ಬೀದಿ ಗೋವುಗಳಿಗಾಗಿ ‘ಗೋವು ಸಫಾರಿ’ ತೆರೆಯಲು ಚಿಂತನೆ

Public TV
2 Min Read
COW 6

ಲಕ್ನೋ: ಬೀದಿಗಳಲ್ಲಿ ಇರುವ ಗೋವುಗಳ ಹಾವಳಿ ತಪ್ಪಿಸಲು ‘ಗೋವು ಸಫಾರಿ’ ಆರಂಭಿಸುವ ಬಗ್ಗೆ ಉತ್ತರ ಪ್ರದೇಶದ ಸಚಿವರೊಬ್ಬರು ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.

ಉತ್ತರ ಪ್ರದೇಶದ ಹೈನು ಅಭಿವೃದ್ಧಿ ಸಚಿವ ಲಕ್ಷ್ಮೀನಾರಾಯಣ ಚೌಧರಿ ಅವರು ಗೋವು ಸಫಾರಿ ತೆರೆಯುವ ಪ್ರಸ್ತಾಪವನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಬೀದಿಯಲ್ಲಿ ಓಡಾಡಿಕೊಂಡು ವಾಹನಗಳಿಗೆ ಸಿಲುಕಿ ಗೋವುಗಳು ಸಾವನ್ನಪ್ಪುವುದು, ಗಾಯಗೊಳ್ಳುವುದನ್ನು ತಪ್ಪಿಸಲು ಈ ಯೋಜನೆ ಬಗ್ಗೆ ಚಿಂತನೆ ನಡೆಸಿದ್ದಾರೆ. ಈ ಬಗ್ಗೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಗೋವುಗಳು ಆರಾಮಾಗಿ ಓಡಾಡಲು ಖಾಲಿ ಜಾಗ ಗುರುತಿಸಲು ಸೂಚಿಸಿದ್ದಾರೆ. ಇದನ್ನೂ ಓದಿ: ಚಳಿಯಿಂದ ಗೋವುಗಳನ್ನು ರಕ್ಷಿಸಲು ಕೋಟು ಖರೀದಿಸಲು ಮುಂದಾದ ಅಯೋಧ್ಯಾ ಪಾಲಿಕೆ

Cow 4

ಅಲ್ಲದೆ ಈ ಕುರಿತು ಶೀಘ್ರವೇ ಸಿಎಂ ಯೋಗಿ ಆದಿತ್ಯನಾಥ್ ಜೊತೆ ಮಾತನಾಡುವುದಾಗಿ ಸಚಿವರು ತಿಳಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಗೋವು ಸಫಾರಿ ಸ್ಥಾಪಿಸಿ, ಅದನ್ನು ಮಥುರಾ ಮಾದರಿಯ ಪ್ರವಾಸಿ ಕೇಂದ್ರ ಆಗಿಸುವುದು ಸಚಿವರ ಉದ್ದೇಶವಾಗಿದೆ. ಮಥುರಾದಲ್ಲಿ ದನ-ಕರುಗಳಿಗಾಗಿ ಸಫಾರಿ ಮಾಡಲಾಗಿದ್ದು, ಅಲ್ಲಿ ಅವುಗಳನ್ನು ಕಟ್ಟಿ ಹಾಕದೆ ಆರಾಮಾಗಿ ಓಡಾಡಲು ಬಿಟ್ಟಿರುತ್ತಾರೆ. ಅಲ್ಲದೆ ಪ್ರವಾಸಿಗರು ಅಲ್ಲಿ ಬಂದು ಅವುಗಳ ಜೊತೆ ಸಮಯ ಕಳೆಯಲು ಅವಕಾಶ ನೀಡುತ್ತಾರೆ. ಹೀಗಾಗಿ ಮಥುರಾದಲ್ಲಿರುವ ಗೋವು ಸಫಾರಿಯಂತೆ ಉತ್ತರ ಪ್ರದೇಶದಲ್ಲಿಯೂ ಮಾಡುವುದು ಸಚಿವರ ಚಿಂತನೆಯಾಗಿದೆ. ಇದನ್ನೂ ಓದಿ: ವಿಶ್ವದಲ್ಲೇ ಮೊದಲು – ಹೆಚ್ಚು ಹಾಲು ಸಿಗಲು ಹಸುವಿನ ಕಣ್ಣಿಗೆ ವಿಆರ್ ಗ್ಲಾಸ್ ಅಳವಡಿಕೆ

COW 2

ಪ್ರವಾಸೋದ್ಯಮವನ್ನು ಹೊರತುಪಡಿಸಿ ಈ ಗೋವು ಸಫಾರಿ ಸ್ಥಾಪನೆಯಿಂದ ಬೀದಿ ಗೋವುಗಳಿಗೆ ಆಶ್ರಯ ಸಿಕ್ಕಂತಾಗುತ್ತದೆ. ಅವುಗಳಿಗೂ ಹೊಸ ಬದುಕು ದೊರಕಿದಂತಾಗುತ್ತದೆ. ಸರ್ಕಾರ ರಾಜ್ಯದಲ್ಲಿರುವ ಎಲ್ಲಾ ಬೀದಿ ಹಸುಗಳನ್ನು ಗೋವುಗಳ ಆಶ್ರಯ ಸ್ಥಳಕ್ಕೆ ಕರೆದೊಯ್ಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಗೋವು ಸಫಾರಿ ಸ್ಥಾಪಿಸಿದರೆ ಆಶ್ರಯ ಸ್ಥಳಕ್ಕೆ ಕಳುಹಿಸಲು ಆಗದ ಗೋವುಗಳನ್ನು ಇಲ್ಲಿ ತಂದು ಬಿಟ್ಟು ನೋಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

cow 1

ಇದೇ ವೇಳೆ ಬೀದಿ ಹಸುಗಳನ್ನು ಜನರು ದತ್ತು ಪಡೆಯುವಂತೆ ಸಚಿವರು ಕರೆ ಕೊಟ್ಟರು. ಹಾಗೆಯೇ ಅಧಿಕಾರಿಗಳಿಗೆ ಡಿ. 10ರ ಒಳಗೆ ರಾಜ್ಯದಲ್ಲಿರುವ ಎಲ್ಲಾ ಗೋವುಗಳ ಆಶ್ರಯ ತಾಣಗಳನ್ನು ಪರಿಶೀಲಿಸಿ, ಗೋವುಗಳಿಗೆ ಬೇಕಾಗುವ ಔಷಧಗಳು, ಮೇವುಗಳನ್ನು ನೀಡುವಂತೆ ಸೂಚಿಸಿದ್ದಾರೆ. ಹಾಗೆಯೇ ಗೋವುಗಳನ್ನು ಚಳಿಯಿಂದ ರಕ್ಷಿಸಲು ಕೂಡ ಕ್ರಮ ತೆಗೆದುಕೊಳ್ಳಲು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *