ಲಕ್ನೋ: ಶನಿವಾರ ತಾನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ವಿಶ್ವ ಹಿಂದೂ ಮಹಾಸಭಾ ನಾಯಕನನ್ನು ತಲೆಗೆ ಗುಂಡಿಕ್ಕಿ ಇಂದು ಉತ್ತರ ಪ್ರದೇಶದ ಲಕ್ನೋದಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಕೊಲೆಯಾದ ಹಿಂದೂ ನಾಯಕನನ್ನು ರಂಜಿತ್ ಬಚ್ಚನ್ ಎಂದು ಗುರುತಿಸಲಾಗಿದೆ. ಇಂದು ತನ್ನ ಸಂಬಂಧಿ ಅದಿತ್ಯ ಜೊತೆಗೆ ಹೊರಗೆ ಬಂದ ರಂಜಿತ್ ಬಚ್ಚನ್ ಅವರನ್ನು ಬೈಕಿನಲ್ಲಿ ಬಂದ ದುಷ್ಕರ್ಮಿಗಳು ತಲೆಗೆ ಗುಂಡಿಕ್ಕಿ ಕೊಂದು ಹಾಕಿದ್ದಾರೆ. ಈ ಘಟನೆಯಲ್ಲಿ ಅದಿತ್ಯ ಅವರೂ ಕೂಡ ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿ ಚಿಕತ್ಸೆ ಕೊಡಿಸಲಾಗುತ್ತಿದೆ.
ವಾಕಿಂಗ್ ಮಾಡುತ್ತಿದ್ದ ರಂಜೀತ್ ಬಚ್ಚನ್ ಅವರ ಬಳಿ ಬಂದ ಹಲ್ಲೆ ಮಾಡಿದ ಆರೋಪಿ, ಮೊದಲು ಕರೆ ಮಾಡಲು ಫೋನ್ ಕೇಳಿದ್ದಾನೆ. ಅವರು ಕೊಟ್ಟಿಲ್ಲ. ಇದಾದ ನಂತರ ತನ್ನ ಬಳಿ ಇದ್ದ ಪಿಸ್ತೂಲ್‍ನಿಂದ ರಂಜಿತ್ ಬಚ್ಚನ್ ಅವರ ತಲೆಗೆ ಗುಂಡು ಹಾರಿಸಿದ್ದಾನೆ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ರಂಜಿತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಎಸಿಪಿ ಅಭಯ್ ಮಿಶ್ರಾ ಮಾಹಿತಿ ನೀಡಿದ್ದಾರೆ.
ಈ ವೇಳೆ ಮಾತನಾಡಿದ ರಂಜಿತ್ ಬಚ್ಚನ್ ಅವರ ಸಹೋದರ ಸಂಬಂಧಿ ಮನೋಜ್ ಕುಮಾರ್ ಶರ್ಮಾ, ರಂಜಿತ್ ಅವರು ಶನಿವಾರ ತನ್ನ 40ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಇದರ ಜೊತೆಗೆ ಸಿಎಎ ಮತ್ತು ಎನ್.ಆರ್.ಸಿಗೆ ಬೆಂಬಲಿಸುವ ಪಾರ್ಟಿಯನ್ನು ಆಯೋಜಿಸಿದ್ದರು ಎಂದು ತಿಳಿಸಿದ್ದಾರೆ. ರಂಜಿತ್ ಬಚ್ಚನ್ ಅವರ ಸಾವಿನ ಸುದ್ದಿ ತಿಳಿದ ಅವರ ಬೆಂಬಲಿಗರು ಪೊಲೀಸ್ ಠಾಣೆಯ ಮುಂದೆ ಪೊಲೀಸರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ಮಾಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಹಿಂದೂ ನಾಯಕರ ಸರಣಿ ಹತ್ಯೆ ನಡೆಯುತ್ತಿದ್ದು, ಕಳೆದ ನಾಲ್ಕು ತಿಂಗಳಲ್ಲಿ ಇಬ್ಬರು ಹಿಂದೂ ನಾಯಕರನ್ನು ಕೊಲೆ ಮಾಡಲಾಗಿದೆ. ಹೀಗೆ ಕಳೆದ ಆಕ್ಟೋಬರ್ ನಲ್ಲಿ ಹಿಂದೂ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಕಮಲೇಶ್ ತಿವಾರಿ ಅವರನ್ನು ಅವರ ನಿವಾಸದಲ್ಲಿ ಹತ್ಯೆ ಮಾಡಲಾಗಿತ್ತು.