– ಉತ್ತರ ಪ್ರದೇಶದ ಎಲ್ಲ 80 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧೆ ಚಿಂತನೆ
– 13 ಕಡೆಗಳಲ್ಲಿ ಬೃಹತ್ ರ‍್ಯಾಲಿಗೆ ರಾಹುಲ್ ಗಾಂಧಿ ಸಿದ್ಧತೆ
ಲಕ್ನೋ: ಉತ್ತರ ಪ್ರದೇಶದಲ್ಲಿ ಮೈತ್ರಿ ಮಾಡಿಕೊಂಡ ಬಹುಜನ ಸಮಾಜ ಪಕ್ಷ (ಬಿಎಸ್‍ಪಿ) ಹಾಗೂ ಸಮಾಜವಾದಿ ಪಕ್ಷಕ್ಕೆ (ಎಸ್‍ಪಿ) ತಿರುಗೇಟು ನೀಡಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮೆಗಾ ಪ್ಲಾನ್ ರೂಪಿಸಿದ್ದಾರೆ.
ಉತ್ತರ ಪ್ರದೇಶದ ಎಲ್ಲ 80 ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದ್ದು, ಈ ನಿಟ್ಟಿನಲ್ಲಿ ಆರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಂದೊಂದರಂತೆ ಒಟ್ಟು 13 ಕಡೆ ಬೃಹತ್ ಬಹಿರಂಗ ರ‍್ಯಾಲಿ ಕೈಗೊಳ್ಳಲು ರಾಹುಲ್ ಗಾಂಧಿ ನಿರ್ಧರಿಸಿದ್ದಾರೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
Advertisement
Advertisement
ಬಹಿರಂಗ ರ‍್ಯಾಲಿ ನಡೆಸುವ ಸಂಬಂಧ ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಅಜಾದ್ ಮತ್ತು ಉತ್ತರ ಪ್ರದೇಶದ ಮುಖಂಡ ರಾಜ್ ಬಬ್ಬರ್ ಇಂದು ಸುದೀರ್ಘ ಚರ್ಚೆ ನಡೆಸಿದ್ದಾರೆ. ರಾಜ್ಯದ ಪಶ್ಚಿಮ ಕ್ಷೇತ್ರಗಳಾದ ಹಾಪುರ್, ಮೊರಾದಾಬಾದ್ ಮತ್ತು ಸಹರಾನ್ಪುರ್ ನಿಂದ ರ್ಯಾಲಿ ಆರಂಭಿಸಲು ನಿರ್ಧಾರವನ್ನು ಈ ನಾಯಕರು ಕೈಗೊಂಡಿದ್ದಾರೆ.
Advertisement
ಉತ್ತರ ಪ್ರದೇಶದಲ್ಲಿ ಬಿಎಸ್‍ಪಿ ನಾಯಕಿ ಮಾಯಾವತಿ ಹಾಗೂ ಎಸ್‍ಪಿ ನಾಯಕ ಅಖಿಲೇಶ್ ಯಾದವ್ ಶನಿವಾರ ಸುದ್ದಿಗೋಷ್ಠಿ ನಡೆಸಿ ಮೈತ್ರಿ ವಿಚಾರವನ್ನು ತಿಳಿಸಿದ್ದರು. ಈ ಮೈತ್ರಿಯ ಒಪ್ಪಂದದ ಪ್ರಕಾರ ಎರಡೂ ಪಕ್ಷಗಳು ಒಟ್ಟು ತಲಾ 38 ಕ್ಷೇತ್ರಗಳನ್ನು ಹಂಚಿಕೊಂಡು, ಅಮೇಠಿ ಹಾಗೂ ರಾಯ್ ಬರೇಲಿಯನ್ನು ಕಾಂಗ್ರೆಸ್‍ಗೆ, ಉಳಿದ ಎರಡು ಕ್ಷೇತ್ರಗಳನ್ನು ರಾಷ್ಟ್ರೀಯ ಲೋಕದಳಗೆ ಬಿಟ್ಟುಕೊಟ್ಟಿದ್ದರು.
Advertisement
ಬಿಎಸ್‍ಪಿ ಹಾಗೂ ಎಸ್‍ಪಿ ಕೇವಲ ಎರಡು ಕ್ಷೇತ್ರಗಳನ್ನು ಕಾಂಗ್ರೆಸ್‍ಗೆ ಬಿಟ್ಟು ಮೈತ್ರಿ ಮಾಡಿಕೊಂಡ ಬೆನ್ನಲೇ ರಾಹುಲ್ ಗಾಂಧಿ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಕೇವಲ ಎರಡು ಕ್ಷೇತ್ರ ಬಿಟ್ಟ ಮೈತ್ರಿ ವಿರುದ್ಧ ಗರಂ ಆಗಿರುವ ರಾಹುಲ್ ಗಾಂಧಿ, 80 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ನಿರ್ಧಾರ ಕೈಗೊಂಡಿದ್ದಾರೆ.
ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸಗಢ್‍ನಲ್ಲಿ ಅಧಿಕಾರ ಹೊಂದಿರುವ ಕಾಂಗ್ರೆಸ್ ಈ ರಾಜ್ಯಗಳಲ್ಲಿ ಹೆಚ್ಚು ಕ್ಷೇತ್ರಗಳಿಂದ ಜಯಗಳಿಸುವ ಸಾಧ್ಯತೆಗಳಿವೆ. ಆದರೆ ಮಾಯಾವತಿ ಹಾಗೂ ಅಖಿಲೇಶ್ ಮೈತ್ರಿಯಿಂದಾಗಿ ಉತ್ತರ ಪ್ರದೇಶದಿಂದ ಕಾಂಗ್ರೆಸ್ ಬೆರಳೆಣಿಕೆ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಲಿದೆ ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.
ಉತ್ತರ ಪ್ರದೇಶದಲ್ಲಿ 1992ರಂದು ನಡೆದ ಬಾಬ್ರಿ ಮಸೀದಿ ದ್ವಂಸ ಘಟನೆ ಕಾಂಗ್ರೆಸ್ ಮೇಲೆ ಭಾರೀ ಪರಿಣಾಮ ಬೀರಿದೆ. ಈ ಘಟೆಯ ಬಳಿಕ ನಿಧಾನವಾಗಿ ಕಾಂಗ್ರೆಸ್ ಕ್ಷೇತ್ರಗಳನ್ನು ಕಳೆದುಕೊಂಡಿತು. ಇತ್ತ ಬಿಜೆಪಿ ತನ್ನ ಮೇಲುಗೈ ಸಾಧಿಸಿ 2014ರಲ್ಲಿ 71 ಕ್ಷೇತ್ರಗಳಿಂದ ಜಯ ಸಾಧಿಸಿತ್ತು. ಈಗ ಮತದಾರರ ನಿರೀಕ್ಷೆಗಳು ಭಿನ್ನವಾಗಿವೆ. ಯಾದವರು ಹಾಗೂ ದಲಿತರು ಬಿಎಸ್‍ಪಿ ಮತ್ತು ಎಸ್‍ಪಿಗೆ ನೀಡಿದ ಬೆಂಬಲ ಹೇಗಿದೆ ಎನ್ನುವ ಪ್ರಶ್ನೆಗೆ ಮೇ ತಿಂಗಳಿನಲ್ಲಿ ಪ್ರಕಟವಾಗಲಿರುವ ಫಲಿತಾಂಶ ಉತ್ತರ ನೀಡಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv