ಬೆಂಗಳೂರು: ಕನ್ನಡಕ್ಕೆ ಹೊಸಾ ಅಲೆಯ ಸಿನಿಮಾಗಳು ಒಂದರ ಹಿಂದೊಂದರಂತೆ ಹರಿದು ಬರುತ್ತಿವೆ. ಅಂಥಾ ಸಿನಿಮಾಗಳೆಲ್ಲವೂ ಪ್ರೇಕ್ಷಕರ ಪ್ರೀತಿ ಪಡೆಯುವಲ್ಲಿಯೂ ಯಶ ಕಂಡಿವೆ. ಇದೀಗ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಗೆ ತಯಾರಾಗಿರುವ ‘ಉತ್ತಮರು’ ಚಿತ್ರ ಕೂಡಾ ಅದೇ ಹಾದಿಯಲ್ಲಿದೆ. ಇದೀಗ ಒಂದು ಚೆಂದದ ವೀಡಿಯೋ ಸಾಂಗ್ ಮೂಲಕ ಪ್ರೇಕ್ಷಕರನ್ನು ತಾಕಲು ‘ಉತ್ತಮರು’ ಯೋಜನೆ ಹಾಕಿಕೊಂಡಿದ್ದಾರೆ. ಅದರ ಭಾಗವಾಗಿಯೇ ಆ ವೀಡಿಯೋ ಸಾಂಗಿನ ಪ್ರೋಮೋ ಇದೀಗ ಬಿಡುಗಡೆಯಾಗಿದೆ.
ರೋಹಿತ್ ಶ್ರೀನಿವಾಸ್ ನಿರ್ದೇಶನದ ಜೊತೆಗೆ ಛಾಯಾಗ್ರಹಣದ ಜವಾಬ್ದಾರಿಯನ್ನೂ ಹೊತ್ತುಕೊಂಡು ರೂಪಿಸಿರುವ ಚಿತ್ರ ಉತ್ತಮರು. ಇದರ ಒಟ್ಟಾರೆ ಆಂತರ್ಯ, ಮತ್ತದರ ಸೊಗಸನ್ನು ಅನಾವರಣಗೊಳಿಸುವಂತೆ ಚಿತ್ರ ತಂಡ ವೀಡಿಯೋ ಸಾಂಗ್ ಒಂದನ್ನು ರೂಪಿಸಿದೆ. ಈ ಹಾಡಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಒದಗಿಸಿದ್ದಾರೆ. ಗಣೇಶ್ ನಾರಾಯಣ್ ಸಂಗೀತ ಸಂಯೋಜನೆಯಿರೋ ಈ ಹಾಡನ್ನು ದಿವ್ಯಾ ಕುಪ್ಪುಸ್ವಾಮಿ ಹಾಡಿದ್ದಾರೆ.
ಈ ಹಾಡಿನ ಬಗ್ಗೆ ಒಂದಷ್ಟು ವಿವರ ನೀಡುತ್ತಲೇ ಚಿತ್ರದ ಬಗ್ಗೆಯೂ ಕುತೂಹಲ ಹುಟ್ಟುವಂಥಾ ಒಂದಷ್ಟು ಅಂಶಗಳನ್ನು ಇದೀಗ ಬಿಡುಗಡೆಯಾಗಿರೋ ವೀಡಿಯೋ ಸಾಂಗ್ ಪ್ರೋಮೋ ಒಳಗೊಂಡಿದೆ. ಉತ್ತಮರು ಎಂಬ ವಿಶಿಷ್ಟವಾದ ಕಥಾ ಹಂದರದ ಈ ಚಿತ್ರವನ್ನು ಮಧು, ಮುಕುಂದರಾವ್, ಸತ್ಯನಾರಾಯಣ ಮತ್ತು ಆರ್ ಶ್ರೀನಿವಾಸ್ ನಿರ್ಮಾಣ ಮಾಡಿದ್ದಾರೆ. ಪ್ರತಾಪ್ ನಾರಾಯಣ್, ಕಡ್ಡಿಪುಡಿ ಚಂದ್ರು, ರಂಗಾಯಣ ರಘು, ಕೆ ಎಸ್ ಶ್ರೀಧರ್, ರಘುರಾಮ್, ಬಾಲಾ, ಬಿಂದು ರಕ್ಷಿದಿ, ಮೋಹನ್ ಸೇನಿ, ಶರತ್ ಮುಂತಾದವರ ತಾರಾಗಣ ಹೊಂದಿರೋ ಉತ್ತಮರಿಗೆ ಪಲ್ಲವಿ ರಾಜು ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ.
ಈ ಚಿತ್ರ ಚಿತ್ರೀಕರಣ ಆರಂಭಿಸಿದಂದಿನಿಂದಲೂ ಕ್ರಿಯೇಟಿವ್ ಪೋಸ್ಟರ್ ಸೇರಿದಂತೆ ನಾನಾ ರೀತಿಯಲ್ಲಿ ಗಮನ ಸೆಳೆಯುತ್ತಾ ಸಾಗಿ ಬಂದಿತ್ತು. ಅದರಲ್ಲಿಯೂ ಪಲ್ಲವಿ ರಾಜು ಈ ಮೂಲಕ ಮತ್ತೊಂದು ವಿಶಿಷ್ಟವಾದ ಪಾತ್ರದಲ್ಲಿ ಕಾಣಿಸಿಕೊಂಡಿರೋದೂ ಜಾಹೀರಾಗಿತ್ತು. ಇದೀಗ ಸಂಪೂರ್ಣವಾಗಿ ಉತ್ತಮರು ಚಿತ್ರೀಕರಣ ಮುಗಿಸಿಕೊಂಡಿದ್ದಾರೆ. ಶೀಘ್ರದಲ್ಲಿಯೇ ಒಂದು ವೀಡಿಯೋ ಸಾಂಗು ತೋರಿಸಿ ಅದರ ಬೆನ್ನಿಗೇ ಚಿತ್ರೀಕರಣದತ್ತ ಧಾವಿಸಲು ಉತ್ತಮರು ನಿರ್ಧರಿಸಿದ್ದಾರೆ.