ಬರೇಲಿ: ಬಸ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ 22 ಮಂದಿ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಬರೇಲಿ ಬೈಪಾಸ್ ಬಳಿ ನಡೆದಿದೆ.
ಮಧ್ಯರಾತ್ರಿ 1 ಗಂಟೆ ವೇಳೆಯಲ್ಲಿ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 22 ಮಂದಿ ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ನಂತರ ಬಸ್‍ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಮೃತರ ದೇಹಗಳು ಸುಟ್ಟು ಹೋಗಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
Advertisement
ಬರೇಲಿ ಮತು ಶಾಹ್‍ಜಹಾನ್‍ಪುರ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಹಂತದ ರಸ್ತೆಯಲ್ಲಿ ಘಟನೆ ನಡೆದಿದೆ. ಬಸ್ ಚಾಲಕನ ಅತೀ ವೇಗದ ಚಾಲನೆಯೇ ಘಟನೆಗೆ ಕಾರಣ ಎಂದು ವರದಿಯಾಗಿದೆ.
Advertisement
ಅಪಘಾತದ ನಂತರ ಬಸ್ಸಿನ ಡೀಸೆಲ್ ಟ್ಯಾಂಕ್ ಸ್ಫೋಟಗೊಂಡಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಬಸ್ ಪ್ರಯಾಣಿಕರು ನಿದ್ರೆಯಲ್ಲಿದ್ದಿದ್ದರಿಂದ ಅವರು ಬಸ್‍ನಿಂದ ಕೆಳಗಿಳಿಯುವ ಮುನ್ನವೇ ಬೆಂಕಿ ಆವರಿಸಿದೆ. ಕೆಲವರು ಕಿಟಕಿಯ ಮೂಲಕ ಬಸ್‍ನಿಂದ ಹೊರಗೆ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ವರದಿಯ ಪ್ರಕಾರ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರಲು ಸುಮಾರು ಒಂದೂವರೆ ಗಂಟೆ ಬೇಕಾಯ್ತು ಎನ್ನಲಾಗಿದೆ. ಡಿಕ್ಕಿಯಾದ ನಂತರ ಬಸ್ ಮತ್ತು ಟ್ರಕ್ ಎರಡಕ್ಕೂ ಬೆಂಕಿ ಹೊತ್ತಿಕೊಂಡಿದೆ.
Advertisement
ಅಗ್ನಿಶಾಮಕ ಸಿಬ್ಬಂದಿ ಎಷ್ಟು ಸಾಧ್ಯವೋ ಅಷ್ಟ ಬೇಗ ಸ್ಥಳಕ್ಕೆ ಧಾವಿಸಿದ್ರು. ಆದ್ರೆ ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ಬೆಂಕಿಯನ್ನು ನಿಯಂತ್ರಿಸಿ ಒಳಗೆ ಹೋಗಲು ಹರಸಾಹಸಪಡಬೇಕಾಯ್ತು ಎಂದು ಹಿರಿಯ ಅಧಿಕಾರಿ ಎಸ್‍ಕೆ ಭಗತ್ ತಿಳಿಸಿದ್ದಾರೆ.
Advertisement
ಉತ್ತರಪ್ರದೇಶ ರಾಜ್ಯ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ನವದೆಹಲಿಯಿಂದ ಉತ್ತರಪ್ರದೇಶದ ಗೊಂಡಾ ಜಿಲ್ಲೆಯ ಕಡೆಗೆ ಹೋಗುತ್ತಿತ್ತು ಎಂದು ವರದಿಯಾಗಿದೆ. ಬಸ್‍ನಲ್ಲಿ ಒಟ್ಟು ಎಷ್ಟು ಜನ ಇದ್ದರು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.
17 dead in a collision between truck and a bus in Uttar Pradesh's Bareilly; both the vehicles caught fire on collision pic.twitter.com/5KgpW8lMAQ
— ANI UP/Uttarakhand (@ANINewsUP) June 5, 2017