LatestLeading NewsMain PostNational

ಯುಪಿ ಕಾಂಗ್ರೆಸ್‌ ಸಿಎಂ ಅಭ್ಯರ್ಥಿ ನಾನೇ ಎಂಬಂತೆ ಮಾತನಾಡಿಲ್ಲ: ಪ್ರಿಯಾಂಕಾ ಗಾಂಧಿ ಸ್ಪಷ್ಟನೆ

ನವದೆಹಲಿ: ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್‌ ಸಿಎಂ ಅಭ್ಯರ್ಥಿ ನಾನು ಎನ್ನುವ ಅರ್ಥದಲ್ಲಿ ನಾನು ಮಾತನಾಡಿಲ್ಲ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪಷ್ಟಪಡಿಸಿದ್ದಾರೆ.

ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್‌ ಸಿಎಂ ಅಭ್ಯರ್ಥಿ ಯಾರಾಗುತ್ತಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಪ್ರಿಯಾಂಕಾ ಗಾಂಧಿ, ನನ್ನ ಮುಖ ಕಾಣಿಸುತ್ತಿಲ್ಲವೇ ಎಂದು ಹೇಳಿದ್ದರು. ಈ ಹೇಳಿಕೆಯಿಂದಾಗಿ ಪ್ರಿಯಾಂಕಾ ಅವರೇ ಯುಪಿ ಕಾಂಗ್ರೆಸ್‌ ಸಿಎಂ ಅಭ್ಯರ್ಥಿ ಎಂದು ಬಿಂಬಿತವಾಯಿತು. ಆದರೆ ತಮ್ಮ ಹೇಳಿಕೆಗೆ ಪ್ರಿಯಾಂಕಾ ಗಾಂಧಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಎಚ್‌.ಡಿ.ದೇವೇಗೌಡರಿಗೆ ಕೊರೊನಾ ದೃಢ

ಸಿಎಂ ಅಭ್ಯರ್ಥಿಯಾಗಿ ನನ್ನ ಮುಖ ಕಾಣಿಸುತ್ತಿಲ್ಲವೇ ಎಂಬ ಅರ್ಥದಲ್ಲಿ ನಾನು ಮಾತನಾಡಿಲ್ಲ. ಸಿಎಂ ಅಭ್ಯರ್ಥಿ ಕುರಿತು ಪದೇ ಪದೆ ಪ್ರಶ್ನೆಗಳು ಕೇಳಿ ಬರುತ್ತಿದ್ದರಿಂದ, ಎಲ್ಲೆಡೆ ನನ್ನ ಮುಖವನ್ನು ನೀವು ನೋಡಬಹುದು ಎಂದಷ್ಟೇ ಹೇಳಿದ್ದೆ ಎಂದು ತಿಳಿಸಿದ್ದಾರೆ.

ಯುಪಿಯಲ್ಲಿ ಶೇಕಡಾವಾರು ನಿರುದ್ಯೋಗಿಗಳ ಬಗ್ಗೆ ನಾವು ಏಕೆ ಮಾತನಾಡುತ್ತಿಲ್ಲ? ಸರ್ಕಾರ ಶಿಕ್ಷಣಕ್ಕೆ ಖರ್ಚು ಮಾಡುತ್ತಿರುವ ಬಜೆಟ್‌ ಬಗ್ಗೆ ನಾವೇಕೆ ಮಾತನಾಡುತ್ತಿಲ್ಲ? ಉತ್ತರಪ್ರದೇಶದ ಪ್ರಗತಿಗೆ ಸಂಬಂಧವಿಲ್ಲದ್ದನ್ನೇ ಏಕೆ ಪರಿಹರಿಸುತ್ತಿದ್ದೇವೆ ಎಂದು ಬಿಜೆಪಿ ಸರ್ಕಾರವನ್ನು ಪ್ರಿಯಾಂಕಾ ಪ್ರಶ್ನಿಸಿದ್ದಾರೆ.

ಸಮಾಜವಾದಿ ಪಕ್ಷ ಮತ್ತು ಬಿಜೆಪಿ ಒಂದೇ ಮಾದರಿಯಲ್ಲಿ ರಾಜಕೀಯ ಮಾಡುತ್ತಿವೆ. ಏಕೆಂದರೆ ಆ ಮಾದರಿಯ ರಾಜಕೀಯದಿಂದ ಅವರು ಲಾಭ ಪಡೆಯುತ್ತಿದ್ದಾರೆ. ಕೋಮುವಾದ, ಜಾತಿವಾದದ ಆಧಾರದ ಮೇಲೆ ಮುಂದುವರಿಯುವ ಪಕ್ಷಗಳು ಕೇವಲ ಅಜೆಂಡಾವನ್ನು ಹೊಂದಿವೆ. ಪರಸ್ಪರರು ಈ ರಾಜಕೀಯ ಲಾಭದ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಸಿಎಂ ಅಭ್ಯರ್ಥಿಯಾಗಿ ನನ್ನ ಮುಖವನ್ನು ನೋಡಬಹುದು ಅಲ್ಲವೇ: ಪ್ರಿಯಾಂಕಾ ಗಾಂಧಿ

ಉತ್ತರ ಪ್ರದೇಶದಲ್ಲಿ ಚುನಾವಣೋತ್ತರ ಮೈತ್ರಿ ಕುರಿತು ಮಾತನಾಡಿದ ಅವರು, ಬಿಜೆಪಿಗೆ ಬಾಗಿಲು ಸಂಪೂರ್ಣ ಮುಚ್ಚಿದೆ. ಆದರೆ ಇತರ ಪಕ್ಷಗಳಿಗೆ ಮುಕ್ತವಾಗಿದೆ ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ.

Leave a Reply

Your email address will not be published.

Back to top button