– ಮಹಿಳಾ ಆಯೋಗವೇ ವರದಿ ಕೊಟ್ರೂ ಕಣ್ಮುಚ್ಚಿ ಕುಳಿತ ಸರ್ಕಾರ
ಕಲಬುರಗಿ: ವೈದ್ಯಕೀಯ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ತವರು ಜಿಲ್ಲೆಯಲ್ಲಿ ಗರ್ಭಕೋಶ ತೆಗೆಯುವ ದಂಧೆ ವ್ಯಾಪಕವಾಗಿ ನಡೆಯುತ್ತಿದೆ.ಕೆಲ ಖಾಸಗಿ ಆಸ್ಪತ್ರೆಗಳು ಈ ದಂಧೆಯಲ್ಲಿ ಶಾಮೀಲಾಗಿವೆ. ಖುದ್ದು ರಾಜ್ಯ ಮಹಿಳಾ ಆಯೋಗವೇ ಸರ್ಕಾರಕ್ಕೆ ವರದಿ ಸಲ್ಲಿಸಿ ತಿಂಗಳುಗಳು ಕಳೆದಿದೆ. ಆದ್ರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.
ಸಾಮಾನ್ಯವಾಗಿ ಮಹಿಳೆಯರಿಗೆ ಆರೋಗ್ಯ ಸಮಸ್ಯೆ ಆದ್ರೆ ಅವರ ಜೀವ ಕಾಪಾಡುವ ದೃಷ್ಟಿಯಿಂದ ಗರ್ಭಕೋಶ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ. ಆದ್ರೆ ಕಲಬುರಗಿ ಜಿಲ್ಲೆಯ ಕೆಲ ಖಾಸಗಿ ಆಸ್ಪತ್ರೆಗಳು ಇದನ್ನೇ ಬಂಡವಾಳ ಮಾಡಿಕೊಂಡಿದ್ದು, ಹೊಟ್ಟೆ ನೋವು ಹಾಗೂ ಬಿಳಿ ಮುಟ್ಟಿನ ಸಮಸ್ಯೆ ಎದುರಿಸುವ ಮಹಿಳೆಯರ ಗರ್ಭಕೋಶ ತೆಗೆಯುವ ದಂಧೆ ಮಾಡುತ್ತಿದ್ದಾರೆ.
Advertisement
Advertisement
ರಾಜ್ಯ ಮಹಿಳಾ ಆಯೋಗ 2015ರಲ್ಲಿ ಕೆ.ನೀಲಾ ನೇತೃತ್ವದಲ್ಲಿ 6 ಜನರ ತಂಡ ರಚಿಸಿ ಈ ಬಗ್ಗೆ ವರದಿ ನೀಡುವಂತೆ ಸೂಚಿಸಿತ್ತು. ಜಿಲ್ಲೆಯಾದ್ಯಂತ ಸಂಚರಿಸಿದ ತಂಡಕ್ಕೆ ಸಿಕ್ಕ ಮಾಹಿತಿ ನಿಜಕ್ಕೂ ಬೆಚ್ಚಿ ಬೀಳಿಸುತ್ತಿದ್ದು, 1 ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಬೇಕಾಬಿಟ್ಟಿ ಗರ್ಭಕೋಶ ತೆಗೆದಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
Advertisement
Advertisement
ಗರ್ಭಕೋಶ ತೆಗೆಯುವ ಅನಿವಾರ್ಯತೆ ಎದುರಾದ್ರೆ ಹಲವು ವೈದ್ಯಕೀಯ ಪರೀಕ್ಷೆ ನಡೆಸಬೇಕಾಗುತ್ತದೆ. ಆದರೆ ಕಲಬುರಗಿ ಜಿಲ್ಲೆಯ ಕೆಲ ಖಾಸಗಿ ಆಸ್ಪತ್ರೆಗಳು ಹಣಕ್ಕಾಗಿ ಗರ್ಭಕೋಶ ತೆಗೆಯುವ ದಂಧೆ ನಡೆಸುತ್ತಿವೆ. ಇದನ್ನರಿತ ಜಿಲ್ಲಾಡಳಿತ 4 ಆಸ್ಪತ್ರೆಗಳ ಲೈಸೆನ್ಸ್ ಕೂಡ ರದ್ದು ಮಾಡಿತ್ತು. ಇಷ್ಟಾದ್ರೂ ವೈದ್ಯರು ಬೇರೆ ಹೆಸರಿನಲ್ಲಿ ಲೈಸೆನ್ಸ್ ಪಡೆದು ಮತ್ತೆ ದಂಧೆ ಮಾಡ್ತಿದ್ದಾರೆ.
ಸಮಸ್ಯೆ ನಿವಾರಣೆಗೆ ಹೋಗುವ ಮಹಿಳೆಯರ ಗರ್ಭಕೋಶಕ್ಕೆ ಕತ್ತರಿ ಹಾಕಿ ದುಡ್ಡು ಮಾಡುವ ದಂಧೆಯನ್ನು ಆರೋಗ್ಯ ಇಲಾಖೆ ಮಟ್ಟ ಹಾಕಬೇಕಿದೆ. ಕಲಬುರಗಿ ಜಿಲ್ಲೆಯಲ್ಲಿ ಮಾತ್ರವಲ್ಲದೆ ಇನ್ನೂ ಬೇರೆ ಬೇರೆ ಜಿಲ್ಲೆಯಲ್ಲೂ ದಂಧೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.