಸರ್ ಎಂದು ಹೆಸರಿಟ್ಟಿದ್ದಾರೆ. ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್ ವಿರುದ್ಧ ಹೋರಾಡುವ ಸಾಮರ್ಥ್ಯ ಸ್ಯಾನಿಟೈಸರ್ ಗೆ ಇದೆ. ಈ ಸೋಂಕು ಹರಡುತ್ತಿರುವುದನ್ನು ತಡೆಗಟ್ಟಲು ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಈ ಅವಧಿಯಲ್ಲಿ ನನ್ನ ಮಗ ಹುಟ್ಟಿದ್ದಾನೆ. ಹೀಗಾಗಿ ಮಗನಿಗೆ ಸ್ಯಾನಿಟೈಸರ್ ಎಂದು ಹೆಸರಿಟ್ಟಿದ್ದೇನೆ ಎಂದು ಓಂ ವೀರ್ ಸಿಂಗ್ ಹೇಳಿದ್ದಾರೆ.
Advertisement
Advertisement
ಭಾನುವಾರ ಈ ಮಗು ಜನಿಸಿದ್ದು, ಪೋಷಕರು ಮಗುವಿಗೆ ಸ್ಯಾನಿಟೈಸರ್ ಎಂದು ಹೆಸರಿಡುತ್ತೇವೆ ಎಂದು ಹೇಳಿದ್ದಾಗ ಆಸ್ಪತ್ರೆಯಲ್ಲಿದ್ದ ಎಲ್ಲಾ ವೈದ್ಯಕೀಯ ಸಿಬ್ಬಂದಿ ನಕ್ಕಿದ್ದರು. ಈ ಹಿಂದೆ ಗೋರಖ್ ಪುರದಲ್ಲಿಯೂ ಹೀಗೆ ವಿಚಿತ್ರ ನಾಮಕರಣ ಮಾಡಿದ ಘಟನೆ ನಡೆದಿತ್ತು. ಜನತಾ ಕರ್ಫ್ಯೂ ದಿನ ಜನಿಸಿದ ಹೆಣ್ಣು ಮಗುವಿಗೆ ಪೋಷಕರು ‘ಕೊರೊನಾ’ ಎಂದೇ ನಾಮಕರಣ ಮಾಡಿದ್ದರು.
Advertisement
Advertisement
ಆ ಬಳಿಕ ಲಾಕ್‍ಡೌನ್ ಅವಧಿಯಲ್ಲಿ ಮಗು ಜನಿಸಿದ್ದಕ್ಕೆ ಮಗುವಿಗೆ ‘ಲಾಕ್‍ಡೌನ್’ ಎಂದು ಪೋಷಕರು ನಾಮಕರಣ ಮಾಡಿದ್ದರು. ಆ ಬಳಿಕ ರಾಮ್‍ಪುರದಲ್ಲಿ ಜನಿಸಿದ್ದ ಮಗುವೊಂದಕ್ಕೆ ‘ಕೋವಿಡ್’ ಎಂದೇ ಹೆತ್ತವರು ಹೆಸರಿಟ್ಟಿದ್ದ ಸುದ್ದಿ ಹೆಚ್ಚು ಸದ್ದು ಮಾಡಿತ್ತು.