ಲಕ್ನೋ: ವರ ಮದುವೆ ಮನೆಗೆ ತಡವಾಗಿ ಬಂದ ಎಂದು ವಧು ಬೇರೆ ವ್ಯಕ್ತಿಯನ್ನು ಮದುವೆಯಾಗಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ನಂಗಲ್ಜತ್ ಎಂಬ ಹಳ್ಳಿಯಲ್ಲಿ ನಡೆದಿದೆ.
ಈ ಘಟನೆ ಒಂದು ವಾರದ ಹಿಂದೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ವರದಿಯ ಪ್ರಕಾರ ಈ ಜೋಡಿಯು ಅಕ್ಟೋಬರ್ ನಲ್ಲಿ ಸಾಮೂಹಿಕ ವಿವಾಹವೊಂದರಲ್ಲಿ ಮದುವೆಯಾಗಿದೆ. ಆದರೆ ಸಂಪ್ರಾದಯಿಕವಾಗಿ ಮತ್ತೊಮ್ಮೆ ಮದುವೆಯಾಗಲು ಡಿಸೆಂಬರ್ 4ರಂದು ಮದುವೆ ನಿಶ್ಚಯ ಮಾಡಿದ್ದಾರೆ.
ಈ ಮದುವೆಗೆ ವಧುವಿನ ಮನೆಗೆ ಮಧ್ಯಾಹ್ನ 2 ಗಂಟೆಗೆ ಬರಬೇಕಾದ ವರನ ಕಡೆಯವರು ರಾತ್ರಿಯ ವೇಳೆಗೆ ಮದುವೆ ಮನೆಗೆ ಬಂದಿದ್ದಾರೆ. ಇದರಿಂದ ಕೋಪಗೊಂಡ ವಧುವಿನ ಕಡೆಯವರು ಗಲಾಟೆ ಮಾಡಿದ್ದಾರೆ. ಇದಕ್ಕೂ ಮುಂಚೆಯೇ ವರದಕ್ಷಿಣೆ ವಿಚಾರವಾಗಿ ವಧು ವರನ ಕುಟುಂಬದ ನಡುವೆ ಜಗಳ ಆಗಿತ್ತು. ಆ ಕಾರಣದಿಂದಲ್ಲೇ ಗಲಾಟೆಯಾಗಿ ಮದುವೆ ಮರಿದು ಬಿದ್ದಿದೆ.
ತಡವಾಗಿ ಮದುವೆ ಮನೆಗೆ ಬಂದ ವರದ ಕಡೆಯವರನ್ನು ವಧುವಿನ ಕುಟುಂಬದವರು ಒಂದು ಮನೆಯಲ್ಲಿ ಕೂಡಿಹಾಕಿ ಥಳಿಸಿ ಅವರ ಬಳಿ ಇದ್ದ ಬೆಲೆಬಾಳುವ ವಸ್ತುಗಳನ್ನು ಕಿತ್ತುಕೊಂಡಿದ್ದಾರೆ ಎಂದು ವರನ ಕಡೆಯವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಎರಡು ಕುಟುಂಬದವರು ರಾಜಿ ಮಾಡಿಕೊಳ್ಳಲು ಬಂದಿದ್ದರು. ಆದರೆ ವಧು ವರನೊಂದಿಗೆ ಹೋಗಲು ಇಷ್ಟವಿಲ್ಲ ಎಂದರು. ಹೀಗಾಗಿ ಎರಡೂ ಕಡೆಯಿಂದ ಯಾವುದೇ ಲಿಖಿತ ದೂರು ದಾಖಲಾಗಿಲ್ಲ ಎಂದು ಹೇಳಿದ್ದಾರೆ.
ಈ ಘಟನೆ ರಾಜಿ ಪಂಚಾಯಿತಿ ಮೂಲಕ ಸೌಹಾರ್ದಯುತವಾಗಿ ಬಗೆಹರಿಸಲಾಗಿದೆ. ಇದಾದ ನಂತರ ವರ ತನ್ನ ಸಂಬಂಧಿಕರ ಜೊತೆ ತನ್ನ ಊರಿಗೆ ಹಿಂದುರಿಗಿದ್ದಾನೆ. ನಂತರ ವಧು ಗ್ರಾಮದ ಹಿರಿಯ ಸಮ್ಮುಖದಲ್ಲಿ ಅದೇ ಹಳ್ಳಿಯ ಬೇರೆ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ.