ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪುರಾಣ ಪ್ರಸಿದ್ಧ ಗೋಕರ್ಣ ದೇವಸ್ಥಾನವನ್ನ ದಕ್ಷಿಣ ಕಾಶಿ ಎಂದೇ ಕರೆಯುತ್ತಾರೆ. ಮಹಾಬಲೇಶ್ವರನ ದರ್ಶನಕ್ಕಾಗಿ ಪ್ರತಿನಿತ್ಯ ದೇಶ ವಿದೇಶದಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸುತ್ತಾರೆ. ಆದರೆ ಗೋಕರ್ಣ ದೇವಸ್ಥಾನ ಇತ್ತೀಚಿನ ದಿನದಲ್ಲಿ ವಿವಾದಗಳಿಂದಲೇ ಹೆಚ್ಚಿನ ಸುದ್ದಿಯಾಗುತ್ತಿದೆ. ಈ ಬಾರಿ ದೇವಸ್ಥಾನದ ಅನುವಂಶೀಯ ಅರ್ಚಕರು ತಮಗೆ ಪೂಜೆಗೆ ಅವಕಾಶ ಕೊಡಿ ಎಂದು ದೇವಸ್ಥಾನಕ್ಕೆ ಆಗಮಿಸಿದ್ದು, ಆಡಳಿತ ಮಂಡಳಿ ಅವಕಾಶ ನೀಡದೇ ಇರುವುದು ಅನುವಂಶೀಯ ಅರ್ಚಕರು ಪ್ರತಿಭಟನೆಗೆ ಇಳಿದಿದ್ದಾರೆ.
ದೇವಸ್ಥಾನದಲ್ಲಿ ತಮಗೆ ಪೂಜೆಗೆ ಅವಕಾಶ ನೀಡಿ ಎಂದು ಗೋಕರ್ಣದ ಸುಮಾರು 32 ಅನುವಂಶೀಯ ಅರ್ಚಕರು ಇಂದು ದೇವಸ್ಥಾನಕ್ಕೆ ಆಗಮಿಸಿದ್ದರು. ದೇವಸ್ಥಾನದ ನಿಯಮದ ಪ್ರಕಾರ ಆಡಳಿತ ಮಂಡಳಿಯವರ ಅನುಮತಿ ಪಡೆದು ಮಹಾಬಲೇಶ್ವರನ ಪೂಜೆಯನ್ನು ಮಾಡಬಹುದು. ನ್ಯಾಯಾಲಯ ಕೂಡ ಅನುವಂಶೀಯ ಅರ್ಚಕರಿಗೆ ಪೂಜೆ ಮಾಡಲು ಅವಕಾಶ ನೀಡಿದೆ ಎಂದು ಅರ್ಚಕರು ನ್ಯಾಯಾಲಯದ ಆದೇಶವನ್ನು ನೀಡಿದ್ದಾರೆ. ಆದರೆ ದೇವಸ್ಥಾನದ ಆಡಳಿತ ಮಂಡಳಿ ಮಾತ್ರ ಪೂಜೆಗೆ ಅವಕಾಶ ನೀಡಿರಲಿಲ್ಲ. ಹೀಗಾಗಿ ಅನುವಂಶೀಯ ಅರ್ಚಕರು ದೇವಾಲಯದ ಆಡಳಿತ ಮಂಡಳಿ ಕಚೇರಿಯಲ್ಲಿ ಕುಳಿತು ಮೌನ ಪ್ರತಿಭಟನೆ ನಡೆಸುತ್ತಿದ್ದು, ಪರಿಣಾಮ ದೇವಸ್ಥಾನದಲ್ಲಿಯೇ ಪೊಲೀಸರು ಮೊಕ್ಕಾಂ ಹೂಡಿದ್ದಾರೆ.
Advertisement
Advertisement
ಆಡಳಿತ ಮಂಡಳಿಯ ಈ ನಡೆ ಅರ್ಚಕರ ನಡುವಿನ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದ್ದು, ಪೂಜೆಗೆ ಅವಕಾಶ ಕೊಡುವವರೆಗೂ ತಾವು ಎಲ್ಲಿಯೂ ಹೋಗುವುದಿಲ್ಲ ಎಂದು ದೇವಸ್ಥಾನದಲ್ಲಿಯೇ ಪ್ರತಿಭಟನೆ ನಡೆಸಿದ್ದಾರೆ. ಇತ್ತ ನ್ಯಾಯಾಲಯ ತಮಗೆ ಪೂಜೆಗೆ ಅವಕಾಶ ನೀಡಿದ್ದು, ಆಡಳಿತ ಮಂಡಳಿ ಸದಸ್ಯರು ನ್ಯಾಯಾಂಗ ನಿಂದನೆ ಮಾಡುತ್ತಿದ್ದಾರೆ ಎಂದು ಅರ್ಚಕರು ಆರೋಪಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ದೇವಸ್ಥಾನದ ಆಡಳಿತಾಧಿಕಾರಿ ಜಿಕೆ ಹೆಗಡೆ, ಪೂಜೆಗೆ ಸಂಬಂಧಿಸಿದಂತೆ ಈ ವಿಚಾರ ನ್ಯಾಯಾಲಯದಲ್ಲಿದ್ದು, ವಿಚಾರಣೆ ಹಂತದಲ್ಲಿ ಯಾವ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ನ್ಯಾಯಲಯದ ಕ್ರಮವನ್ನ ತಾವು ಅನುಸರಿಸಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.
Advertisement
ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಆಡಳಿತವನ್ನು ಹೊಸನಗರ ರಾಮಚಂದ್ರಾಪುರ ಮಠಕ್ಕೆ ನೀಡಿದ ಪರಿಣಾಮ ಅನುವಂಶೀಯ ಅರ್ಚಕರು ಹಾಗೂ ಆಡಳಿತ ಮಂಡಳಿ ನಡುವೆ ವಿವಾದಕ್ಕೆ ಕಾರಣವಾಗಿತ್ತು. ಆಡಳಿತ ಮಂಡಳಿಯವರು ತಮ್ಮ ಉಪಾದಿವಂತ ಮಂಡಳಕ್ಕೆ ಸೇರ್ಪಡೆಯಾಗಿ ಪೂಜೆ ಸಲ್ಲಿಸಬೇಕು ಇಲ್ಲದಿದ್ದರೆ ಅವಕಾಶ ಕೊಡುವುದಿಲ್ಲ ಎನ್ನುವ ಆದೇಶ ಹೊರಡಿಸಿದ್ದರು. ಅನುವಂಶೀಯ ಅರ್ಚಕರಿಗೆ ಪೂಜೆಯ ಹಕ್ಕು ಇದ್ದು ತಮಗೂ ಅವಕಾಶ ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದು ಕಳೆದ ಏಳೆಂಟು ವರ್ಷದಿಂದ ವಿವಾದ ನಡೆಯುತ್ತಲೇ ಬಂದಿದೆ.
Advertisement
ಸದ್ಯ ತಮಗೆ ಪೂಜೆಯ ಹಕ್ಕನ್ನ ನ್ಯಾಯಾಲಯ ನೀಡಿದ್ದು ಅವಕಾಶ ಕೊಡುವಂತೆ ಅನುವಂಶೀಯ ಅರ್ಚಕರು ಪಟ್ಟು ಹಿಡಿದಿದ್ದರೆ ಇತ್ತ ಪ್ರಕರಣ ನ್ಯಾಯಾಲಯದಲ್ಲಿದ್ದು ತಾವು ಯಾವುದೇ ಕ್ರಮಕ್ಕೆ ಮುಂದಾಗುವುದಿಲ್ಲ ಎಂದು ಆಡಳಿತ ಮಂಡಳಿಯವರು ಹೇಳಿದ್ದಾರೆ. ಈ ಸಂಬಂಧ ಅನುವಂಶೀಯ ಅರ್ಚಕರು ಮತ್ತೇ ನ್ಯಾಯಾಲಯದ ಮೆಟ್ಟಿಲೇರಲು ಮುಂದಾಗಿದ್ದಾರೆ.