ಲಕ್ನೋ: ರಸ್ತೆ ಅಪಘಾತದಿಂದ ಹಸುಗಳನ್ನು ರಕ್ಷಿಸಲು ಉತ್ತರ ಪ್ರದೇಶ ಪೊಲೀಸರು ಹೊಸ ವಿಧಾನವೊಂದು ಅಳವಡಿಸಿಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ಪಡೆದುಕೊಂಡಿದೆ.
ಹೌದು, ಹಸುಗಳ ಕುತ್ತಿಗೆ ಹಾಗೂ ಕೊಂಬುಗಳಿಗೆ ಉತ್ತರ ಪ್ರದೇಶ ಪೊಲೀಸರು ರೇಡಿಯಂ ಬ್ಯಾಂಡ್ ಸುತ್ತುತ್ತಿದ್ದಾರೆ. ಈ ಮೂಲಕ ದೂರದಿಂದಲೇ ಚಾಲಕರು ಮುಂದೆ ಯಾವುದೋ ವಸ್ತು ಅಥವಾ ಪ್ರಾಣಿ ಇದೆ ಎಂದು ಅರಿತು ನಿಧಾನವಾಗಿ ಬರಲು ಸಾಧ್ಯವಾಗುತ್ತದೆ.
ರಾತ್ರಿಯ ವೇಳೆ ರಸ್ತೆ ಅಪಘಾತದಲ್ಲಿ ಹಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣ ಕಳೆದುಕೊಳ್ಳುತ್ತಿವೆ. ಇದನ್ನು ನಿಯಂತ್ರಿಸಲು ಈ ಕಾರ್ಯಕ್ಕೆ ಮುಂದಾಗಿದ್ದೇವೆ. ರೇಡಿಯಂ ಬ್ಯಾಂಡ್ ಸುತ್ತುವುದರಿಂದ ರಸ್ತೆ ಅಪಘಾತದಲ್ಲಿ ಹಸುಗಳನ್ನು ರಕ್ಷಿಸಲು ಸಾಧ್ಯವಾಗುತ್ತದೆ ಎಂದು ಪೊಲೀಸ್ ಅಧೀಕ್ಷಕ ಧರಮವೀರ್ ಸಿಂಗ್ ತಿಳಿಸಿದ್ದಾರೆ.
ಈಗಾಗಲೇ ಚಳಿಗಾಲ ಆರಂಭವಾಗಿದ್ದು, ರಾತ್ರಿ ಹಾಗೂ ಬೆಳಗ್ಗೆ ಮಂಜು ಮುಸುಕಿದ ವಾತಾವರಣವಿರುತ್ತದೆ. ಹಸುಗಳ ಕುತ್ತಿಗೆ ಹಾಗೂ ಕೊಂಬುಗಳ ಮೇಲೆ ಇರುವ ರೇಡಿಯಂ ಬ್ಯಾಂಡ್‍ಗಳು ವಾಹನದ ಬೆಳಕಿಗೆ ಮಿಂಚುವುದರಿಂದ ಚಾಲಕರು ಅನಾಹುತ ತಪ್ಪಿಸಬಹುದು. ಕೆಲವೊಮ್ಮೆ ಹಸುಗಳನ್ನು ರಕ್ಷಿಸಲು ಹೋಗಿ, ಇಲ್ಲವೇ ಡಿಕ್ಕಿ ಹೊಡೆದು ಭಾರೀ ಅನಾಹುತ ಸಂಭವಿಸಿದ ಘಟನೆಗಳು ನಡೆದಿವೆ. ಉತ್ತರ ಪ್ರದೇಶ ಪೊಲೀಸ ವಿನೂತನ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv